'ಓಂ' ಸಿನಿಮಾಗೆ ಬೇರೆ ನಟಿ ಇರಲಿ ಎಂದಿದ್ದ ಪಾರ್ವತಮ್ಮ; ಕೊನೆಗೆ ಪ್ರೇಮಾ ಫಿಕ್ಸ್ ಆಗಿದ್ದೇಗೆ?
ಕನ್ನಡ ಚಿತ್ರರಂಗದಲ್ಲಿ 1995ರಲ್ಲಿ ತೆರೆಕಂಡಿದ್ದ ಓಂ ಸಿನಿಮಾ ಇಂದಿಗೂ ಎವರ್‌ಗ್ರೀನ್ ಹಿಟ್ ಸಿನಿಮಾಗಳ ಸಾಲಿನಲ್ಲಿದೆ. ಈ ಒಂದು ಸಿನಿಮಾ ನಟ ಶಿವರಾಜ್‌ಕುಮಾರ್, ನಟಿ ಪ್ರೇಮಾ ಹಾಗೂ ಉಪೇಂದ್ರ ಅವರಿಗೆ ತಿರುವು ನೀಡಿತ್ತು. ರೌಡಿಸಂ, ಲವ್ ಕಾಂಬಿನೇಷನ್‌ನಲ್ಲಿ ಮೂಡಿದ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹವಾ ಕ್ರಿಯೇಟ್ ಮಾಡಿತ್ತು. ಈ ಸಿನಿಮಾದಲ್ಲಿ ನಟಿ ಪ್ರೇಮಾ ಅವರ ಪಾತ್ರಕ್ಕೆ ನೋಡಿ ಫಿದಾ ಆಗಿದ್ದರು ಪ್ರೇಕ್ಷಕರು. ಆದರೆ ಈ ಸಿನಿಮಾದಲ್ಲಿ ಅಸಲಿಗೆ ಪ್ರೇಮಾ ಬದಲು ಆ ಖ್ಯಾತ ನಟಿಗೆ ಅವಕಾಶ ಕೊಡಿ ಎಂದು ಖುದ್ದಾಗಿ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಹೇಳಿದ್ದರಂತೆ. ಆದರೂ ಪ್ರೇಮಾ ಅವರೇ ಈ ಸಿನಿಮಾ ನಾಯಕಿಯಾಗಿದ್ದು ಹೇಗೆ? ಎನ್ನುವ ಕಥೆ ಇಲ್ಲಿದೆ ನೋಡಿ..
ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ನಟಿ ಪ್ರೇಮಾ ಅವರೇ ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದರು. 'ಅಣ್ಣಾವ್ರ ಜೊತೆ ಇದ್ದ ಚೆನ್ನ ಎಂಬ ಬಾಡಿಗಾರ್ಡ್ ನಮ್ಮ ಚಾಮರಾಜಪೇಟೆ ಮನೆಗೆ ಬರುತ್ತಿದ್ರು. ಆಗಲೇ ಅವರು ಓಂ ಸಿನಿಮಾದಲ್ಲಿ ನಿನಗೇ ಚಾನ್ಸ್ ಕೊಡಿಸುತ್ತೀನಿ, ಆ ಸಿನಿಮಾಗೇ ನಿನ್ನ ಹಾಕಿಸ್ತೀನಿ ಅಂತಿದ್ರು. ನಾನು ಆಗ ಏನ್ ಓಂ ಅದು ಅಂತಿದ್ದೆ. ಅವರೇ ರಾಜ್‌ಕುಮಾರ್ ಅವರ ಬಳಿ ನನ್ನ ವಿಚಾರ ಪ್ರಸ್ತಾಪಿಸುತ್ತಿದ್ದರು. ಆಗ ಅಣ್ಣಾವ್ರು ಸವ್ಯಸಾಚಿ ಸಾಂಗ್ ನೋಡಿ ಇಷ್ಟಪಟ್ಟಿದ್ರುʼ.

'ಅದೇ ವೇಳೆ ಉಪೇಂದ್ರ ಅವರೆಲ್ಲ ಈ ಸಿನಿಮಾ ಬಗ್ಗೆ ಚರ್ಚೆ ಮಾಡುವಾಗ ಪಾರ್ವತಮ್ಮ ರಾಜ್‌ಕುಮಾರ್ ಅವರು ನಟಿ ಸುಧಾರಾಣಿ ಅವರನ್ನ ಹಾಕೊಂಡು ಸಿನಿಮಾ ಮಾಡಿ ಅಂತ ಹೇಳಿದ್ರಂತೆ. ಆದರೆ ಆ ಪಾತ್ರಕ್ಕೆ ಅವರಿಗೆ ಚಾಮರಾಜಪೇಟೆ ಹುಡುಗಿನೇ ಬೇಕಿತ್ತು. ಹಾಗಾಗಿ ರಾಜ್‌ಕುಮಾರ್ ಅವರು ಬಂದು ಪ್ರೇಮಾ ಅವರನ್ನೇ ಹಾಕೊಳ್ಳಿ, ಬೇರೆ ಯಾರೂ ಬೇಡ ಅಂತ ಹೇಳಿದ್ರು. ಅವರೇ ಫೈನಲ್ ಮಾಡಿದ್ದು, ಆಗ ಎಲ್ರೂ ಗಪ್‌ಚುಕ್ ಆಗಿದ್ರು' ಎಂದು ಪ್ರೇಮಾ ನೆನೆದಿದ್ದಾರೆ.
'ಕಾಸ್ಟಿಂಗ್ ಕೌಚ್ ಆಗ ಇರಲಿಲ್ಲ'
'ಓಂ ಸಿನಿಮಾ ಹಿಟ್ ಆಗದೇ ಹೋಗಿದ್ರೆ, ನಾನು ಬೇರೆ ಯಾವುದಾದರೂ ಕೆಲಸಕ್ಕೆ ಹೋಗಬೇಕು ಅಂತ ನಿರ್ಧಾರ ಮಾಡಿದ್ದೆ. ಒಂದು ಕಾಲು ಇಲ್ಲಿ ಇನ್ನೊಂದು ಕಾಲು ಅಲ್ಲಿಡೋಕೆ ನಂಗೆ ಇಷ್ಟ ಇರಲಿಲ್ಲ. ಮೊದಲು ನಾನೊಬ್ಬ ನಟಿ ಅಂತ ಪ್ರೂವ್ ಮಾಡಿಕೊಳ್ಳಬೇಕು ಎಂದಿದ್ದಾರೆ. ಇನ್ನು ನಮಗೆಲ್ಲ ಕಾಸ್ಟಿಂಗ್ ಕೌಚ್ ಅಂದ್ರೆ ಗೊತ್ತಿರಲೇ ಇಲ್ಲ. ನಮ್ಮ ಕಾಲದಲ್ಲಿ ಅದೆಲ್ಲ ಇರಲೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಅದು ನಮಗೆ ಅರ್ಥವಾಗಿದ್ದು. ಯಾವ ನಿರ್ದೇಶಕರೂ ನನ್ನ ಆ ದೃಷ್ಟಿಯಲ್ಲಿ ಕೆಟ್ಟದಾಗಿ ನೋಡಲಿಲ್ಲ' ಎಂದು ಆ ದಿನಗಳ ಬಗ್ಗೆ ಮಾತನಾಡಿದ್ದಾರೆ.
'ನನಗೆ ವಿಷ್ಣುವರ್ಧನ್ ಅವರ ಜೊತೆ ಎಲ್ಲರಂತಲ್ಲ ನನ್ನ ಗಂಡ ಸಿನಿಮಾ ಮಾಡುವಾಗ ತುಂಬಾ ಭಯ ಆಗಿತ್ತು. ಆದರೆ ಅವರು ಸೆಟ್‌ನಲ್ಲಿ ತುಂಬಾ ಸಿಂಪಲ್ ಆಗಿದ್ರು, ಆಗ ನನಗೆ ಕಂಫರ್ಟ್ ಅನಿಸಿತು. ಎಷ್ಟು ಬೇಕೋ ಅಷ್ಟೇ ಮಾತನಾಡ್ತಿದ್ರು. ಈಗ ನಿರ್ದೇಶಕರು ಕಡಿಮೆ ಆಗಿದ್ದಾರೆ. ನನ್ನ ಪ್ರಕಾರ ಕಥೆಯೇ ನಿಜವಾದ ಹೀರೋ. ಸ್ಕ್ರಿಪ್ಟ್ ಚೆನ್ನಾಗಿದ್ರೆ ಮಾತ್ರ ನಾವು ಅದಕ್ಕೆ ತಕ್ಕಂತೆ ನಟಿಸಬಹುದು. ನಮ್ಮ ಕಾಲದಲ್ಲಿ ಒಳ್ಳೊಳ್ಳೆ ಕಥೆಗಾರರು ಇದ್ರು. ನಮಗೆ ಸೂಕ್ತವಾಗೋ ಕಥೆಯನ್ನೇ ಅವರೆಲ್ಲ ರೆಡಿ ಮಾಡ್ತಿದ್ರು. ಆದ್ರೆ ಈಗ ಅದೆಲ್ಲ ಕಾಣೆಯಾಗಿದೆ' ಎಂದು ಚಿತ್ರರಂಗದ ವಾಸ್ತವ ಹೇಳಿದ್ದಾರೆ ಪ್ರೇಮಾ.












Click it and Unblock the Notifications