ಅನುಶ್ರೀ ನಂ.1 ನಿರೂಪಕಿ ಪಟ್ಟ ಉಳಿಸಿಕೊಂಡಿದ್ದೇಗೆ: ಅನುಪಮಾ ಗೌಡ ಹೇಳಿದ್ದೇನು?
ಸಿನಿಮಾ ಮಾಡುತ್ತಿಲ್ಲ ಧಾರಾವಾಹಿ ಮಾಡುತ್ತಿಲ್ಲ ಆದರೂ ಮನೆ, ಕಾರು ಖರೀದಿಸಿದ್ದಾರೆ. ದುಡ್ಡು ಹೇಗೆ ಸಂಪಾದನೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಕನ್ನಡದ ನಟಿ, ನಿರೂಪಕಿ ಅನುಪಮಾ ಗೌಡ ನೇರವಾಗಿ ಉತ್ತರ ಕೊಟ್ಟಿದ್ದಾರೆ. ನಾನು ಸಿನಿಮಾ, ಧಾರಾವಾಹಿ ಮಾಡುತ್ತಿಲ್ಲ ಆದರೆ ನಿರೂಪಣೆ ಮಾಡುತ್ತಿದ್ದೇನೆ. ಸಿನಿಮಾಗಿಂತ ನಿರೂಪಣೆಯಲ್ಲೇ ಚೆನ್ನಾಗಿ ದುಡ್ಡು ಮಾಡುತ್ತಿದ್ದೇನೆ ಎಂದು ತಮ್ಮ ಆದಾಯದ ಮೂಲದ ಬಗ್ಗೆ ಉತ್ತರಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ ಅವರು, ನಿಮ್ಮ ಮನೆಯ ನಾಲ್ಕು ಗೋಡೆಯೊಳಗೆ ನೀವೆಷ್ಟು ಕಷ್ಟ ಪಡುತ್ತಿದ್ದೀರಾ, ಎಷ್ಟು ಕೆಲಸ ಮಾಡುತ್ತಿದ್ದೀರಾ ನಿಮಗೆ ಗೊತ್ತು. ನನ್ನ ಕೆಲಸದ ಬಗ್ಗೆ ನನಗೆ ಗೊತ್ತಿದೆ. ಹೀಗಾಗಿ ನಾನು ನಿರೂಪಣೆ ಮಾಡುವವರನ್ನು ತುಂಬಾ ಗೌರವಿಸುತ್ತೇನೆ. ಒಂದು ದಿನ ಬೆಳಗ್ಗೆ ಐದು ಗಂಟೆಗೆಯಿಂದ ಮಾರನೇ ದಿನ ಐದು ಗಂಟೆಯವರೆಗೆ ನಿಲ್ಲುತ್ತೇನೆ. ನಾನು ವಾರಕ್ಕೆ ಒಂದೇ ದಿನ ಕೆಲಸ ಮಾಡುವುದು. ವಾರಕ್ಕೆ ಒಂದೇ ದಿನ ಶೂಟ್ ಮಾಡುವುದು.

ನಾನು ಸಿನಿಮಾದಲ್ಲಿ ಇದ್ದಿದ್ದರೆ ಇಷ್ಟೊಳ್ಳೆ ಸಂಪಾದನೆ ತೆಗೆದುಕೊಂಡು ಈ ರೀತಿಯ ಬದುಕು ಬದುಕಲು ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಿರೂಪಣೆಯಲ್ಲಿ ಒಳ್ಳೆಯ ಸಂಪಾದನೆ ಇದೆ. ಆದರೆ ಕಾರು ಮತ್ತು ಮನೆ ಒಬ್ಬ ವ್ಯಕ್ತಿಯನ್ನು ಹಾಗೂ ಆತನ ಕೆಲಸವನ್ನು ವ್ಯಾಖ್ಯಾನಿಸುವುದೇ ಇಲ್ಲ ಎಂದು ಹೇಳಿದರು.
ನಾನು ನಿರೂಪಣೆ ಶುರುಮಾಡಿ ಐದು ವರ್ಷ ಆಗಿದೆ ಅಷ್ಟೇ. ಮೊದಲು ಎರಡು ಕಾರ್ಯಕ್ರಮದ ನಿರೂಪಣೆಯನ್ನು ಜನರು ಇಷ್ಟ ಪಡಲಿಲ್ಲ. ಬಿಗ್ ಬಾಸ್ ಪರಿಣಾಮ ಅಂತಾ ನನಗೆ ಅನಿಸುತ್ತದೆ. ಕನ್ನಡ ಕೋಗಿಲೆ, ಮಜಾ ಭಾರತ ಮಾಡಿದೆ. ಆಗ ಜನ ತುಂಬಾ ಬೈಯೋರು ನನ್ನನ್ನು. ಅವಳಿಗೆ ನಿಲ್ಲಲು ಬರಲ್ಲ, ಮಾತಾಡೋಕೆ ಬರಲ್ಲ, ನಗಲು ಬರಲ್ಲ, ಧ್ವನಿ ಸರಿಯಿಲ್ಲ, ಅದು ಇದು ಅಂತಾ ಬೈಯುತ್ತಿದ್ದರು. ಅದಾದ ಮೇಲೆ ನಾನು ಬದಲಾವಣೆ ಮಾಡಿಕೊಳ್ಳುತ್ತಾ ಬಂದೆ. ಬದಲಾಯಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿತು. ಎಷ್ಟೋ ಜನರಿಗೆ ಅವಕಾಶನೇ ಸಿಗುವುದಿಲ್ಲ ಎಂದರು.

ಜನ ಇನ್ನೂ ನನ್ನ ಇಷ್ಟಪಡುತ್ತಿದ್ದಾರೆ ಎನ್ನುವುದು ತಪ್ಪಾಗುತ್ತದೆ. ಯಾಕೆಂದರೆ ನಾನು ಈಗ ಶುರು ಮಾಡಿರುವುದು. ಜನ ನನ್ನ ಒಪ್ಪಿಕೊಳ್ಳೊಕೆ ಎರಡೂವರೆ ವರ್ಷ ಆಯ್ತು. ಜನರು ಬೇಡ ಅಂದರೆ ಚಾನೆಲ್ ಅವರು ಕೂಡ ಕೆಲಸ ಕೊಡುವುದಿಲ್ಲ. ಆದರೆ ಅನುಶ್ರೀ ಅವರು ನಿರೂಪಣೆ ಶುರು ಮಾಡಿ ಹತ್ತು ವರ್ಷ ಮೇಲಾಗಿದೆ. ಇವತ್ತಿಗೂ ನಂಬರ್ ಒನ್ ಆ್ಯಂಕರ್ ಅವರು ಕರ್ನಾಟಕದಲ್ಲಿ. ಯಾಕೆ ಎಂದರೆ ಕಾರ್ಯಕ್ರಮಕ್ಕೆ ಏನೋ ಒಂದು ವಿಷಯ ಅವರಿಂದ ಸಿಗುತ್ತಿದೆ. ಕಾರ್ಯಕ್ರಮಕ್ಕೆ ಎನೋ ಒಂದು ಮೆರುಗು ತರುತ್ತಿದ್ದರಲ್ಲಾ ಅದಕ್ಕೆ. ಇಲ್ಲ ಅಂದರೆ ಬಹುಶಃ ಅನುಶ್ರೀ ಇರುತ್ತಾನೇ ಇರಲಿಲ್ಲ. ಆ ಜಾಗದಲ್ಲಿ ಬೇರೆಯಾರೋ ಇರುತ್ತಿದ್ದರೇನೋ. ನಂಬರ್ ಒನ್ ಆಗುವುದಕ್ಕೆ ಕಷ್ಟ ಇದೆ. ಅದರ ಜೊತೆ ಅದನ್ನು ಉಳಿಸಿಕೊಳ್ಳುವುದು ಕೂಡ ಕಷ್ಟ ಇದೆ. ಅವರ ಶ್ರಮದಿಂದ ಅವರು ಇನ್ನೂ ನಿರೂಪಣೆಯಲ್ಲಿ ಇದ್ದಾರೆ. ಅದನ್ನು ಉಳಿಸಿಕೊಂಡಿದ್ದಾರೆ ಎಂದು ಅನುಶ್ರೀ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.












Click it and Unblock the Notifications