Darshan: ಕೈದಿ ಸಂಖ್ಯೆ 6106, ವಿಶೇಷ ಬ್ಯಾರಕ್‌ನಲ್ಲಿರುವ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜೈಲು ಸೇರಿದ್ದಾರೆ. 12 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಅವರು, ಇಂದಿನಿಂದ ಜುಲೈ 4ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ದರ್ಶನ್ ಸೇರಿ ನಾಲ್ವರು ಆರೋಪಿಗಳನ್ನು ಇಂದು ಪರಪ್ಪನ ಅಗ್ರಹಾರಕ್ಕೆ ಸೇರಿಸಲಾಗಿದೆ. ಎಲ್ಲಾ ನಾಲ್ವರಿಗೂ ಜೈಲು ಅಧಿಕಾರಿಗಳು ವಿಚಾರಣಾಧೀನ ಕೈದಿ ಸಂಖ್ಯೆ ನೀಡಿದ್ದಾರೆ.

ದರ್ಶನ್ ನೋಡಲು ಅಪಾರ ಅಭಿಮಾನಿಗಳು ಸೇರಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಜೈಲಿನ ಬಳಿ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ದರ್ಶನ್ ಕೈದಿ ಸಂಖ್ಯೆ 6106
ನಟ ದರ್ಶನ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನ್ನು ನೀಡಲಾಗಿದೆ. ಧನರಾಜ್ 6107, ವಿನಯ್ 6108 ಮತ್ತು ಪ್ರದೋಶ್‌ಗೆ 6109 ಸಂಖ್ಯೆ ನೀಡಲಾಗಿದೆ.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಂದ ಅಪಾಯವಿರುವ ವಿಶೇಷ ಆರೋಪಿಗಳನ್ನು ಬ್ಯಾರಕ್‌ನಲ್ಲಿ ಇರಿಸಲಾಗುತ್ತದೆ. ದರ್ಶನ್‌ಗೆ ಕೂಡ ವಿಶೇಷ ಬ್ಯಾರಕ್‌ನಲ್ಲಿ ಇಡಲಾಗಿದ್ದು, ಮೂರನೇ ಬ್ಯಾರಕ್‌ನಲ್ಲಿ ಅವರನ್ನು ಇರಿಸಲಾಗಿದೆ.
ಪರಪ್ಪನ ಅಗ್ರಹಾರದ ಒಳಬಿಡುವ ಮುನ್ನ ಕೈದಿಗಳಿಗೆ ಹಲವು ಪರೀಕ್ಷೆ ಮಾಡಲಾಗುತ್ತದೆ. ದೇಹದ ಮೇಲಿರುವ ಮಚ್ಚೆಗಳು, ಟ್ಯಾಟೂ ಸೇರಿದಂತೆ ಹಲವು ಗುರುತುಗಳನ್ನು ಪೊಲೀಸರು ರಿಜಿಸ್ಟರ್ ನಲ್ಲಿ ನಮೂದಿಸುತ್ತಾರೆ. ದರ್ಶನ್‌ರನ್ನು ಕೂಡ ಬಟ್ಟೆ ಬಿಚ್ಚಿಸಿ ಪರೀಕ್ಷೆ ಮಾಡಿ, ಎಲ್ಲವನ್ನೂ ನಮೂದಿಸಲಾಗಿದೆ. ಬಳಿಕ ಅವರಿಗೆ ವಿಚಾರಣಾಧೀನ ಕೈದಿ (ಯುಟಿಪಿ) ಸಂಖ್ಯೆಯನ್ನು ನೀಡಲಾಗಿದೆ.
ಎರಡನೇ ಬಾರಿ ಪರಪ್ಪನ ಅಗ್ರಹಾರ 'ದರ್ಶನ'
ನಟ ದರ್ಶನ್‌ನೆ ಪರಪ್ಪನ ಅಗ್ರಹಾರ ಜೈಲು ಏನು ಹೊಸದಲ್ಲ. 13 ವರ್ಷಗಳ ಹಿಂದೆ ಅಂದರೆ 2011ರಲ್ಲೇ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಅವರು 28 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.
ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಎರಡನೇ ಬಾರಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಕೊಲೆ ಪ್ರಕರಣವಾಗಿರುವ ಕಾರಣ ದರ್ಶನ್‌ಗೆ ಶೀಘ್ರದಲ್ಲೇ ಜಾಮೀನು ಸಿಗುವುದು ಭಾರಿ ಕಷ್ಟ ಎನ್ನಲಾಗಿದೆ.
ದರ್ಶನ್ ಸೇರಿ ಒಟ್ಟು 17 ಜನರನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಕೆಲವರು ಈಗಾಗಲೇ ಸಾಕ್ಷಿಗಳಾಗಲು ಒಪ್ಪಿಕೊಂಡಿದ್ದು, ಸಹಚರರು ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಒಂದೇ ಜೈಲಿನಲ್ಲಿ ಇಡಬಾರದು, ಬೇರೆ ಜೈಲಿಗೆ ಸ್ಥಳಾಂತರಿಸಬೇಕು ಎಂದು ಎಸ್‌ಪಿಪಿ ವಾದ ಮಾಡಿದ್ದಾರೆ. ಈ ಸಂಬಂಧ ಸೋಮವಾರ ವಿಚಾರಣೆ ನಡೆಯಲಿದೆ.












Click it and Unblock the Notifications