Movie Ticket Price: ಏಕರೂಪದ ಸಿನಿಮಾ ಟಿಕೆಟ್ ದರ ನಿಗದಿಗೆ ಹೈಕೋರ್ಟ್ ತಡೆ
ರಾಜ್ಯದ ಎಲ್ಲ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದೇ ರೀತಿಯ ಟಿಕೆಟ್ ದರ ನಿಗದಿ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶಾಕ್ ನೀಡಿದೆ. ಇತ್ತೀಚೆಗಷ್ಟೇ ಎಲ್ಲ ಭಾಷೆಯ ಸಿನಿಮಾ ಟಿಕೆಟ್ ದರಗಳನ್ನು 200 ರೂಪಾಯಿಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಕೆಲವರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶಕ್ಕೆ ತಡೆ ನೀಡಿದೆ.
ರಾಜ್ಯದ ಚಿತ್ರಮಂದಿರಗಳಲ್ಲಿ ಪರಭಾಷೆಯ ಸಿನಿಮಾಗಳ ಹಾವಳಿ ಹೆಚ್ಚಾಗಿತ್ತು. ಅಲ್ಲದೆ ಮನಬಂದಂತೆ ಟಿಕೆಟ್ ದರಗಳನ್ನು ಏರಿಸಿ ಪ್ರೇಕ್ಷಕರಿಂದ ಹಣ ಲೂಟಿ ಮಾಡುವ ಆರೋಪವೂ ಕೇಳಿಬಂದಿತ್ತು. ಹಾಗಾಗಿ ರಾಜ್ಯದಲ್ಲಿ ಏಕರೂಪದ ಟಿಕೆಟ್ ದರಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿತ್ತು. ಆದರೆ ಇದು ಸಿನಿಮಾ ನಿರ್ಮಾಪಕರಿಗೆ ದೊಡ್ಡ ಹೊಡೆತ ಎಂಬ ವಾದವೂ ಹುಟ್ಟಿಕೊಂಡಿತ್ತು. ಹೀಗಾಗಿ ಕೆಲ ನಿರ್ಮಾಣ ಸಂಸ್ಥೆಯವರು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರದ ಆದೇಶಕ್ಕೆ ತಡೆ ನೀಡಲಾಗಿದೆ.

ಮುಖ್ಯವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣ ಇರಲಿಲ್ಲ. ಕೆಲವು ಸಿನಿಮಾಗಳಿಗೆ ಸಾವಿರಾರು ರೂಪಾಯಿವರೆಗೆ ಟಿಕೆಟ್ ದರ ನಿಗದಿ ಮಾಡಿದ್ದು ಬೆಳಕಿಗೆ ಬಂದಿತ್ತು. ಈಗಾಗಲೇ ಪಕ್ಕದ ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿ ಏಕರೂಪದ ಟಿಕೆಟ್ ದರಗಳನ್ನು ನಿಗದಿ ಮಾಡಲಾಗಿದೆ. ಕೆಲ ಸಿನಿಮಾಗಳ ವೇಳೆ ಸರ್ಕಾರದಿಂದ ಅನುಮತಿ ಪಡೆದು ದರ ಏರಿಕೆ ಮಾಡಲು ಅವಕಾಶವೂ ನೀಡಲಾಗಿದೆ. ಇದೇ ರೀತಿ ಕರ್ನಾಟಕದಲ್ಲೂ ಇತ್ತೀಚೆಗೆ ಏಕರೂಪದ ಟಿಕೆಟ್ ದರ ಜಾರಿಯಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಇದಕ್ಕೆ ತಡೆ ಬಿದ್ದಿದೆ.
ರಾಜ್ಯ ಸರ್ಕಾರದ ನಿಯಮವೇನು?
ಸೆಪ್ಟೆಂಬರ್ 12ರಂದು ರಾಜ್ಯ ಸರ್ಕಾರವು ಈ ಸಂಬಂಧ ಆದೇಶ ಹೊರಡಿಸಿತ್ತು. ಅದರಂತೆ ಎಲ್ಲ ಸಿನಿಮಾ ಪ್ರದರ್ಶನದ ಟಿಕೆಟ್ ಬೆಲೆ 200 ರೂಪಾಯಿ ಮೀರಬಾರದು. ಇದು ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯಿಸಲಿದೆ ಎಂದು ಆದೇಶದಲ್ಲಿ ತಿಳಿಸಿತ್ತು. ಇದರಿಂದ ಕನ್ನಡ ಸಿನಿಮಾಗಳಿಗೆ ಅನುಕೂಲವಾಗುವುದಲ್ಲದೆ, ಪರಭಾಷಾ ಸಿನಿಮಾಗಳ ದಂಧೆಗೆ ಕಡಿವಾಣ ಹಾಕುವುದು ಹಾಗೂ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಹೊಂದಿತ್ತು.
ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಈ ಹೊಸ ನಿಯಮವು ಕನ್ನಡ ಸೇರಿದಂತೆ ಎಲ್ಲ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುವಂತೆ ನಿಯಮ ರೂಪಿಸಲಾಗಿತ್ತು. ಈ ಎಲ್ಲ ಪ್ರದರ್ಶನಗಳಲ್ಲಿ ಮನರಂಜನಾ ತೆರಿಗೆ ಒಳಗೊಂಡಂತೆ ಗರಿಷ್ಠ 200 ರೂಪಾಯಿ ದರವನ್ನಷ್ಟೇ ನಿಗದಿ ಮಾಡಬೇಕು. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚು ದರ ವಿಧಿಸಿದರೆ, ಆ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯೂ ತಿಳಿಸಿತ್ತು.
ಇನ್ನೇನು ಸಿನಿಮಾ ಟಿಕೆಟ್ ದರ ಇಳಿಯುತ್ತಲ್ಲಾ? ಇನ್ಮುಂದೆ ನೆಮ್ಮದಿಯಾಗಿ ಚಿತ್ರಮಂದಿರಗಳಿಗೆ ಹೋಗಿ ನೆಚ್ಚಿನ ಸಿನಿಮಾ ನೋಡಬಹುದು ಎಂದು ಖುಷಿಪಟ್ಟಿದ್ದರು. ಆದರೆ ಭಾರೀ ಬಜೆಟ್‌ನ ಸಿನಿಮಾಗಳಿಗೆ ಈ ನಿಯಮ ಹೊಡೆತ ಬೀಳಲಿದೆ ಎಂಬ ವಿರೋಧವೂ ಕೇಳಿಬಂದಿತ್ತು. ಸದ್ಯ ಹೈಕೋರ್ಟ್ ತಡೆ ನೀಡಿರುವುದರಿಂದ ಮೊದಲಿನಂತೆಯೇ ದರಗಳು ನಿಗದಿಯಾಗಲಿದೆ. ಈಗ ರಿಲೀಸ್ ಆಗುತ್ತಿರುವ ಸಾಲು ಸಾಲು ಸಿನಿಮಾಗಳು ಇದರ ಪ್ರಯೋಜನ ಪಡೆಯಲಿವೆ.












Click it and Unblock the Notifications