Bigg Boss: ಕಲರ್ಸ್ ಕನ್ನಡ ಶೋಗೆ ವಾಪಸಾದ ಲಾಯರ್ ಜಗದೀಶ್
ಬಿಗ್ ಬಾಸ್ 11ರ ಆವೃತ್ತಿಯಲ್ಲಿ ಕೆಲವೇ ದಿನ ಇದ್ದರೂ ಲಾಯರ್ ಜಗದೀಶ್ ಸಿಕ್ಕಾಪಟ್ಟೆ ಜನಪ್ರಿಯತೆ ಸಂಪಾದಿಸಿದ್ದಾರೆ. 15 ಸ್ಪರ್ಧಿಗಳು ಒಂದು ಕಡೆ ಇದ್ದರೆ ಜಗದೀಶ್ ಒಂದು ಕಡೆ ನಿಂತು ಎಲ್ಲರನ್ನೂ ಸಮರ್ಥವಾಗಿ ಎದುರಿಸಿದರು. ಮಹಿಳೆಯರ ಬಗ್ಗೆ ಅವರು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಕಾರಣ ಕೊಟ್ಟು ಜಗದೀಶ್‌ರನ್ನು ಶೋ ಮಧ್ಯದಲ್ಲೇ ಬಿಗ್ ಬಾಸ್ ಮನೆಯಿಂದ ಹೊರಕಳಿಸಲಾಯಿತು.
ಇದೀಗ ಜಗದೀಶ್ ಮತ್ತೆ ಕಲರ್ಸ್ ಕನ್ನಡ ಶೋಗೆ ವಾಪಸಾಗಿದ್ದಾರೆ, ಆದರೆ ಈ ಬಾರಿ ಅವರು ಬಿಗ್ ಬಾಸ್‌ನಲ್ಲಿ ಭಾಗವಹಿಸುತ್ತಿಲ್ಲ, ಬದಲಾಗಿ ಅಡುಗೆ ಮಾಡಿ ತೋರಿಸಲು ಬಂದಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ 'ಸವಿರುಚಿ' ಸೀಸನ್ 3 ಕಾರ್ಯಕ್ರಮದಲ್ಲಿ ಅಡುಗೆ ಮಾಡಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಈ ಎಪಿಸೋಡ್‌ನ ಪ್ರೋಮೊ ಹಂಚಿಕೊಂಡಿದ್ದು ಕುತೂಹಲ ಕೆರಳಿಸಿದೆ. ಜಗದೀಶ್ ಅಡುಗೆ ಮಾಡುವುದು ಮಾತ್ರವಲ್ಲದೆ, ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಕೂಡ ಹಂಚಿಕೊಂಡಿರುವುದು ಕುತೂಹಲ ಹೆಚ್ಚಲು ಕಾರಣವಾಗಿದೆ. ನಿರೂಪಕಿ ಜಾಹ್ನವಿ ಬಿಗ್‌ಬಾಸ್‌ಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದು ಜಗದೀಶ್ ಉತ್ತರ ಕೊಟ್ಟಿದ್ದಾರೆ. ಹಂಸ ಮೇಲೆ ಕ್ರಶ್ ಇತ್ತಾ ಎನ್ನುವ ಪ್ರಶ್ನೆಗೂ ಜಗದೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಲಾಯರ್ ಜಗದೀಶ್ ಮತ್ತು ಹಂಸ ನಡುವೆ ಉತ್ತಮ ಬಾಂಧ್ಯವ ಇತ್ತು. ಮುಂಗಾರು ಮಳೆ ಹಾಡಿನಲ್ಲಿ ಗಣೇಶ್ ಎದೆ ಮೇಲೆ ಪೂಜಾ ಗಾಂಧಿ ಕಾಲಿಡುವ ದೃಶ್ಯವನ್ನು, ಹಂಸ ಮತ್ತು ಜಗದೀಶ್ ಬಿಗ್‌ಬಾಸ್‌ನಲ್ಲಿ ಕ್ರಿಯೇಟ್ ಮಾಡಿದ್ದರು. ಬಳಿಕ ಹಂಸ ಅವರಿಗೆ ಕೆಟ್ಟದಾಗಿ ಬೈದರು ಎನ್ನುವ ವಿಚಾರಕ್ಕೆ ಶುರುವಾದ ಜಗಳ ಬಳಿಕ ರಂಜಿತ್ ಮತ್ತು ಜಗದೀಶ್‌ರನ್ನು ಆಚೆ ಹಾಕುವವರೆಗೆ ಹೆಚ್ಚಾಗಿತ್ತು.
ಬಿಗ್ ಬಾಸ್‌ಗೆ ವಾಪಸ್ ಕರೆಸಲು ಆಗ್ರಹ
ಜಗದೀಶ್‌ರನ್ನು ಆಷಚೆ ಹಾಕುತ್ತಿದ್ದಂತೆ ಜಗದೀಶ್ ಅವರ ಅಭಿಮಾನಿಗಳು ಸಿಟ್ಟಾಗಿದ್ದರು. ಚೈತ್ರಾ ಕುಂದಾಪುರ, ಮಾನಸ ಕೂಡ ಅವಾಚ್ಯ ಶಬ್ದಗಳನ್ನು ಬಳಸಿದ್ದರು. ಇಬ್ಬರ ವರ್ತನೆ ಕೂಡ ಕೆಟ್ಟದಾಗಿತ್ತು. ಆದರೆ ಲಾಯರ್ ಜಗದೀಶ್‌ರನ್ನು ಮಾತ್ರ ಯಾಕೆ ಹೊರ ಕಳಿಸಿದ್ದು ಎಂದು ಪ್ರಶ್ನೆ ಮಾಡಿದ್ದರು. ನಾವು ಬಿಗ್ ಬಾಸ್ ನೋಡಬೇಕು ಅಂದ್ರೆ ಲಾಯರ್ ಜಗದೀಶ್ ವಾಪಸ್ ಬರಬೇಕು ಎಂದು ಆಗ್ರಹಿಸಿದ್ದರು.
ಆದರೆ ಕಳೆದ ವಾರದ ಎಪಿಸೋಡ್‌ನಲ್ಲಿ ಪಂಚಾಯಿತಿ ನಡೆಸಿದ್ದ ಕಿಚ್ಚ ಸುದೀಪ್ ಚೈತ್ರಾ ಕುಂದಾಪುರ, ಹಂಸ, ಮಾನಸ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ಜಗದೀಶ್‌ರನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಅವರು ಮಾಡಿದ್ದು ತಪ್ಪು, ಹಾಗಂತ ಉಳಿದವರು ಎಷ್ಟು ಸಾಚಾ ಎಂದು ಪ್ರಶ್ನೆ ಮಾಡಿದ್ದರು. ಬಿಗ್ ಬಾಸ್ ಪಾಲಿಗೆ ಜಗದೀಶ್ ಮುಗಿದ ಅಧ್ಯಾಯ ಎಂದಿರುವ ಅವರು, ಅವರನ್ನು ವಾಪಸ್ ಬಿಗ್ ಬಾಸ್ ಮನೆಗೆ ಕರೆಸಲ್ಲ ಎನ್ನುವ ಸ್ಪಷ್ಟನೆ ಕೊಟ್ಟಿದ್ದಾರೆ.












Click it and Unblock the Notifications