ಹಣಕ್ಕಾಗಿ ಅಶ್ಲೀಲ ಸಿನಿಮಾಗಳಲ್ಲಿ ನಟಿಸಿದ ಮಿಸ್ ಇಂಡಿಯಾ, ಬಿಗ್‌ಬಾಸ್ ಖ್ಯಾತಿಯ ನಟಿ, ಕೇಸ್ ದಾಖಲು!
ಮಿಸ್ ಇಂಡಿಯಾ, ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಖ್ಯಾತ ನಟಿಯೊಬ್ಬರು ಹಣದ ಆಸೆಗಾಗಿ ಅಶ್ಲೀಲ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರ್ಥಿಕ ಲಾಭಕ್ಕಾಗಿ ಸಿನಿಮಾಗಳು ಹಾಗೂ ಜಾಹೀರಾತುಗಳಲ್ಲಿ ಅಶ್ಲೀಲ ವಿಷಯವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮಲಯಾಳಂ ನಟಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಶ್ವೇತಾ ಮೆನನ್ ವಿರುದ್ಧ ಈ ದೂರು ದಾಖಲಾಗಿದ್ದು, ಅವರು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೊಚ್ಚಿಯಲ್ಲಿ ಎರ್ನಾಕುಲಂ ಸೆಂಟ್ರಲ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮಲಯಾಳಂ ನಟಿ ಶ್ವೇತಾ ಮೆನನ್ ಅವರ ಹೆಸರು ಉಲ್ಲೇಖಿಸಲಾಗಿದೆ.
ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಅಜಯ್ ದೇವಗನ್ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲಿಯೂ ಶ್ವೇತಾ ಮಿಂಚಿದ್ದಾರೆ. ಇದಲ್ಲದೆ ಮಲಯಾಳಂ ಸೇರಿದ ಪ್ರಾದೇಶಿಕ ಚಲನಚಿತ್ರಗಳಲ್ಲಿಯೂ ತಮ್ಮ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮೆನಚೇರಿ ಅವರು ನಟಿ ವಿರುದ್ಧ ದೂರು ದಾಖಲಿಸಿದ್ದಾರೆ. ಎರ್ನಾಕುಲಂ ಕೇಂದ್ರ ಪೊಲೀಸರು ಜಾಮೀನು ರಹಿತ ವಿಭಾಗದ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಆರ್ಥಿಕ ಲಾಭಕ್ಕಾಗಿ ಚಲನಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಅಶ್ಲೀಲ ವಿಷಯವನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಹೊತ್ತಿದ್ದಾರೆ.

ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಅವರು ಅಶ್ಲೀಲ ಚಲನಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದ್ದು, ಶ್ವೇತಾ ಮೆನನ್ ವಯಸ್ಕರ ವೆಬ್‌ಸೈಟ್‌ಗಳ ಮೂಲಕ ಅಶ್ಲೀಲ ದೃಶ್ಯಗಳ ವ್ಯಾಪಾರ ಮತ್ತು ವಿತರಣೆಯಲ್ಲಿ ಭಾಗಿಯಾಗಿದ್ದಾರೆ. ಅಂತಹ ವಿಷಯವನ್ನು ಪ್ರಚಾರ ಮಾಡುವ ಮೂಲಕ ಹಣ ಗಳಿಸಲು ಅವರು ಚಲನಚಿತ್ರಗಳಲ್ಲಿನ ತಮ್ಮ ಪಾತ್ರಗಳನ್ನು ಬಳಸಿಕೊಂಡಿದ್ದಾರೆ ಮತ್ತು ಈ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮ ಮತ್ತು ವಯಸ್ಕರ ಸೈಟ್‌ಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಶ್ಲೀಲ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದರೊಂದಿಗೆ ವ್ಯವಹರಿಸುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಲಯಾಳಂ ಚಲನಚಿತ್ರ ಕಲಾವಿದರ ಸಂಘವಾದ "ಅಮ್ಮಾ"ದಲ್ಲಿ ಶ್ವೇತಾ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಹೊತ್ತಲ್ಲೇ ಅವರ ಮೇಲೆ ಈ ಆರೋಪ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ.
ಮಿಸ್ ಇಂಡಿಯಾದಲ್ಲಿ ಮಿಂಚಿದ್ದ ಶ್ವೇತಾ
ಶ್ವೇತಾ ಅವರು 1994ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸುಶ್ಮಿತಾ ಸೇನ್, ಐಶ್ವರ್ಯಾ ರೈ ಮತ್ತು ಫ್ರಾನ್ಸೆಸ್ಕಾ ಹಾರ್ಟ್ ನಂತರ ಶ್ವೇತಾ ಮೂರನೇ ರನ್ನರ್ ಅಪ್ ಆಗಿ ಸ್ಥಾನ ಪಡೆದಿದ್ದರು. ಮಲಯಾಳಂನ ವಿವಿಧ ಚಲನಚಿತ್ರಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಶ್ವೇತಾ ಮೆನನ್ ಜನಪ್ರಿಯತೆ ಪಡೆದಿದ್ದರು. ಅವರು ಈ ಹಿಂದೆ ಕೊನೆಯ ಬಾರಿಗೆ ಬಾದಲ್ ಚಿತ್ರದಲ್ಲಿ ಕಾಣಿಸಿಕೊಂಡರು. ಇನ್ನು ತಮ್ಮ ಮೇಲಿನ ಈ ಆರೋಪಗಳ ಕುರಿತು ನಟಿ ಇನ್ನೂ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದರೆ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ವಿಚಾರಣೆಗೆ ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ತಡೆ ನೀಡಿದೆ.












Click it and Unblock the Notifications