'ಆ ಕನಸು ಒಡೆದು ಹೋಗಲು ನಾನೇ ಕಾರಣ': ನಟನನ್ನೇ ಪ್ರೀತಿಸಿದ್ದ ಅನುಪಮಾ ಗೌಡ ದೂರಾಗಿದ್ದೇಕೆ?
ಕನ್ನಡದ ನಟಿ, ನಿರೂಪಕಿ ಅನುಪಮಾ ಗೌಡ ಮೊದಲ ಬಾರಿಗೆ ತಮ್ಮ ಮೊದಲ ಪ್ರೀತಿ ಹಾಗೂ ಬ್ರೇಕಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ಆ ಕನಸು ಒಡೆದು ಹೋಗಲು ನನ್ನದೇ ತುಂಬಾ ಕಾರಣಗಳಿದ್ದವು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಆಗ ಅಕ್ಕ ಧಾರಾವಾಹಿ ಮಾಡುತ್ತಿದ್ದೆ. ಅದರಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿದ್ದೆ. ಅದು ನನ್ನ ಮೇಲೆ ಎಷ್ಟು ಪರಿಣಾಮ ಬೀರಿತ್ತು ಅಂದರೆ ಆ ಪಾತ್ರ ನನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ನಿಜ ಜೀವನದಲ್ಲಿಯೂ ಹಾಗೆ ಆಡುತ್ತಿದ್ದೆ. ಗಲಾಟೆಗಳು ಜಾಸ್ತಿಯಾಗಲು ಶುರುವಾಯ್ತು. ಒಂದು ಕಡೆ ಕಳೆದುಕೊಂಡು ಬಿಡುತ್ತೇನೆ ಎನ್ನುವ ಭಯದಲ್ಲಿ ಹೇಗೇಗೋ ಆಡಲು ಶುರು ಮಾಡಿದ್ದೇ ನಾನು'.

'ಆ ವ್ಯಕ್ತಿ ಇಲ್ಲದೇ ಬದುಕು ಹೇಗೆ ಎನ್ನುವುದನ್ನು ಊಹಿಸಿಕೊಳ್ಳಲು ಸಹ ನನಗೆ ಕಷ್ಟವಾಗುತ್ತಿತ್ತು. ಎರಡು ಕಡೆಯಿಂದಲೂ ಸಂಬಂಧ ಹಾಗೇ ಇತ್ತು. ನಾನು ಒಬ್ಬಳೇ ಹಾಗಿದ್ದೆ ಅಂದರೆ ತುಂಬಾ ಸುಳ್ಳಾಗುತ್ತದೆ. ಕೆಲವೊಮ್ಮೆ ಒಂದೇ ಕ್ಷೇತ್ರದಲ್ಲಿ ಇರುವುದು ಕೂಡ ಸಮಸ್ಯೆ ಆಗಬಹುದು. ಎಲ್ಲೋ ನಾವು ಇಬ್ಬರು ಅರ್ಥ ಮಾಡಿಕೊಳ್ಳುವುದನ್ನು ಕಳೆದುಕೊಂಡೆವು' ಎಂದರು.
'ತೀರಾ ನೆಗೆಟಿವ್ ಆಗಲು ಶುರುವಾಯ್ತು. ನಿನ್ನ ಜೊತೆ ಇರುವುದನ್ನು ಇಷ್ಟಪಡುತ್ತಿದ್ದ ವ್ಯಕ್ತಿ, ನಿನ್ನ ಜೊತೆಗೆ ಇರಲು ಕಷ್ಟ, ನೀನಿದಲ್ಲಿ ಇರಲು ಆಗಲ್ಲ ಎನ್ನುವ ಮಟ್ಟಿಗೆ ಹದಗೆಡಲು ಶುರುವಾಯ್ತು. ಶೂಟಿಂಗ್‌ನಲ್ಲಿದ್ದ ಒತ್ತಡ ಎಲ್ಲಾ ತಂದು ಅವರ ಮೇಲೆ ಹೇರುವುದು, ಕಿರುಚಾಡುವುದು, ನಾನು ಕಿರುಚಾಡಿದಾಗ ಆ ಕಡೆಯಿಂದಲೂ ಹಾಗೇ ಆಗುತ್ತಿತ್ತು. ಒಬ್ಬರು ಕಿರುಚಿ ಒಬ್ಬರು ಸುಮ್ಮನಿದ್ದಾಗ ಸಂಬಂಧವನ್ನು ತೂಗಿಸಬಹುದು. ಆದರೆ ಎರಡೂ ಅದೇ ರೀತಿ ಇದ್ದಾಗ ಸಂಬಂಧಕ್ಕೆ ಕಷ್ಟವಾಗುತ್ತದೆ'.

'ನಾನು ಆ ಪ್ರೀತಿ ಮುಗಿದು ಹೋಗುವುದನ್ನು ಬಯಸಿಲ್ಲ. ಹೇಗೆ ಮುಗಿದು ಹೋಯಿತು ಎನ್ನುವ ಸ್ಪಷ್ಟನೆಯೂ ಇರಲಿಲ್ಲ. ಯಾವಾಗ ಆಯ್ತು ಇದು ಎನ್ನುವುದು ಗೊತ್ತಾಗಲಿಲ್ಲ. ಎಷ್ಟೋ ಗಲಾಟೆಯಾದರೂ ಮತ್ತೆ ಮಾತುಕತೆ ಆಗುತ್ತಿತ್ತು. ಮತ್ತದೇ ಖುಷಿ ಇರುತ್ತಿತ್ತು. ಆ ವ್ಯಕ್ತಿ ತುಂಬಾ ಕಾಳಜಿ ಮಾಡುತ್ತಿದ್ದರು. ನನ್ನ ಮತ್ತು ನನ್ನ ತಾಯಿ ನಡುವೆ ಆಗುತ್ತಿದ್ದ ಗಲಾಟೆ, ಧಾರಾವಾಹಿ ಒತ್ತಡ, ಹಣದ ವಿಚಾರಕ್ಕೂ ಕಷ್ಟವಾಗುತ್ತಿದ್ದದ್ದು ಎಲ್ಲಾ ಸೇರಿ ಒಂದು ನನ್ನ ಜೀವನದಲ್ಲಿ ಹಾಳು ಮಾಡಿತು ಅಂದರೆ ಅದು ನನ್ನ ಪ್ರೀತಿ. ಇವತ್ತು ತಿರುಗಿ ನೋಡಿದಾಗ ಆಗಿದ್ದೇಲ್ಲಾ ಒಳ್ಳೆಯದಕ್ಕೆ ಅನಿಸುತ್ತದೆ' ಎಂದರು.
'ಅವರ ಜೊತೆಗೆ ಅವರೊಂದಿಗಿನ ಇತರ ಸಂಬಂಧಗಳು ಕೂಡ ಹೋಗುತ್ತದೆ. ಆ ಸಂಬಂಧಗಳು ಹಾಗೇ ಹೋಗಲ್ಲ, ದ್ವೇಷ ಕೋಪದಿಂದ ಹೋಗುತ್ತದೆ. ಒಬ್ಬ ವ್ಯಕ್ತಿ ನಮ್ಮ ಕುಟುಂಬ ಅನಿಸಿರುತ್ತದೆ. ಮಾರನೇ ದಿನ ಅಲ್ಲಿಂದ ಬರೀ ದ್ವೇಷ ಮಾತ್ರ ಕಾಣುತ್ತದೆ. ನನ್ನ ಪ್ರಕಾರ ಹೇಗೆ ಅಂದರೆ ನಾನು ಒಂದು ವ್ಯಕ್ತಿಯನ್ನು ಪ್ರೀತಿ ಮಾಡುತ್ತೇನೆ. ನನ್ನ ಬದುಕೇ ಅವನು ಅಂದುಕೊಂಡಿರುತ್ತೇನೆ. ಏನೋ ಒಂದು ಕಾರಣಕ್ಕೆ ದೂರ ಆಗುತ್ತೇವೆ. ಹಾಗಂತ ಆ ಮನುಷ್ಯನನ್ನು ದ್ವೇಷ ಮಾಡುವುದು ಹೇಗೆ? '

'ನಾವು ಆ ವ್ಯಕ್ತಿಯನ್ನು ಪ್ರೀತಿಸಿರುತ್ತೇವೆ. ನನ್ನ ಬದುಕೇ ಅವನು ಎಂದುಕೊಂಡಿರುತ್ತೇವೆ. ನನ್ನ ಸರ್ವಸ್ವನೇ ಅವರು, ಅವರಿಗಾಗಿ ಏನೂ ಬೇಕಾದರೂ ಮಾಡಬಹುದು. ಮಾಡಿರುತ್ತೀರಾ ಕೂಡ. ಹೀಗಿರುವಾಗ ಬ್ರೇಕಪ್ ಆದ ಮೇಲೆ ಹೇಗೆ ದ್ವೇಷಿಸಿರುತ್ತೀರಾ. ನನ್ನ ಕೈಯಲ್ಲಿ ಅದು ಸಾಧ್ಯ ಇಲ್ಲ. ನಿಮ್ಮ ಮಾಜಿ ಪ್ರೇಮಿ ಜೊತೆಗೆ ಸ್ನೇಹ ಇರಲು ಸಾಧ್ಯವಿಲ್ಲ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಅಲ್ಲಿ ಮತ್ತೆ ಆ ಗೆಳೆತನ ಬರಲ್ಲ. ಹಾಗಂತ ಆ ವ್ಯಕ್ತಿಯನ್ನು ದ್ವೇಷ ಮಾಡಲು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ಗೊತ್ತಿದ್ದರೆ ದಯವಿಟ್ಟು ನನಗೆ ಹೇಳಿ' ಎಂದು ಅನುಪಮಾ ಗೌಡ ಹೇಳಿದ್ದಾರೆ.
'ನಾನು ಆ ವ್ಯಕ್ತಿ ಮೇಲೆ ನಾನು ತುಂಬಾ ಡಿಪೆಂಡ್ ಆಗಿದ್ದೆ. ಆರು ವರ್ಷಗಳ ಕಾಲ ಶೂಟಿಂಗ್, ಮನೆ, ಆ ವ್ಯಕ್ತಿ ಇಷ್ಟೇ ನನ್ನ ಜಗತ್ತಾಗಿತ್ತು. ದಿಢೀರ್ ಒಂದು ಪ್ರಪಂಚನೇ ತುಂಡಾಗಿ ಹೋಗಿತು. ನನಗೆ ಯಾರೂ ಇಲ್ಲದಂತಾಯಿತು. ಮನೆಯಲ್ಲಿಯೂ ಒಳ್ಳೆಯ ಸಂಬಂಧ ಇರಲಿಲ್ಲ. ಇಬ್ಬರಿಗೂ ಒಂದೇ ಸ್ನೇಹಿತರು. ಅವರು ನನಗೆ ಬೇರೆ, ಅವರಿಗೆ ಬೇರೆ ಸಿಗಬೇಕಾಯಿತು. ನನಗೆ ಎಲ್ಲಿಗಾದರೂ ಹೋಗಬೇಕು ಅಂದರೆ ಯಾರಾದರೂ ಕರೆದುಕೊಂಡು ಹೋಗಿಯೇ ಅಭ್ಯಾಸ ಇತ್ತು. ಒಬ್ಬಳೇ ಎಲ್ಲಿಯೂ ಹೋಗಿರಲಿಲ್ಲ. ಆ ನಾಲ್ಕು ವರ್ಷ ನಾನು ತುಂಬಾ ಕಷ್ಟಪಟ್ಟಿದ್ದೇನೆ. ಯಾಕೆ ಹೀಗಾಯ್ತು ಎಂದು ನನಗೆ ಅದರಿಂದ ಹೊರಬರಲು ಆಗಲಿಲ್ಲ' ಎಂದು ನೋವು ವ್ಯಕ್ತಪಡಿಸಿಕೊಂಡರು.
'ಆರು ವರ್ಷ ಒಂದು ಸಣ್ಣ ಪುಟ್ಟ ಪ್ರಪಂಚದಂತೆ ಬದುಕಿದ್ದೆ. ನನ್ನ ಬದುಕಿದು, ನನ್ನ ಭವಿಷ್ಯ ಇದು ಅಂತಾ ನಿರ್ಧಾರ ಆಗಿತ್ತು. ನಾನು ಕೊನೆಯವರೆಗೂ ಹೀಗಿರುತ್ತೇವೆ, ಹಾಗಿರುತ್ತೇವೆ ಎಂದು ಕನಸು ಕಂಡಿದ್ದೆ. ಆದರೆ ಮಾರನೇ ದಿನ ಬೆಳಗ್ಗೆ ಎದ್ದಾಗ ಏನೂ ಇಲ್ಲ. ನನ್ನ ಅರ್ಧ ದೇಹ ತುಂಡು ಮಾಡಿದಂತಾಯಿತು. ಶೂಟಿಂಗ್ ಮುಗಿಸಿಕೊಂಡು ಮನೆಯೊಳಗೆ ಸೇರಿಕೊಳ್ಳುತ್ತಿದ್ದೆ. ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಕೊನೆಗೆ ಅರ್ಥ ಆಯ್ತು ನಾನು ಡಿಪ್ರೆಷನ್‌ನಲ್ಲಿದ್ದೆ ಎಂದು. ನನ್ನ ಡಿಪ್ರೆಷನ್‌ಗೆ ಅದೊಂದೇ ಕಾರಣ ಎಂದರೆ ತಪ್ಪಾಗುತ್ತದೆ' ಎಂದರು.
'ಆ ಸಮಯದಲ್ಲಿ ನಾನು ತುಂಬಾ ಕೆಟ್ಟವಳಂತೆ ವರ್ತಿಸುತ್ತಿದ್ದೆ. ಎಲ್ಲರ ಮೇಲೂ ಕೋಪ ಮಾಡಿಕೊಳ್ಳುತ್ತಿದ್ದೆ. ಎಲ್ಲರ ಮೇಲೂ ಕಿರುಚಾಡುತ್ತಿದ್ದೆ. ತುಂಬಾ ಮೂಡ್ ಸ್ವಿಂಗ್ಸ್ ಆಗುತ್ತಿತ್ತು. ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದೆ. ಅದನ್ನು ನೆನಪಿಸಿಕೊಳ್ಳಲೂ ಭಯವಾಗುತ್ತದೆ. ಇವತ್ತಿಗೂ ನನ್ನ ಸ್ಥಿತಿಗಳನ್ನು ಹತ್ತಿರದಿಂದ ನೋಡಿದ ವ್ಯಕ್ತಿ ನೇಹಾ, ಅವಳಿಗೂ ಸಾಕಾಗಿ ಬಿಟ್ಟಿತ್ತು ನನ್ನ ಪರಿಸ್ಥಿತಿ ನೋಡಿ. ಅವಳು ಎಷ್ಟು ಹೇಳಿದರೂ ನಾನು ಕೇಳುತ್ತಿರಲಿಲ್ಲ. ತುಂಬಾ ಅಳುತ್ತಿದ್ದೆ. ನಾನು ಕಳೆದೇ ಹೋಗಿದ್ದೆ. ಬದುಕೇ ಬೇಡಾ. ಈ ರೀತಿಯ ಒಂದು ಬದುಕನ್ನೂ ನಾನು ಬದುಕಬೇಕಾ ಎನ್ನುವ ಮಟ್ಟಕ್ಕೆ ನಾನು ಹೋಗಿದ್ದೆ' ಎಂದು ತಮ್ಮ ಕೆಟ್ಟ ದಿನಗಳನ್ನು ಅನುಪಮಾ ಗೌಡ ನೆನಪಿಸಿಕೊಂಡಿದ್ದಾರೆ.












Click it and Unblock the Notifications