ಚಪ್ಪಲಿ ಕಾಯಬೇಕು..ಎಂಜಲು ಎತ್ತಬೇಕು: ಕಾರುಣ್ಯಾ ರಾಮ್ ಹೀಗಂದಿದ್ದೇಕೆ?
ಇತ್ತೀಚೆಗೆ ನಟಿ ಕಾರುಣ್ಯ ರಾಮ್ ಕಾಶಿಗೆ ತೆರಳಿದ್ದ ಸಂದರ್ಭದಲ್ಲಿ ಭಕ್ತರು ತಿಂದು ಬಿಟ್ಟ ಊಟದ ಎಲೆಗಳನ್ನು ಎತ್ತಿ ಶುಚಿಗೊಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವು ನೆಟ್ಟಿಗರು ನಟಿಯ ಸೇವಾಭಾವ ಕಂಡು ಮೆಚ್ಚಿಕೊಂಡರೇ, ಇನ್ನೂ ಕೆಲವರು ಇದೆಲ್ಲಾ ವಿಡಿಯೋಗಾಗಿ ಮಾಡುವ ಸೇವೆ ಎಂದು ನೆಗೆಟಿವ್ ಕಮೆಂಟ್ ಮಾಡಿದ್ದರು. ಆದರೆ ಈ ವಿಡಿಯೋ ಹಿಂದಿನ ಸತ್ಯವೇ ಬೇರೆ ಇದ್ದು, ನಟಿ ಕಾರುಣ್ಯ ರಾಮ್ ಮೊದಲಿನಿಂದಲೂ ಈ ರೀತಿಯ ಸೇವೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಅವುಗಳು ಪ್ರಚಾರಕ್ಕೆ ಬಂದಿರಲಿಲ್ಲ ಅಷ್ಟೇ.
ಈ ಬಗ್ಗೆ ಸ್ವತಃ ನಟಿ ಕಾರುಣ್ಯ ರಾಮ್ ಬಾಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ನನ್ನ ಅಮ್ಮ ತುಂಬಾ ದೈವ ಭಕ್ತೆ. ಚಿಕ್ಕ ವಯಸ್ಸಿನಿಂದ ನಮಗೆ ಆಚಾರ-ವಿಚಾರಗಳನ್ನು ಹೇಳಿಕೊಟ್ಟೇ ಬೆಳೆಸಿದ್ದಾರೆ. ನಾನು ಆರನೇ ತರಗತಿ ಓದುವಾಗಲೇ ಇಂತಹ ಆಚರಣೆಗಳನ್ನು ರೂಢಿಸಿಕೊಂಡು ಬಂದಿದ್ದೇನೆ. ದೈವ, ದೇವರು ಆಚಾರ-ವಿಚಾರಗಳು ನಿನ್ನೆ ಮೊನ್ನೆ ಕಲಿತರೆ ಬರುವಂತದ್ದಲ್ಲ. ಈಗ ಸೋಶಿಯಲ್ ಮೀಡಿಯಾಗಳು ಆ್ಯಕ್ಟಿವ್ ಇರುವುದರಿಂದ ನಾವು ಹೋಗುವ ವಿಡಿಯೋಗಳನ್ನು ಅಲ್ಲಿ ಹಾಕುವುದರಿಂದ ಜನರಿಗೆ ಗೊತ್ತಾಗುತ್ತಿದೆ' ಎಂದರು.

'ಒಬ್ಬ ಮನುಷ್ಯ ಜನ್ಮ ಎಷ್ಟು ಶ್ರೇಷ್ಠ. ಹೀಗಾಗಿ ಎಲ್ಲಾ ಕರ್ಮಗಳನ್ನು ಕಳೆದುಕೊಳ್ಳಬೇಕು ಅಂದರೆ ನಾನು ಎನ್ನುವ ಅಹಂ ಅನ್ನು ಬಿಡಬೇಕು. ಅದು ಯಾರೇ ಇರಲಿ, ಒಬ್ಬ ವಿಐಪಿ ಇರಲಿ, ವಿವಿಐಪಿ ಇರಲಿ, ಸೆಲೆಬ್ರೆಟಿ, ರಾಜಕಾರಣಿ ಯಾರೇ ಇರಲಿ ಅವರು ಮೊದಲು ನಾನು ಎನ್ನುವುದನ್ನು ಬಿಡಬೇಕು. ಅದನ್ನು ಬಿಡಲು ನೀವು ಎಲ್ಲಾ ರೀತಿಯ ಸೇವೆಯನ್ನು ಮನಸ್ಸು ತೃಪ್ತಿಯಾಗುವ ರೀತಿ ಮಾಡಬೇಕು' ಎಂದರು.
'ನಾನು ಯಾವ ದೇವರಿಗೂ ಹಾಗೇ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಅಂತಾ ಹರಕೆ ಹೊತ್ತುಕೊಳ್ಳುವುದಿಲ್ಲ. ನಾನು ದೇವಸ್ಥಾನಕ್ಕೆ ಹೋದಾಗ ಅಲ್ಲಿ ಏನಾದರೂ ಸೇವೆ ಇದ್ದಾಗ ತಡಮಾಡದೇ ಮಾಡುತ್ತೇನೆ. ಸೇವೆಗಳನ್ನು ಮಾಡುವುದು ನನಗೆ ತುಂಬಾ ಇಷ್ಟ. ಯಾರಿದ್ದಾರೆ, ಏನಾಗುತ್ತದೆ ಅಂತಾ ನಾನು ತಲೆನೇ ಕೆಡಿಸಿಕೊಳ್ಳುವುದಿಲ್ಲ. ನನ್ನ ಮನಸ್ಸಿಗೆ ಮಾಡಬೇಕು ಅನಿಸಿದ ತಕ್ಷಣ ಮಾಡುತ್ತೇನೆ. ಆ ರೀತಿಯ ಎಷ್ಟೋ ಸೇವೆಗಳನ್ನು ನಾನು ಮಾಡಿದ್ದೇನೆ' ಎಂದು ಹೇಳಿದರು.

'ಒಬ್ಬ ಮನುಷ್ಯ ತನ್ನ ಕರ್ಮಗಳನ್ನು ಕಳೆದುಕೊಳ್ಳಬೇಕು, ನಾನತ್ವವನ್ನು ಬಿಡಬೇಕು ಎಂದರೆ ಚಪ್ಪಲಿ ಕಾಯುವುದು, ಅಶಕ್ತರಿಗೆ ಸಹಾಯ ಮಾಡುವುದು, ಅಶಕ್ತರ ಸೇವೆ ಮಾಡುವುದು, ವೃದ್ಧರಿಗೆ ಸೇವೆ ಮಾಡುವುದು, ತಿಂದು ಬಿಟ್ಟ ತಟ್ಟೆಗಳನ್ನು ಎತ್ತುವುದು, ದೇವಸ್ಥಾನ ಶುಚಿಗೊಳಿಸುವುದು, ಈ ರೀತಿಯ ಎಷ್ಟೋ ಸೇವೆಗಳನ್ನು ಮಾಡಿದರೆ ಒಬ್ಬ ಸಂಪೂರ್ಣ ಮನುಷ್ಯ ಆಗಿ ಬಿಡುತ್ತಾನೆ. ನೀವು ಎಲ್ಲೇ ಹೋದರೂ ಎನೇ ಮಾಡಿದರೂ ಯಶಸ್ಸು ನಿಮ್ಮ ಜೊತೆಗಿರುವುದು ನಿಮಗೆ ಗೊತ್ತಾಗುತ್ತಾ ಹೋಗುತ್ತದೆ. ಅದನ್ನು ನಾನು ನಂಬುತ್ತೇನೆ' ಎಂದು ಹೇಳಿದರು.












Click it and Unblock the Notifications