ನಮಗ್ಯಾರು ದಿಕ್ಕು..ನಾವಾದ ಮೇಲೆ ಅವನಿಗೆ ಯಾರು ದಿಕ್ಕು: ಮೌನ ಮುರಿದ ಮಾಳವಿಕಾ ಅವಿನಾಶ್
ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಹಾಗೂ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರು ಈಗಾಗಲೇ ತಮ್ಮ ಪುತ್ರನ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಕಳೆದ ಹದಿನೆಂಟು ವರ್ಷಗಳಿಂದ ಮಗನನ್ನು ಬಹಳ ಆತ್ಮವಿಶ್ವಾಸದಿಂದ ಬೆಳೆಸಿದ್ದ ಮಾಳವಿಕಾ ಅವಿನಾಶ್ ಅವರಿಗೆ ಈಗ ಒಂದು ಅಳುಕು ಕಾಡುತ್ತಿದೆ. ಜೀವನದ ಮಧ್ಯದ ಘಟ್ಟದಲ್ಲಿರುವ ಅವರು ಈಗ ತಮ್ಮನ್ನು ಕಾಡುತ್ತಿರುವ ಯೋಚನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹೊಸ ದಿಗಂತ ಯೂಟ್ಯೂಬ್ ವಾಹಿನಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಮಗೆ ಮದುವೆಯಾದ ತಕ್ಷಣ ನನ್ನ ಮಗ ಹುಟ್ಟಲಿಲ್ಲ. ಒಂದಷ್ಟು ವರ್ಷಗಳು ಇಬ್ಬರೂ ಕೆಲಸ ಮಾಡುತ್ತಿದ್ದೆವು. ಯಾವುದೋ ಒಂದು ಹಂತದಲ್ಲಿ ಕೆಲಸಕ್ಕೆ ಬ್ರೇಕ್ ಕೊಟ್ಟು ಮಗು ಆಗಲಿ ಅಂತಾ ಅನಿಸಿತು. ನಾನು ಗರ್ಭಿಣಿಯಾಗಿದ್ದಾಗ ಅವನಿಗೆ ಸಮಸ್ಯೆ ಇರುವುದು ಗೊತ್ತಾಗಲಿಲ್ಲ. ಐದು ತಿಂಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಒಂದು ಸ್ಕ್ಯಾನಿಂಗ್ ಮಾಡುತ್ತಾರೆ. ಆ ಪರೀಕ್ಷೆಯಲ್ಲಿ ಆ ಮಗುವಿನ ಬೆಳವಣಿಗೆ, ಸಮಸ್ಯೆ ಇದರ ಬಗ್ಗೆಯಲ್ಲಾ ಗೊತ್ತಾಗುತ್ತದೆ. ಆಗ ನಿಮಗೆ ಆ ಮಗುವನ್ನು ಇಟ್ಟುಕೊಳ್ಳಬೇಕಾ? ಬೇಡವಾ ಎನ್ನುವ ಆಯ್ಕೆ ಇರುತ್ತದೆ. ಆದರೆ ನಮಗೆ ಆ ಟೆಸ್ಟ್ ಮಾಡಿಸಿದರೂ ಡಾಕ್ಟರ್ ಏನೂ ಹೇಳಲಿಲ್ಲ' ಎಂದರು.

'ಅವನು ಪ್ರೀ ಮೆಚ್ಯುರ್ ಮಗು. 33 ಅಥವಾ 34ನೇ ವಾರಕ್ಕೆ ಹುಟ್ಟಿದ ಮಗು. ಪ್ರೀ ಮೆಚ್ಯುರ್ ಮಕ್ಕಳಿಗೆ ಅಂತಾನೇ ಕೆಲವು ಸಮಸ್ಯೆಗಳು ಇರುತ್ತದೆ. ಅವರು ಗಾತ್ರದಲ್ಲಿ ಚಿಕ್ಕದಾಗಿರುತ್ತಾರೆ. ತೂಕ ಇರಲ್ಲ. ನನ್ನ ಮಗ ಒಂದೂವರೆ ಕೆಜಿ ಇದ್ದ ಅನಿಸುತ್ತದೆ. ಮಗು ಆಗಿ ಒಂದು ಹದಿನೈದು ದಿನ ಆ ಮಗುವನ್ನು ನನ್ನ ಕಣ್ಣಿಗೆ ತೋರಿಸಲಿಲ್ಲ. ಆಗ ಮಗು ಸರಿ ಇಲ್ಲ ಅಂತಾ ಗೊತ್ತಾಗಿತ್ತು. ಆದರೆ ಏನು ಅಂತಾ ಗೊತ್ತಾಗಲಿಲ್ಲ. ಅವನು ಮಲಗಿದ್ದನ್ನು ನೋಡಿ ಯಾವುದೋ ಯೋಗಿ ಮಲಗಿದಂತೆ ಇದೆ ಎಂದು ಎಲ್ಲರೂ ಬಂದು ಹೇಳುತ್ತಿದ್ದರು. ಯೋಗಿ ರೀತಿ ಅಂದಾಗಲೂ ನನಗೆ ಅರ್ಥವಾಗಲಿಲ್ಲ'.
ಬೆಳೆಯುತ್ತಾ ಬೆಳೆಯುತ್ತಾ ಅವನ ಬೆಳವಣಿಗೆ ಕುಂಠಿತವಾಗುವುದನ್ನು ನೋಡಿ ಗೊತ್ತಾಯ್ತು. ಇಲ್ಲಿ ಏನೋ ಸಮಸ್ಯೆ ಇದೆ ಎಂದು. ಅವನಿಗೆ ಮೂರು ತಿಂಗಳು ಇದ್ದಾಗ ನ್ಯುಮೋನಿಯಾ ಬಂತು. ಅವನು ಬದುಕಲ್ಲ ಎನ್ನುವಂತಹ ಪರಿಸ್ಥಿತಿ ಬಂತು. ಆದರೆ ಬದುಕಿದ. ಅವನಿಗೆ ಹಾಲುಣಿಸುವುದು ತುಂಬಾ ಕಷ್ಟದ ಕೆಲಸ. ತುಂಬಾ ಕಡಿಮೆ ಪ್ರಮಾಣದಲ್ಲಿ ಹಾಲು ಕೊಡಬೇಕಾಗಿತ್ತು. ನಮಗೆ ಸುಧಾರಿಸಿಕೊಳ್ಳಲು ನಾಲ್ಕೈದು ವರ್ಷಗಳು ಆಗಿ ಹೋಯ್ತು.
'ಅದರ ಜೊತೆಗೆ ಅವನಿಗೆ ಮೂರ್ಛೆ ರೋಗ ಬರಲು ಶುರುವಾಯಿತು. ಪ್ರತಿ ತಿಂಗಳು ಎರಡು ಸಲ ಹಾಗೇ ಆಗುತ್ತಿತ್ತು. ಆ ಸಮಯದಲ್ಲಿ ನಮಗೆ ಅದರ ಯಾವುದರ ಪರಿಚಯ ಕೂಡ ಇರಲಿಲ್ಲ. ಮೂರ್ಛೆ ರೋಗ ಬಂದಾಗ ಅವನಿಗೆ ಏನಾಗುತ್ತಿತ್ತು ಅಂತಾ ನಮಗೆ ಗೊತ್ತಾಗುತ್ತಿರಲಿಲ್ಲ. ಅದೆಲ್ಲಾ ಮೆದುಳಿನ ಬೆಳವಣಿಗೆಯನ್ನು ಕುಂಠಿತ ಮಾಡಿತು. ನಾವು ಎಷ್ಟೇ ಶಿಕ್ಷಣವಂತರಾದರೂ ಇಂತಹ ವಿಚಾರಗಳು ಗೊತ್ತಿರುವುದಿಲ್ಲ. ಮೊದಲೇ ಅನುಭವ ಇದ್ದಿದ್ದರೆ ಗೊತ್ತಾಗುತ್ತಿತ್ತು. ಮನೆಯಲ್ಲಿ ಮೊದಲೇ ಆ ರೀತಿಯ ಮಗು ಇದ್ದಿದ್ದರೂ ಸಹ ಗೊತ್ತಾಗುತ್ತಿತ್ತು' ಎಂದು ಹೇಳಿದರು.

'ಇವನಿಗೆ ಇರುವ ನಿಜವಾದ ಸಮಸ್ಯೆ ಏನು ಅಂತಾ ಡಾಕ್ಟರ್‌ಗೆ ಗೊತ್ತಾಗಲು ಹತ್ತು ವರ್ಷ ಬೇಕಾಯಿತು. ಯಾಕೆಂದರೆ ಅವನು ನೋಡಲು ತುಂಬಾ ಸಾಮಾನ್ಯವಾಗಿರುತ್ತಾನೆ. ಏನೂ ಗೊತ್ತಾಗುವುದಿಲ್ಲ. ಅವನನ್ನು ನೋಡಿದರೆ ಒಂದು ಸುಂದರವಾದ ಮಗು ಅನಿಸುತ್ತದೆ ವಿನಃ ಈ ರೀತಿಯ ಸಮಸ್ಯೆ ಇರುವ ಮಗು ಎಂದು ಯಾರೂ ಹೇಳಲಾಗುತ್ತಿರಲಿಲ್ಲ. ತುಂಬಾ ಗಮನವಿಟ್ಟು ನೋಡಿದವರಿಗೆ ಮಾತ್ರ ಗೊತ್ತಾಗುತ್ತಿತ್ತು'.
'2018ರಲ್ಲಿ ಮತ್ತೊಮ್ಮೆ ನ್ಯುಮೋನಿಯಾ ಆಯ್ತು. ಆಗ ಅವನಿಗೆ ನ್ಯುಮೋನಿಯಾ ಚಿಕಿತ್ಸೆ ಕೊಡಿಸುವಾಗ ಒಂದು ಸಾರಿ ನೋಡೋಣ ಅಂತಾ ನ್ಯುಮಾನ್ಸ್ ಚೇರ್‌ಮ್ಯಾನ್ ಆಗಿದ್ದ ಡಾ.ಗಂಗಾಧರ್ ಅವರ ಬಳಿ ತೋರಿಸಿದೆವು. ಅವರು ಮತ್ತೊಬ್ಬ ಡಾಕ್ಟರ್ ಅನ್ನು ರೆಫರ್ ಮಾಡಿದರು ಅವರು ನೋಡಿದ ತಕ್ಷಣ ಇರುವ ನಿಜವಾದ ಸಮಸ್ಯೆ ಹೇಳಿದರು. ಅವನ ಮೂಗು ನೋಡಿ ಕಾಯಿಲೆ ಏನು ಎಂದು ಹೇಳಿದರು'.
'ಅವರು ನೋಡಿದ ತಕ್ಷಣವೇ ಹೇಳಿದರು ಅವನಿಗೆ ಎಂದೂ ಮಾತು ಬರಲ್ಲ. ಯಾವುದೋ ಒಂದು ಹಂತದಲ್ಲಿ ನಡೆಯುತ್ತಾನೆ. ಮತ್ತೆ ತುಂಬಾ ಗಟ್ಟಿಯಾದ ಆಯುಷ್ಯ ಇದೆ ಅಂತಾ ಹೇಳಲು ಆಗುವುದಿಲ್ಲ. ಅವನನ್ನು ನೀವು ಹೀಗೆ ಸ್ವೀಕರಿಸಬೇಕು. ಏನೋ ಚಿಕಿತ್ಸೆ ಕೊಟ್ಟ ತಕ್ಷಣ ಸರಿ ಹೋಗುತ್ತದೆ ಅಂತಾ ಅಂದುಕೊಳ್ಳಬೇಡಿ ಎನ್ನುವ ಮೂಲಕ ಜೀವನಕ್ಕೆ ಹೊಸ ಜ್ಞಾನೋದಯವನ್ನು ಕೊಟ್ಟಿದ್ದು ಅವರೇ. ಅದಾದ ಮೇಲೆ ನಾವು ಅವನನ್ನು ನೋಡಿಕೊಳ್ಳುವ ರೀತಿಯೇ ಬದಲಾಗಿ ಹೋಯಿತು. ಅವನು ಎಂದಿಗೂ ಸರಿ ಹೋಗುವುದಿಲ್ಲ. ಬೇರೆ ಮಕ್ಕಳ ರೀತಿ ಇರುವುದಿಲ್ಲ ಎನ್ನುವುದು ನಮಗೆ ಗೊತ್ತಾಗಿ ಹೋಗಿತ್ತು'.

'ಈ ವಿಚಾರಗಳೆಲ್ಲಾ ಗೊತ್ತಾಗುವ ಮುಂಚೆಯೇ ನನ್ನ ಹೃದಯ ಒಡೆದು ಹೋಗಿತ್ತು. ಅವನು ಹುಟ್ಟಿದಾಗಲೇ ಆ ಅನುಭವ ಆಗಿ ಹೋಗಿತ್ತು. ಅದು ಬಹಳ ಕಷ್ಟದ ಅನುಭವ. ಇಷ್ಟು ವರ್ಷ ಆದ ಮೇಲೆ ನಮಗೆ ಈಗ ಏನು ಅನಿಸುತ್ತದೆ ಅಂದರೆ ಇದೊಂದು ಮುಂದುವರಿಯುವ ಪ್ರಕ್ರಿಯೆ ಅಲ್ವಾ? ಅಪ್ಪ- ಅಮ್ಮ ಅವರಿಗೊಂದು ಮಗುವಾಗುತ್ತದೆ. ಆ ಮಕ್ಕಳು ತಂದೆ-ತಾಯಿಗೆ ವಯಸ್ಸಾದಾಗ ನೋಡಿಕೊಳ್ಳುತ್ತಾರೆ. ಮೊದಲು ಅಪ್ಪ-ಅಮ್ಮ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡುತ್ತಾರೆ. ಅವರು ದೊಡ್ಡವರಾಗುತ್ತಾ ಇವರಿಗೆ ವಯಸ್ಸಾಗುತ್ತದೆ. ಇವರು ಅವರನ್ನು ನೋಡಿಕೊಳ್ಳುತ್ತಾರೆ. ಆದರೆ ನಮಗೆ ಆ ಸೇತುವೆಯೇ ತುಂಡಾಗಿದೆ' ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
'ನಾನು ಈಗ ಬದುಕಿನ ಮಧ್ಯೆ ನಿಂತಿದ್ದೇನೆ. ಅದು ನಮ್ಮಲ್ಲಿರುವ ಭರವಸೆಯನ್ನು ಕುಗ್ಗಿಸುತ್ತದೆ. ಒಂದು ನಮಗೆ ಯಾರೂ ಇರಲ್ಲ ಎನ್ನುವುದು. ನಮ್ಮ ವಯಸ್ಸಾದ ಅಪ್ಪ-ಅಮ್ಮನನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆದರೆ ಆ ವಯಸ್ಸಿನಲ್ಲಿ ನಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಆಲೋಚನೆ ಕಾಡುತ್ತದೆ. ಇನ್ನೊಂದು ನಾವಾದ ಮೇಲೆ ಇವನನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವುದು ಎರಡನೇ ಯೋಚನೆ. ಇದೆರಡು ಈಗಿನ ಯೋಚನೆ. ಉಳಿದಿದೆಲ್ಲಾ ಮಾಡಿ ಆಯ್ತು. ಸದ್ಯ ನನಗಿರುವ ಆಲೋಚನೆ ಇದೇ ಎರಡು' ಎಂದು ಮಾಳವಿಕಾ ಅವಿನಾಶ್ ತಮ್ಮ ಬದುಕಿನ ಭಾಗವಾಗಿರುವ ಮಗನ ಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications