Daali Dhananjay: ಫ್ಯಾನ್ಸ್ ಹೊಡೆದಾಡುವ ಅವಶ್ಯಕತೆ ಇಲ್ಲ, ನಿಮ್ಮ ಬದುಕು ಗಟ್ಟಿಯಾಗಿ ಕಟ್ಟಿಕೊಳ್ಳಿ: ನಟ ಡಾಲಿ ಧನಂಜಯ
ಸ್ಯಾಂಡಲ್‌ವುಡ್‌ನಲ್ಲಿ ನಟರಾದ ದರ್ಶನ್ ತೂಗುದೀಪ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ತಾರಕಕ್ಕೇರಿತ್ತು. ಡೆವಿಲ್ ಹಾಗೂ ಮಾರ್ಕ್ ಸಿನಿಮಾ ರಿಲೀಸ್ ಹೊತ್ತಲ್ಲೇ ಈ ಕಿತ್ತಾಟ ಜೋರಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಸುದೀಪ್ ಅವರು ಪ್ರತ್ಯೇಕ ವೇದಿಕೆಗಳಲ್ಲಿ ಆಡಿದ ಮಾತುಗಳು ಇದಕ್ಕೆ ಕಾರಣವಾಗಿತ್ತು. ಈ ಫ್ಯಾನ್ ವಾರ್ ಬಗ್ಗೆ ನಟ ಡಾಲಿ ಧನಂಜಯ್ ಮಾತನಾಡಿದ್ದು, ಇಬ್ಬರೂ ನಟರ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದಾರೆ.
ಒಂದು ಪಡೆ ಇದೆ, ಯುದ್ಧಕ್ಕೆ ನಾವೂ ರೆಡಿ ಎಂದು ಹುಬ್ಬಳ್ಳಿ ವೇದಿಕೆಯಲ್ಲಿ ತೊಡೆ ತಟ್ಟಿದ್ದರು ಕಿಚ್ಚ ಸುದೀಪ್. ಬಳಿಕ ವಿಜಯಲಕ್ಷ್ಮಿ ಅವರು ಮತ್ತೊಂದು ವೇದಿಕೆಯಲ್ಲಿ ದರ್ಶನ್ ಅವರು ಜೈಲಿನಲ್ಲಿದ್ದಾಗ ಅವರ ಬಗ್ಗೆ ಮಾತನಾಡ್ತಾರೆ, ಇಲ್ಲಿದ್ದಾಗ ಮಾತೇ ಬರಲ್ಲ ಎಂದು ಕೌಂಟರ್ ಕೊಟ್ಟಿದ್ದರು. ಆದರೆ ಸುದೀಪ್ ತಾನು ಹೇಳಿದ್ದು ಪೈರಸಿ ಬಗ್ಗೆ ಎಂದು ಸ್ಪಷ್ಟನೆ ನೀಡಿದರೂ, ಇದು ದರ್ಶನ್ ಅಭಿಮಾನಿಗಳು ಬೇರೆ ರೀತಿ ಅರ್ಥೈಸಿಕೊಂಡಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ದಚ್ಚು-ಕಿಚ್ಚನ ಅಭಿಮಾನಿಗಳ ನಡುವೆ ಕಿಚ್ಚು ಹೊತ್ತಿಕೊಂಡಿತು.

ಇದೇ ಭರದಲ್ಲಿ ಕೆಲವರು ವಿಜಯಲಕ್ಷ್ಮಿ ಅವರಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೆ ಪೊಲೀಸರಿಗೆ ದೂರು ಸಹ ನೀಡಿದರು. ಅತ್ತ ಸುದೀಪ್ ನನ್ನ ಹೆಸರು ಉಲ್ಲೇಖಿಸಿ ಹೇಳಿದ್ರೆ ವಿಜಯಲಕ್ಷ್ಮಿಅವರಿಗೆ ಉತ್ತರ ಕೊಡ್ತೀನಿ, ನಾನು ಪೈರಸಿ ಬಗ್ಗೆ ಮಾತನಾಡಿದ್ದು ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ ವಿಜಯಲಕ್ಷ್ಮಿ ಅವರು ಕ್ಲಾಸ್ ಫ್ಯಾನ್ಸ್ ಎಂದು ಉಲ್ಲೇಖಿಸಿದ್ದಕ್ಕೆ ತಿರುಗೇಟು ನೀಡಿದ್ದ ಕಿಚ್ಚ, ಕಪಾಳಕ್ಕೆ ಹೊಡೆದರೆ ನಾವು ಹೊಡೆಸಿಕೊಳ್ಳುವವರಲ್ಲ ಎಂದು ನೇರವಾಗಿ ಹೇಳಿದ್ದರು. ಹೀಗಾಗಿ ಇಬ್ಬರೂ ನಟರ ಅಭಿಮಾನಿಗಳ ನಡುವೆ ಕಚ್ಚಾಟ ಮುಂದುವರಿಯುತ್ತಲೇ ಇದೆ.
'ನಿಮ್ಮ ಬದುಕುಗಳು ತುಂಬಾ ದೊಡ್ಡದು'
ಈ ಫ್ಯಾನ್ ವಾರ್ ಬಗ್ಗೆ ಇತ್ತೀಚೆಗೆ ಬೆಳಗಾವಿಯಲ್ಲಿ ಮಾತನಾಡಿರುವ ನಟ ಡಾಲಿ, 'ಅಭಿಮಾನಿಗಳು ಸಿನಿಮಾಗಳನ್ನು ಆರಾಮಾಗಿ, ಖುಷಿಯಾಗಿ ನೋಡಿ. ಎಲ್ಲ ಕನ್ನಡ ಸಿನಿಮಾಗಳನ್ನು ನೋಡಿ. ನಿಮ್ಮ ನಿಮ್ಮ ಬದುಕುಗಳು ತುಂಬಾ ದೊಡ್ಡದು, ಅದನ್ನ ಗಟ್ಟಿಯಾಗಿ ಕಟ್ಟಿಕೊಳ್ಳಿ. ಅದಕ್ಕಿಂತ ಖುಷಿ ನಿಮ್ಮ ಸ್ಟಾರ್ ಹೀರೋಗಳಿಗೆ ಬೇರೆ ಇನ್ಯಾವುದೂ ಇರೋದಿಲ್ಲ' ಎಂದು ಬುದ್ಧಿವಾದ ಹೇಳಿದ್ದಾರೆ.

'ಎಲ್ಲರಿಗೂ ಅವರವರ ಬದುಕು ಇರುತ್ತೆ, ಅವರ ತಂದೆ ತಾಯಿ ಇರುತ್ತಾರೆ, ಕುಟುಂಬ ಇರುತ್ತೆ. ಇದೇ ಎಲ್ಲದಕ್ಕಿಂತ ಬಹಳ ದೊಡ್ಡದು. ಹಾಗಾಗಿ ಅಭಿಮಾನಿಗಳು ಹೊಡೆದಾಡುವ ಅವಶ್ಯಕತೆಯೇ ಇಲ್ಲ. ಆರಾಮಾಗಿ ಎಲ್ಲ ಚೆನ್ನಾಗಿ ಇದ್ಕೊಂಡು ಎಲ್ಲ ಸಿನಿಮಾವನ್ನು ಸೆಲೆಬ್ರೇಟ್ ಮಾಡಿ, ಇಷ್ಟ ಆದಾಗ ಹೇಳಿ, ಇಷ್ಟ ಆಗದಿದ್ರೂ ಹೇಳಿ, ತಪ್ಪಿದ್ದರೆ ತಿದ್ದಿಕೊಳ್ಳುತ್ತೀವಿ. ಎಲ್ಲರೂ ಚೆನ್ನಾಗಿರೋಣ' ಎಂದಿದ್ದಾರೆ.
ಒಟ್ಟಾರೆ ಬೂದಿಮುಚ್ಚಿದ ಕೆಂಡದಂತಿದ್ದ ಫ್ಯಾನ್ ವಾರ್‌ನ ಕಿಚ್ಚು ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಹೊತ್ತಿಕೊಂಡಿರುವುದಂತೂ ಸತ್ಯ. ಈ ಹಿಂದೆ ನಟಿ ರಮ್ಯಾ ಅವರಿಗೆ ಫ್ಯಾನ್ಸ್ ಅಶ್ಲೀಲ ಪದ ಬಳಕೆ ಮಾಡಿ ಕಾಮೆಂಟ್ ಮಾಡಿದ್ದರು. ಆಗ ರಮ್ಯಾ ಅವರು ಪೊಲೀಸರಿಗೆ ದೂರು ನೀಡಿ, ಹಲವರ ಬಂಧನವಾಗಿತ್ತು. ಈಗ ವಿಜಯಲಕ್ಷ್ಮಿ ದರ್ಶನ್ ಅವರಿಗೂ ಅದೇ ರೀತಿ ಅಶ್ಲೀಲ ಕಾಮೆಂಟ್ಸ್ ಮಾಡಲಾಗಿದ್ದು, ಪೊಲೀಸರ ಮೊರೆ ಹೋಗಿದ್ದಾರೆ. ಅಭಿಮಾನದ ಹೆಸರಲ್ಲಿ ಮಿತಿ ಮೀರುತ್ತಿರುವ ಕೆಲ ಅಂಧಾಭಿಮಾನಿಗಳು ಈ ಕಾನೂನು ಸಂಕಷ್ಟ ಎದುರಿಸುವ ಹಂತಕ್ಕೆ ತಲುಪಿದೆ.












Click it and Unblock the Notifications