Rashmi Leela biography: ಸೀರಿಯಲ್ ಲೋಕದಿಂದ ಇಹಲೋಕದವರೆಗೆ: ನಟಿ ರಶ್ಮಿ ಲೀಲಾ ಹೋರಾಟ ಮತ್ತು ಅಕಾಲಿಕ ವಿದಾಯ
ಜೀವನದ ಕೊನೆಯ ಕ್ಷಣಗಳವರೆಗೂ ಧೈರ್ಯದಿಂದ ಹೋರಾಡಿದ ರಶ್ಮಿ ಲೀಲಾ ಅವರ ಜೀವನಯಾನ, ಹೋರಾಟ ಮತ್ತು ಮಾನವೀಯ ಮನವಿ ಅಭಿಮಾನಿಗಳ ಮನಸ್ಸನ್ನು ಸ್ಪರ್ಶಿಸಿದೆ.
ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಸ್ವಾಭಾವಿಕ ಅಭಿನಯ ಹಾಗೂ ಮೃದು ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದವರು ನಟಿ ರಶ್ಮಿ ಲೀಲಾ. ಧಾರಾವಾಹಿ ಪ್ರಪಂಚದಲ್ಲಿ ಹಲವು ನೆನಪಿನ ಪಾತ್ರಗಳನ್ನು ನೀಡಿ ಮನೆಮಾತಾದ ಅವರು, ಜೀವನದ ಅಂತಿಮ ಹಂತದಲ್ಲಿ ಗಂಭೀರ ಶ್ವಾಸಕೋಶ ಕಾಯಿಲೆಯೊಂದಿಗೆ ಹೋರಾಡಿ ಅಕಾಲಿಕವಾಗಿ ಅಗಲಿದರು. ಅವರ ಜೀವನಕಥೆ ಕೇವಲ ಕಲಾವಿದೆಯ ಸಾಧನೆಗಷ್ಟೇ ಸೀಮಿತವಾಗಿಲ್ಲ, ಅದು ಹೋರಾಟ, ನಂಬಿಕೆ ಮತ್ತು ಪ್ರಾರ್ಥನೆಗಳ ಕಥೆಯೂ ಹೌದು. ಅವರ ಬದುಕಿನ ಇನ್ನಷ್ಟು ವಿವರ ಈ ಲೇಖನದಲ್ಲಿ ತಿಳಿಯಿರಿ.
ಕಿರುತೆರೆಯಿಂದ ಜನಪ್ರಿಯತೆ
ನಟಿ ರಶ್ಮಿ ಲೀಲಾ ಅವರು ಕನ್ನಡ ಧಾರಾವಾಹಿಗಳ ಮೂಲಕ ತಮ್ಮ ಕಲಾ ಪ್ರಯಾಣ ಆರಂಭಿಸಿದರು. 'ಬಾಂಧವ್ಯ', 'ಕಾವ್ಯಾಂಜಲಿ', 'ಗಗನ ಕುಸುಮ', 'ಪಾಪ ಪಾಂಡು', 'ಗೋಧೂಳಿ', 'ಕವಲುದಾರಿ', 'ಮಗಳು ಜಾನಕಿ', 'ಕನ್ನಡಿ', 'ಹೋಗ್ಲಿ ಬಿಡಿ ಸರ್', 'ಆನಂದ ಸಾಗರ' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು. ವಿಶೇಷವಾಗಿ 'ಪಾಪ ಪಾಂಡು', 'ಕಾವ್ಯಾಂಜಲಿ' ಮತ್ತು 'ಕವಲುದಾರಿ' ಧಾರಾವಾಹಿಗಳಲ್ಲಿನ ಪಾತ್ರಗಳು ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. ಮೃದು ಮನಃಸ್ಥಿತಿಯ ಪಾತ್ರಗಳ ಮೂಲಕವೇ ಅವರು ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದರು. ಸಂವೇದನಾಶೀಲತೆ ಮತ್ತು ಪಾತ್ರದೊಳಗೆ ಬೆರೆತು ಹೋಗುವ ಶಕ್ತಿ ಅವರಲ್ಲಿತ್ತು. ಕಿರುತೆರೆಯ ಪಾತ್ರಗಳ ಮೂಲಕ ಅವರು ಕುಟುಂಬ ಪ್ರೇಕ್ಷಕರಿಗೆ ತೀರಾ ಹತ್ತಿರವಾದರು.

ಸಿನಿಮಾದಲ್ಲೂ ಛಾಪು
ಧಾರಾವಾಹಿಗಳ ಜೊತೆಗೆ ರಶ್ಮಿ ಅವರು ಸಿನಿಮಾಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದರು. ಪ್ರಮುಖವಾಗಿ 'ಪ್ರಾಣ', 'ಗ್ರಾಮದೇವತೆ', 'ಸಿಹಿ ಮುತ್ತು', 'ಕೆಂಪು ದೀಪ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಬಹುಮುಖ ಪ್ರತಿಭೆಯನ್ನು ತೋರಿಸಿದರು. ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ತಮ್ಮ ಗುರುತು ಮೂಡಿಸಿದ ಅವರು ಕಲಾರಂಗದಲ್ಲಿ ಶ್ರದ್ಧೆ ಮತ್ತು ಶಿಸ್ತಿಗೆ ಹೆಸರಾದವರು.
ಕುಟುಂಬ ಮತ್ತು ಜೀವನ
ರಶ್ಮಿ ಲೀಲಾ ಅವರ ಪತಿ ಸಾರಕ್ಕಿ ಮಂಜು ಕೂಡ ಕನ್ನಡ ಕಿರುತೆರೆಯಲ್ಲಿ ಬರಹಗಾರ ಹಾಗೂ ಸಂಭಾಷಣೆಕಾರರಾಗಿ ಪರಿಚಿತರಾದವರು. ಕಲಾರಂಗದ ಈ ದಂಪತಿಗೆ ಒಬ್ಬ ಪುತ್ರಿ ಕೂಡ ಇದ್ದಾಳೆ. ಇವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ವಾಸವಿದ್ದರು. ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದ ರಶ್ಮಿ, ವೈಯಕ್ತಿಕ ಬದುಕಿನಲ್ಲಿ ಸಹ ಸರಳತೆ ಮತ್ತು ಆತ್ಮೀಯತೆಗೆ ಹೆಸರಾದವರು. ಕಳೆದ ಕೆಲವು ವರ್ಷಗಳಿಂದ ರಶ್ಮಿ ಲೀಲಾ ಗಂಭೀರ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. 'ಪಲ್ಮನರಿ ಫೈಬ್ರೋಸಿಸ್' ಎಂಬ ಕಾಯಿಲೆಯಿಂದ ಅವರ ಆರೋಗ್ಯ ಹದಗೆಟ್ಟಿತ್ತು. ವೈದ್ಯರ ಸಲಹೆಯಂತೆ ಲಂಗ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆ ಅಗತ್ಯವಾಯಿತು. ಅವರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆಗೆ ಸಹಾಯ ಕೋರಿದ್ದ ರಶ್ಮಿ
ವೈದ್ಯರ ಸಲಹೆಯಂತೆ ಲಂಗ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಚಿಕಿತ್ಸೆಗೆ ಭಾರೀ ವೆಚ್ಚವಾಗಲಿದ್ದು, ಸುಮಾರು ₹19 ಲಕ್ಷ ರೂ. ಅಗತ್ಯವಿದೆ ಎಂದು ಅವರು ಈ ಹಿಂದೆ ಸಾರ್ವಜನಿಕವಾಗಿ ತಿಳಿಸಿದ್ದರು. ಚಿಕಿತ್ಸೆ ಹಾಗೂ ಆಸ್ಪತ್ರೆ ವೆಚ್ಚಗಳಿಗೆ ಈಗಾಗಲೇ ಸುಮಾರು ₹12 ಲಕ್ಷ ಖರ್ಚಾಗಿರುವುದಾಗಿ ಹೇಳಿಕೊಂಡಿದ್ದರು. ಶಸ್ತ್ರಚಿಕಿತ್ಸೆ ಮತ್ತು ನಂತರದ ಆರೈಕೆಗೆ ಸುಮಾರು ₹19 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದ್ದ ಅವರು ಸಾಮಾಜಿಕ ಜಾಲತಾಣದ ಮೂಲಕ ಧನಸಹಾಯ ಕೋರಿದ್ದರು.
"ಆತ್ಮೀಯ ಸ್ನೇಹಿತರೇ, ತುಂಬಾ ಭಾರವಾದ ಹೃದಯದಿಂದ ಈ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಗಂಭೀರ ಶ್ವಾಸಕೋಶದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದೇನೆ. ವೈದ್ಯರು ನನ್ನ ಬದುಕುಳಿಯಲು ಶ್ವಾಸಕೋಶ ಕಸಿ (ಲಂಗ್ ಟ್ರಾನ್ಸ್‌ಪ್ಲಾಂಟ್) ಅತ್ಯಾವಶ್ಯಕ ಎಂದು ತಿಳಿಸಿದ್ದಾರೆ. ಇದು ಜೀವ ಉಳಿಸುವ ಶಸ್ತ್ರಚಿಕಿತ್ಸೆಯಾಗಿದ್ದರೂ, ಇದರ ವೆಚ್ಚ ತುಂಬಾ ಹೆಚ್ಚಾಗಿದೆ. ನಾನು ಅಥವಾ ನನ್ನ ಕುಟುಂಬ ಮಾತ್ರದಿಂದ ಈ ದೊಡ್ಡ ಹೊರೆ ಹೊರುವ ಸಾಧ್ಯತೆ ಇಲ್ಲ" ಎಂದಿದ್ದರು.
"ನಿಮ್ಮಿಂದ ದೊರೆಯುವ ಒಂದು ಸಣ್ಣ ಸಹಾಯವೂ ನನ್ನ ಜೀವನ ಹೋರಾಟದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ನಿಮ್ಮ ಪ್ರಾರ್ಥನೆಗಳು ಮತ್ತು ಬೆಂಬಲ ನನಗೆ ಅಪಾರ ಶಕ್ತಿಯನ್ನು ನೀಡುತ್ತವೆ. ಈ ಸಂಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ," ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕರಾಗಿ ಬರೆದುಕೊಂಡಿದ್ದರು. ಆ ಮನವಿಯಲ್ಲಿ ಅವರು ವಿಶೇಷವಾಗಿ ರಾಘವ ಲಾರೆನ್ಸ್ ಹಾಗೂ ಕಿಚ್ಚ ಸುದೀಪ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದರು.
ಕೆಲವು ವರ್ಷಗಳ ನಂತರ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. "ನನ್ನ ಸ್ಥಿತಿ ಈಗ ಗಂಭೀರವಾಗಿದೆ. ಶ್ವಾಸಕೋಶ ಕಸಿ ಇನ್ನು ಮುಂದೆ ಕೇವಲ ಒಂದು ಆಯ್ಕೆಯಲ್ಲ, ಅದು ನನ್ನ ಜೀವನದಲ್ಲಿ ಉಳಿದಿರುವ ಏಕೈಕ ಅವಕಾಶವಾಗಿದೆ. ನಾನು ಪ್ರಸ್ತುತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯಕೀಯ ಆರೈಕೆ, ವಿವಿಧ ಪರೀಕ್ಷೆಗಳು, ಆಮ್ಲಜನಕ ಬೆಂಬಲ ಮತ್ತು ಆಸ್ಪತ್ರೆ ವಾಸ್ತವ್ಯಕ್ಕಾಗಿ ಈಗಾಗಲೇ ಸುಮಾರು 12 ಲಕ್ಷ ರೂ. ವೆಚ್ಚವಾಗಿದೆ. ನನ್ನ ಕುಟುಂಬ ಮತ್ತು ನಾನು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ. ನಮ್ಮಲ್ಲಿದ್ದ ಎಲ್ಲ ಹಣವನ್ನು ಈಗಾಗಲೇ ಚಿಕಿತ್ಸೆಗಾಗಿ ಬಳಸಿದ್ದೇವೆ. ಆದರೆ ಶಸ್ತ್ರಚಿಕಿತ್ಸೆ ಹಾಗೂ ನಂತರದ ಆರೈಕೆಯ ಒಟ್ಟು ವೆಚ್ಚ ಸುಮಾರು 19 ಲಕ್ಷ ರೂ. ಆಗಲಿದೆ. ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ನಮ್ಮ ಸಾಮರ್ಥ್ಯಕ್ಕೆ ಮೀರಿದೆ" ಎಂದು ಅವರು ನೋವಿನಿಂದ ಮನವಿ ಮಾಡಿಕೊಂಡಿದ್ದರು. "ನಿಮ್ಮ ಸಣ್ಣ ಸಹಾಯವೂ ನನ್ನ ಜೀವನದ ಹೋರಾಟದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ಭಾವುಕರಾಗಿ ಮನವಿ ಮಾಡಿದ್ದರು. ಅಭಿಮಾನಿಗಳು, ಸ್ನೇಹಿತರು ಹಾಗೂ ಕಲಾವಿದರು ಅವರ ಬೆಂಬಲಕ್ಕೆ ನಿಂತಿದ್ದರು.
ಫಲಿಸದ ಚಿಕಿತ್ಸೆ: ಪತಿ ಭಾವುಕ ಪೋಸ್ಟ್
ಸೂಕ್ತ ದಾನಿಗಳು ಲಭ್ಯವಾಗಿ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆ ನಡೆದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಕೊನೆಯುಸಿರೆಳೆದರು. ಈ ಬಗ್ಗೆ ಪತಿ ಸಾರಕ್ಕಿ ಮಂಜು ಫೇಸ್‌ಬುಕ್ ಮೂಲಕ ಈ ವಿಚಾರವನ್ನು ಖಚಿತಪಡಿಸಿದರು. ಸಾರ್ವಜನಿಕ ದರ್ಶನ ಹಾಗೂ ಅಂತಿಮ ವಿಧಿವಿಧಾನಗಳ ವಿವರಗಳನ್ನು ಹಂಚಿಕೊಂಡರು. "ಸ್ನೇಹಿತರೆ, ನನ್ನ ಧರ್ಮಪತ್ನಿ ಶ್ರೀಮತಿ ರಶ್ಮಿ ಲೀಲಾ ಅವರು ಶ್ವಾಸಕೋಶದ ಕಸಿ ಸರ್ಜರಿ ಚಿಕಿತ್ಸೆಯು ನಮ್ಮ ದುರದೃಷ್ಟವಶಾತ್ ವಿಫಲವಾಗಿ ದೈವಾಧೀನರಾದರು. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ನಮ್ಮ ಸ್ವಗೃಹದ ಮುಂದೆ ಇರಿಸಲಾಗುವುದು. ನಂತರ ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ನನ್ನ ಶ್ರೀಮತಿಯವರ ಅಂತಿಮ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ಸಾಧ್ಯವಿರುವವರು ಬನ್ನಿ. ರಶ್ಮಿಯವರ ಆತ್ಮಕ್ಕೆ ಸಂತೋಷ ಕೊಟ್ಟು ಕಳುಹಿಸಿ ಕೊಡೋಣ" ಎಂದು ಭಾವುಕವಾಗಿ ಬರೆದುಕೊಂಡರು.

ಮರೆಯಲಾಗದ ನೆನಪು
ರಶ್ಮಿ ಲೀಲಾ ಅವರ ಜೀವನ ಕಿರುತೆರೆಯ ಸಾಧನೆಗಿಂತ ಹೆಚ್ಚಾಗಿ ಮಾನವೀಯ ಹೋರಾಟದ ಕಥೆಯಾಗಿದೆ. ಕಲಾವಿದೆಯಾಗಿ ಅವರು ಪ್ರೇಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಪಾತ್ರಗಳು, ನಗುಮುಖ ಮತ್ತು ಧೈರ್ಯವು ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರಲಿದೆ. ಅವರ ಅಕಾಲಿಕ ನಿಧನ ಕನ್ನಡ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ. ಆದರೆ ಅವರು ಬಿಟ್ಟ ಹೆಜ್ಜೆಗುರುತುಗಳು ಸದಾ ಸ್ಮರಣೀಯ. ರಶ್ಮಿ ಲೀಲಾ ಕೇವಲ ನಟಿ ಮಾತ್ರವಲ್ಲ, ಜೀವನದ ಕೊನೆಯ ಕ್ಷಣದವರೆಗೂ ಹೋರಾಡಿದ ಧೈರ್ಯಶಾಲಿ ಮಹಿಳೆ. ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದ ಅವರು, ಪ್ರೇಕ್ಷಕರ ಪ್ರೀತಿಯನ್ನು ಜೀವನದ ಕೊನೆಯ ಹಂತದವರೆಗೂ ಅನುಭವಿಸಿದರು. ಅವರ ಪಾತ್ರಗಳು, ಅವರ ನಗು, ಅವರ ಸರಳ ವ್ಯಕ್ತಿತ್ವ ಇವೆಲ್ಲವೂ ಕನ್ನಡ ಕಿರುತೆರೆ ಇತಿಹಾಸದಲ್ಲಿ ಸದಾ ನೆನಪಾಗಿ ಉಳಿಯಲಿದೆ.
-
ಏಪ್ರಿಲ್ 14ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಏಪ್ರಿಲ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
CRPF Recruitment 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; ಕನ್ನಡಿಗರಿಗೂ ಇದೆ ಮೀಸಲಾತಿ -
ಚಾಣಕ್ಯ ನೀತಿ: ಜೀವನದ ದಿಕ್ಕನ್ನೇ ಬದಲಿಸಬಲ್ಲ 4 ಪ್ರಮುಖ ಜೀವನ ಪಾಠಗಳು! -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications