Bengaluru Second Airport: ಹೀಗೆ ಮಾಡಿದ್ರೆ ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ಬೇಕಾಗಲ್ಲ: ಏನಿದು ಮಹತ್ವದ ಸಲಹೆ?
ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯಗಳು ಚುರುಕಾಗಿ ನಡೆಯುತ್ತಿವೆ. ಅಧಿಕೃತವಾಗಿ ಇನ್ನೂ ಹೊಸ ಏರ್‌ಪೋರ್ಟ್‌ನ ಜಾಗ ಫಿಕ್ಸ್ ಆಗದಿದ್ದರೂ ಸದ್ಯಕ್ಕೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಸ್ಥಳ ಗುರುತಿಸುವ ಕೆಲಸ ಜೋರಾಗಿ ನಡೆಯುತ್ತಿದೆ. ಡ್ರೋನ್ ಸರ್ವೇ ಕೂಡ ವೇಗವಾಗಿ ಸಾಗಿದ್ದು, ಹಲವು ಗ್ರಾಮಗಳಲ್ಲಿ ಮಾರ್ಕಿಂಗ್ ಕೆಲಸವೂ ನಡೆದಿದೆ. ಸಾವಿರಾರು ಎಕರೆ ಭೂಪ್ರದೇಶವನ್ನು ಏರ್‌ಪೋರ್ಟ್‌ಗಾಗಿ ಗುರುತಿಸಲಾಗುತ್ತಿದ್ದು, ಮತ್ತೊಂದೆಡೆ ರೈತರಿಂದಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆ ವಿರುದ್ಧ ದಂಗೆ ಏಳಲು ಸಜ್ಜಾಗಿರುವ ರೈತರು ಸರ್ಕಾರಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಇದನ್ನು ಮಾಡಿದರೆ ಬೆಂಗಳೂರಿಗೆ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ಬೇಡ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ಕನಕಪುರ ರಸ್ತೆ ಹಾಗೂ ಕುಣಿಗಲ್ ಬಳಿ ಎರಡನೇ ಏರ್‌ಪೋರ್ಟ್‌ಗಾಗಿ ಜಾಗಗಳನ್ನು ಗುರುತಿಸಿತ್ತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳು ಕೂಡ ಈ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಅನುಮೋದನೆ ಕೊಟ್ಟ ಕೂಡಲೇ ಈ ಎರಡರಲ್ಲಿ ಒಂದು ಜಾಗದಲ್ಲಿ ಏರ್‌ಪೋರ್ಟ್ ನಿರ್ಮಿಸಲು ಸರ್ಕಾರ ರೆಡಿಯಾಗಿತ್ತು. ಇಷ್ಟರಲ್ಲೇ ತುಮಕೂರು ಭಾಗದಲ್ಲಿ ಏರ್‌ಪೋರ್ಟ್ ನಿರ್ಮಿಸಿ ಎಂದು ಕೂಗು ಕೇಳಿಬಂತು. ಇದರಿಂದ ಸರ್ಕಾರ ಇಕ್ಕಟ್ಟಿಗೂ ಸಿಲುಕಿತು. ಇನ್ನು ಸರ್ಕಾರವೇ ಗುರುತಿಸಿರುವ ಎರಡು ಜಾಗಗಳ ಜೊತೆಗೆ ಇದೀಗ ಹೆಚ್ಚುವರಿಯಾಗಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಹೊಸ ಜಾಗವನ್ನು ಗುರುತಿಸಲಾಗುತ್ತಿದೆ.

ಮಾಗಡಿ ತಾಲ್ಲೂಕಿನ ಹತ್ತಾರು ಗ್ರಾಮಗಳ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಏರ್‌ಪೋರ್ಟ್‌ಗಾಗಿ ಸ್ಥಳ ಗುರುತಿಸುವ ಕೆಲಸ ನಡೆಯುತ್ತಿದೆ. ಈ ಭಾಗದಲ್ಲಿ ಡ್ರೋನ್‌ಗಳನ್ನು ಬಳಸಿ ಸರ್ವೇ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇದರಿಂದ ಈ ಭಾಗದ ಗ್ರಾಮಸ್ಥರು ಹಾಗೂ ರೈತರು ಕೂಡ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ಭಾಗದಲ್ಲಿ ನಮಗೆ ಏರ್‌ಪೋರ್ಟ್ ಬೇಡವೇ ಬೇಡ ಎಂದು ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ. ಕೃಷಿಯನ್ನೇ ಅವಲಂಬಿಸಿರುವ ರೈತರ ಬದುಕು ಬೀದಿಗೆ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆ ಒಂದು ಕೆಲಸ ಮಾಡಿದರೆ ಎರಡನೇ ಏರ್‌ಪೋರ್ಟ್‌ನ ಅಗತ್ಯವೇ ಇಲ್ಲ ರೈತರೇ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ಕೆಂಪೇಗೌಡ ಏರ್‌ಪೋರ್ಟ್ ರನ್‌ವೇ ಹೆಚ್ಚಿಸಿಕೊಳ್ಳಿ!
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸದ್ಯ ಕಾರ್ಯಾಚರಣೆಯಲ್ಲಿದೆ. ಭವಿಷ್ಯದ ದೃಷ್ಟಿಯಿಂದ ಈ ಇಲ್ಲಿನ ಒತ್ತಡ ತಗ್ಗಿಸಲು ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಪ್ಲ್ಯಾನ್ ನಡೆದಿದೆ. ಒಂದೇ ಊರಿನಲ್ಲಿ ಎರಡು ವಿಮಾನ ನಿಲ್ದಾಣಗಳು ಬೇಕಿಲ್ಲ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎರಡು ರನ್‌ವೇ ಹಾಗೂ ಟರ್ಮಿನಲ್‌ಗಳನ್ನು ಕೂಡ ಹೆಚ್ಚಿಸಲಾಗಿದೆ. ಅದೇ ರೀತಿ ಭವಿಷ್ಯದ ದೃಷ್ಟಿಯಿಂದ ಅಲ್ಲಿಯೇ ಜಾಗವನ್ನು ವಿಸ್ತರಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.

ದೇವನಹಳ್ಳಿ ಸಮೀಪದ ಜಾಗವನ್ನೇ ಸರ್ವೆ ಮಾಡಿ, ರನ್‌ವೇಗಳ ಸಂಖ್ಯೆ ಹೆಚ್ಚಿಸಿಕೊಂಡರೆ ಎರಡನೇ ಏರ್‌ಪೋರ್ಟ್ ಮಾಡುವ ಅಗತ್ಯ ತಪ್ಪುತ್ತದೆ ಎಂದು ಮಾಗಡಿ ರೈತರು ಮಹತ್ವದ ಸಲಹೆ ನೀಡಿದ್ದಾರೆ. ಇದರಿಂದ ಹೊಸ ಭಾಗದಲ್ಲಿ ಸಾವಿರಾರು ಎಕರೆ ಭೂಮಿ ಹಾಳಾಗುವುದು ತಪ್ಪುತ್ತೆ, ಏರ್‌ಪೋರ್ಟ್ ಕೂಡ ಒಂದೇ ಕಡೆ ಇರುತ್ತೆ, ಯಾವ ಗೊಂದಲವೂ ಇರೋದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications