ಮನೆಯಲ್ಲೇ ನನಗೆ ಕಿರುಕುಳ ಹೆಚ್ಚಾಗಿದೆ, ದಯವಿಟ್ಟು ಕಾಪಾಡಿ: ಕಣ್ಣೀರಿಟ್ಟ ಮೀಟೂ ನಟಿ!
ಖ್ಯಾತ ನಟಿ ತನುಶ್ರೀ ದತ್ತಾ (Tanushree Dutta) ಅವರು ಮೀಟೂ (MeToo) ವಿರುದ್ಧ ಧ್ವನಿ ಎತ್ತಿ ಎಲ್ಲೆಡೆ ಸುದ್ದಿಯಾಗಿದ್ದರು. ಇದೀಗ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ. ತನುಶ್ರೀ ದತ್ತಾ ಅವರಿಗೆ ತಮ್ಮ ಮನೆಯಲ್ಲೇ ಕಿರುಕುಳ, ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಭಾವನಾತ್ಮಕ ವೀಡಿಯೊ ಹಂಚಿಕೊಂಡು ದುಃಖಿತರಾಗಿದ್ದು, ಕಣ್ಣೀರಿಡುತ್ತಲೇ ತಮ್ಮ ಸ್ವಂತ ಮನೆಯೊಳಗೆ ಕಿರುಕುಳಕ್ಕೆ ಒಳಗಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
2018ರಲ್ಲಿ ಮೀಟೂ ವಿರುದ್ಧ ಹೋರಾಟದ ನಂತರ ತನ್ನ ಮನೆಯಲ್ಲಿಯೇ ಹಲ್ಲೆ, ಅವಮಾನ, ಕಿರುಕುಳ ಅನುಭವಿಸುತ್ತಿರುವುದಾಗಿ ನೋವು ಹಂಚಿಕೊಂಡಿದ್ದಾರೆ. ನಾನು ನನ್ನ ಮನೆಯಲ್ಲೇ ಅವಮಾನಕ್ಕೆ ಒಳಗಾಗುತ್ತಿದ್ದೇನೆ. ನನ್ನ ಆರೋಗ್ಯ ತುಂಬಾ ಹದಗೆಟ್ಟಿದೆ. ಕಳೆದ 4-5 ವರ್ಷಗಳಿಂದ ನಾನು ಸಾಕಷ್ಟು ಕಿರುಕುಳಕ್ಕೆ ಒಳಗಾಗಿದ್ದರಿಂದ ನನ್ನ ಆರೋಗ್ಯ ಹಾಳಾಗಿದೆ. ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನನ್ನ ಮನೆಯಲ್ಲಿ ಕೂಡ ಗೊಂದಲವಿದೆ ಎಂದು ಅವರು ತಮ್ಮ ನೋವನ್ನು ವಿವರಿಸಿದ್ದಾರೆ.

ನಮ್ಮ ಮನೆ ಕೆಲಸಕ್ಕೆ ಬಂದವರು ಕಳ್ಳತನ ಸೇರಿದಂತೆ ಇತರೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಈ ಬಗ್ಗೆ ಹಲವು ಬಾರಿ ಬಿಲ್ಡಿಂಗ್ ಮ್ಯಾನೇಜ್ಮೆಂಟ್‌ಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಹಾಡು ಮತ್ತು ಜಪ ಮಾಡಿ ಮನಸ್ಸನ್ನು ಶಾಂತವಾಗಿಡುವುದರಲ್ಲಿಯೇ ನಾನು ನನ್ನ ಸಮಯ ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಈ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಇದು 2018ರಿಂದಲೂ ನಡೆಯುತ್ತಿದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಪೊಲೀಸ್ ಠಾಣೆಗೆ ಹೋಗಲು ಆಗ್ತಿಲ್ಲ
ನನ್ನ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ನಾನು ಈಗಷ್ಟೇ ಪೊಲೀಸರಿಗೆ ಕರೆ ಮಾಡಿದೆ. ಅವರು ದೂರು ನೀಡಲು ಪೊಲೀಸ್ ಠಾಣೆಗೆ ಬರುವಂತೆ ಹೇಳಿದರು. ನಾನು ಬಹುಶಃ ನಾಳೆ ಅಥವಾ ನಂತರ ಹೋಗುತ್ತೇನೆ. ನನ್ನ ಸದ್ಯದ ಸ್ಥಿತಿ ಸರಿ ಇಲ್ಲ. ಅನ್ಯಾಯ ನಡೆಯುವುದಕ್ಕೆ ಮೊದಲು ಏನೋ ಒಂದು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆದ ನಂತರ, ಹಲವರು ಇದು ಉದ್ದೇಶಪೂರ್ವಕವಾಗಿ ಸುದ್ದಿಯಾಗಲು ಮಾಡಿದ್ದಾರೆ ಎಂದು ಟೀಕಿಸಿದ್ದರು. ಇದಕ್ಕೆ ಖಾರವಾಗಿ ಉತ್ತರಿಸಿರುವ ತನುಶ್ರೀ, ಈ ಪೋಸ್ಟ್‌ನಲ್ಲಿ ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಖುದ್ದು ಅಸ್ವಸ್ಥ ಮನೋಭಾವನೆ ಇದ್ದವರಷ್ಟೇ ಆರೋಪ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
"ಆಶಿಕ್ ಬನಾಯಾ ಆಪ್ನೆ", "ಚಾಕೊಲೇಟ್" ಸಿನಿಮಾಗಳಲ್ಲಿ ನಟಿಸಿರುವ ತನುಶ್ರೀ ದತ್ತಾ, ಈ ಹಿಂದೆ ಮೀಟೂ ಚಳವಳಿಯ ಸಂದರ್ಭದಲ್ಲಿ, ಮುಖ್ಯವಾಗಿ ನಾನಾ ಪಾಟೇಕರ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳಿಂದ ಸುದ್ದಿಯಾಗಿದ್ದರು. 2018ರಲ್ಲಿ, ನಟಿ ಪಾಟೇಕರ್ ಮತ್ತು ಇತರ ಮೂವರು ಸಿನಿಮಾ ಸೆಟ್‌ನಲ್ಲಿ ತಮ್ಮ ಮೇಲೆ ಕಿರುಕುಳ ಮತ್ತು ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪ ಮಾಡಿದ್ದರು. ಆಗ ಮೀಟೂ ಅಭಿಯಾನ ಸಂಚಲನ ಸೃಷ್ಟಿಸಿತ್ತು. ತನುಶ್ರೀ ದತ್ತಾ ಬಳಿಕ ಹಲವಾರು ಮಹಿಳೆಯರು ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದ ಕಥೆಗಳನ್ನು ಹೇಳಿಕೊಂಡು ಮುಂದೆ ಬಂದರು.












Click it and Unblock the Notifications