ಸ್ಟಾರ್ ನಟನ ಸಿನಿಮಾ ಶೂಟಿಂಗ್ ವೇಳೆ 'ಮಿಲನ' ನಟಿ ಪಾರ್ವತಿಗೆ ಕೆಟ್ಟ ಅನುಭವ
ನಟ ಪುನೀತ್ ರಾಜ್‌ಕುಮಾರ್ ಅವರ 'ಮಿಲನ' ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಪಾರ್ವತಿ ತಿರುವೊತ್ತು (Parvathy Thiruvothu), ಕನ್ನಡದ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರೂ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಮೂಲತಃ ಮಲಯಾಳಂ ಚಿತ್ರರಂಗದವರಾದ ಪಾರ್ವತಿ, ಚಿತ್ರರಂಗದಲ್ಲಿ ತಮಗೆ ಆದ ಕಹಿ ಅನುಭವವೊಂದನ್ನು ಬಹಿರಂಗಪಡಿಸಿದ್ದಾರೆ. ಸ್ಟಾರ್ ನಟನ ಸಿನಿಮಾ ಶೂಟಿಂಗ್ ವೇಳೆ ಈ ಘಟನೆ ನಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಕನ್ನಡದ ಸೂಪರ್‌ಹಿಟ್ ಸಿನಿಮಾ 'ಮಿಲನ' ನಟಿಯೆಂದೇ ಪ್ರೇಕ್ಷಕರಿಗೂ ಪರಿಚಿತರಾಗಿರುವ ಪಾವರ್ತಿ ಅವರು ಚಿತ್ರರಂಗದಲ್ಲಿರುವ ಸಂವೇದನಾಶೀಲವಲ್ಲದ ಕೆಲಸದ ವಾತಾವರಣದ ಬಗ್ಗೆ ಆತಂಕಕಾರಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಾನು ತಮಿಳು ಖ್ಯಾತ ನಟ ಧನುಷ್ ಅಭಿನಯದ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆ ಬಿಚ್ಚಿಟ್ಟಿದ್ದಾರೆ. ಅವರ ಮಾತುಗಳು ಮಹಿಳಾ ಕಲಾವಿದರ ಸುರಕ್ಷತೆ, ಆರೋಗ್ಯ ಮತ್ತು ಗೌರವದ ಬಗ್ಗೆ ಚರ್ಚೆಗೆ ಗ್ರಾಸವಾಗಿವೆ.

'ಪಿರಿಯಡ್ಸ್ ಆಗಿದ್ರೂ ಕೇಳಲಿಲ್ಲ'
'ನಟಿ ಪಾರ್ವತಿ ಹೇಳುವಂತೆ, ಆ ಚಿತ್ರದ ಶೂಟಿಂಗ್ ಸಮಯದಲ್ಲಿ ಒಂದು ದೃಶ್ಯಕ್ಕಾಗಿ ದಿನವಿಡೀ ತಮ್ಮ ಮೇಲೆ ನಿರಂತರವಾಗಿ ನೀರನ್ನು ಸುರಿಯಲಾಗುತ್ತಿತ್ತು. ಈ ವೇಳೆ ತಾವು ಮಾಸಿಕ ಋತುಚಕ್ರ (ಪಿರಿಯಡ್ಸ್) ಎದುರಿಸಿದ್ದರಿಂದ ತೀವ್ರ ಮುಜುಗರ ಉಂಟು ಮಾಡಿತ್ತು ಎಂದಿದ್ದಾರೆ. ಅದಕ್ಕಿಂತಲೂ ಕಷ್ಟಕರ ಸಂಗತಿ ಎಂದರೆ, ಆ ದಿನಕ್ಕೆ ಅವರು ಹೆಚ್ಚುವರಿ ಬಟ್ಟೆಗಳನ್ನು ತಂದುಕೊಂಡಿರಲಿಲ್ಲ' ಎಂದು ವಿವರಿಸಿದ್ದಾರೆ.
'ಕೋಪದಿಂದ ಜೋರಾಗಿ ಕೂಗಿದೆ'
'ಈ ಬಗ್ಗೆ ಸಿನಿಮಾ ನಿರ್ದೇಶಕರ ಬಳಿ ತಮ್ಮ ಸಮಸ್ಯೆ ತಿಳಿಸಿ, ಹೋಟೆಲ್‌ಗೆ ಹೋಗಿ ಬಟ್ಟೆ ಬದಲಿಸಿ ಬರಲು ಅನುಮತಿ ಕೇಳಿದೆ. ಆದರೆ, ಅವರು ಸಮಯವಿಲ್ಲ, ಶೂಟಿಂಗ್ ತಕ್ಷಣ ಮುಗಿಸಬೇಕು ಎಂದು ಹೇಳಿ ನಿರ್ದೇಶಕರು ಗದರಿದ್ದರು ಎಂದು ಪಾರ್ವತಿ ತಮ್ಮ ಕೆಟ್ಟ ಅನುಭವ ವಿವರಿಸಿದ್ದಾರೆ. ಅಲ್ಲದೆ ಈ ಘಟನೆಯಿಂದ ನಾನು ಅಸ್ವಸ್ಥತೆ ಮತ್ತು ಅಸಹಾಯತೆ ಅನುಭವಿಸಿದ್ದಾಗಿ ಹೇಳಿದ್ದಾರೆ. ಆ ಸೆಟ್‌ನಲ್ಲಿ ಮಹಿಳೆಯರು ಕೆಲವೇ ಮಂದಿ ಇದ್ದರು. ಕೊನೆಗೆ ಸಹಿಸಲಾಗದೆ, ಕೋಪ ಮತ್ತು ನೋವಿನಿಂದ "ನನಗೆ ಪಿರಿಯಡ್ಸ್ ಆಗಿದೆ!" ಎಂದು ಜೋರಾಗಿ ಕೂಗಬೇಕಾದ ಪರಿಸ್ಥಿತಿ ಎದುರಾಯಿತು' ಎಂದಿದ್ದಾರೆ.
ಈ ಘಟನೆ ಕುರಿತು ಮಾತನಾಡುತ್ತಾ, 'ಸಮಾಜದಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಪಿರಿಯಡ್ಸ್ ವಿಷಯವನ್ನು ಅಡಗಿಸಿಕೊಳ್ಳಬೇಕಾದ ಪರಿಸ್ಥಿತಿ ಇನ್ನೂ ಮುಂದುವರಿದಿದೆ. ಇದು ಏಕೆ ಎಂದು ಪ್ರಶ್ನಿಸಿದ್ದಾರೆ. ಪಿರಿಯಡ್ಸ್ ಒಂದು ಸಹಜ ಪ್ರಕ್ರಿಯೆ. ಆದರೆ ಅದನ್ನು ಹೇಳಲು ಹೆದರಬೇಕಾದ ಅಥವಾ ನಾಚಿಕೆಪಡಬೇಕಾದ ವಾತಾವರಣ ಇನ್ನೂ ಇದೆ. ಅನೇಕ ಮಹಿಳೆಯರು ಭಯದಿಂದ ತಮ್ಮ ದೈಹಿಕ ಸಮಸ್ಯೆಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಾರೆ. ಇದು ಚಿತ್ರರಂಗದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ಕೆಲಸದ ಸ್ಥಳಗಳಲ್ಲಿ ಇರುವ ದೊಡ್ಡ ಸಮಸ್ಯೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಟಿಯ ಈ ಬಹಿರಂಗ ಹೇಳಿಕೆ, ಚಿತ್ರರಂಗದಲ್ಲಿ ಮಹಿಳಾ ಸ್ನೇಹಿ ವಾತಾವರಣ, ಆರೋಗ್ಯ ಸಂಬಂಧಿತ ಸಂವೇದನೆ ಮತ್ತು ಗೌರವಪೂರ್ಣ ಕೆಲಸದ ವಾತಾವರಣ ಎಷ್ಟು ಅಗತ್ಯ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ಪಾರ್ವತಿ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಅವರ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. ಜೊತೆಗೆ, ಮಹಿಳೆಯರ ಆರೋಗ್ಯ ಮತ್ತು ಗೌರವಕ್ಕೆ ಸಂಬಂಧಿಸಿದಂತೆ ಚಿತ್ರರಂಗ ಇನ್ನಷ್ಟು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.












Click it and Unblock the Notifications