Dr.Shiva Rajkumar: ಆಪರೇಷನ್ ಬಳಿಕ ಶಿವಣ್ಣ ಮೊದಲ ಪ್ರತಿಕ್ರಿಯೆ, ಬೆಂಗಳೂರಿಗೆ ಯಾವಾಗ ಬರ್ತಾರೆ?
ನಟ ಶಿವರಾಜ್‌ಕುಮಾರ್ ಅವರು ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಪರೇಷನ್‌ಗೂ ಮುನ್ನ ಶಿವಣ್ಣ ಅವರಿಗಾಗಿ ಎಲ್ಲರೂ ಪ್ರಾರ್ಥಿಸಿದ್ದರು. ಇತ್ತೀಚೆಗೆ ಗೀತಕ್ಕ ಕೂಡ ಆಪರೇಷನ್ ಯಶಸ್ವಿಯಾಗಿದೆ ಎಂದಿದ್ದರು. ಆದರೆ, ಶಿವಣ್ಣ ಹೇಗಿದ್ದಾರೆ? ಎನ್ನುವ ಆತಂಕ ಎಲ್ಲರಲ್ಲೂ ಇತ್ತು. ಇಂದು ಹೊಸ ವರ್ಷದ ದಿನವೇ ಶಿವಣ್ಣ ತಮ್ಮ ಅಭಿಮಾನಿಗಳ ಮುಂದೆ ಪ್ರತ್ಯಕ್ಷ ಆಗಿದ್ದಾರೆ.
ಆಪರೇಷನ್ ಬಳಿಕ ಮೊದಲ ಬಾರಿಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಅವರು ವಿಡಿಯೋ ಶೇರ್ ಮಾಡಿಕೊಂಡು ಹೊಸ ವರ್ಷಕ್ಕೆ ಶುಭಕೋರಿ ಎಲ್ಲರ ಆತಂಕ ದೂರ ಮಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಕ್ಕೆ ನಾನು ಚಿರಋಣಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಶಿವಣ್ಣ ಹೇಳಿದ್ದಾರೆ.

ವಿಡಿಯೋದಲ್ಲಿ ಗೀತಕ್ಕ ಕೂಡ ಮಾತನಾಡಿದ್ದು, 'ಎಲ್ಲರಿಗೂ ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದದಿಂದ ಶಿವಣ್ಣ ಅವರ ಆರೋಗ್ಯ ಚೇತರಿಸಿದೆ. ಅವರ ರಿಪೋರ್ಟ್‌ಗಳೆಲ್ಲ ನೆಗೆಟಿವ್ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಮತ್ತೊಂದು ರಿಪೋರ್ಟ್‌ಗಾಗಿ ಕಾಯುತ್ತಿದ್ದೆವು. ಅದರಲ್ಲೂ ನೆಗೆಟಿವ್ ಎಂದು ಬಂದಿದ್ದು, ಶಿವಣ್ಣ ಈಗ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ' ಎಂದು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
'ಈ ಬಗ್ಗೆ ವೈದ್ಯರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ, ಆಶೀರ್ವಾದಿಂದಲೇ ಶಿವರಾಜ್‌ಕುಮಾರ್ ಅವರು ಗುಣಮುಖರಾಗಲು ಸಾಧ್ಯವಾಯಿತು. ನಾನು ಇದನ್ನು ಜೀವನವಿಡೀ ಮರೆಯುವುದಿಲ್ಲ 'ಎಂದು ಗೀತಕ್ಕೆ ಹೇಳಿದ್ದಾರೆ.

'ಶಿವಣ್ಣ ಕೂಡ ಮುಕ್ತವಾಗಿ ಮಾತನಾಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನನಗೆ ಮಾತನಾಡುವಾಗ ಎಲ್ಲಿ ಎಮೋಷನ್ ಆಗ್ತೀನೋ ಎಂದು ಭಯ ಆಗುತ್ತೆ. ಭಯ ಅನ್ನೋದು ಮನುಷ್ಯನಿಗೆ ಇದ್ದೇ ಇರುತ್ತೆ. ಆ ಭಯ ನೀಗಿಸಲು ಅಂತಲೇ ಕೆಲವು ಅಭಿಮಾನಿಗಳು, ಸಹ ಕಲಾವಿದರು, ಸ್ನೇಹಿತರು, ಸಂಬಂಧಿಕರು ಹಾಗೂ ವೈದ್ಯರು ಇರುತ್ತಾರೆ' ಎಂದಿದ್ದಾರೆ.
'ನನಗೆ ಚಿಕಿತ್ಸೆ ನೀಡಿದ ವೈದ್ಯ ಸಿಬ್ಬಂದಿ ನೋಡಿಕೊಂಡ ರೀತಿಯಿಂದಲೇ ನಾನು ಧೈರ್ಯವಾಗಿದ್ದೇನೆ. ಮೊದಲೆಲ್ಲ ತುಂಬಾ ಆರಾಮಾಗಿ ಇರುತ್ತಿದ್ದೆ. ಶೂಟಿಂಗ್ ಮಾಡ್ತಿದ್ದೆ, ಅದು ಯಾವ ಜೋಶ್‌ನಲ್ಲಿ ಬಂತೋ ಗೊತ್ತಿಲ್ಲ. ನನ್ನ ಇಡೀ ಸಿನಿಮಾಗಳ ಕ್ಲೈಮ್ಯಾಕ್ಸ್ ಫೈಟ್ ಎಲ್ಲ ಆ ಸ್ಥಿತಿಯಲ್ಲಿ ಹೇಗೇ ಮಾಡಿದ್ನೋ ಗೊತ್ತಿಲ್ಲ' ಎಂದಿದ್ದಾರೆ.
'ಇನ್ನು ಆಪರೇಷನ್ ದಿನ ಹತ್ತಿರ ಬರ್ತಾ ಬರ್ತಾ ಟೆನ್ಷನ್ ಆಯ್ತು. ಆದರೂ ನನ್ನೊಂದಿಗೆ ನನ್ನೆಲ್ಲ ಸ್ನೇಹಿತರು ಆಪ್ತರು ಇದ್ದರು. ಇನ್ನು ಗೀತಾ ಇಲ್ಲದೆ ಶಿವಣ್ಣ ಇಲ್ಲವೇ ಇಲ್ಲ. ಗೀತಾರಂತೆ ಸಪೋರ್ಟ್ ನನಗೆ ಬೇರೆ ಯಾರಿಂದಲೂ ಸಿಗೋದಿಲ್ಲ. ನನ್ನ ಮಗಳು ನಿವಿ ಸೇರಿದಂತೆ ಹಲವರು ನನ್ನನ್ನ ಮಗುವಂತೆ ನೋಡಿಕೊಂಡಿದ್ದಾರೆ'.
'ಇನ್ನು ಆಪರೇಷನ್ ಮಾಡಿದ ವೈದ್ಯರು ನಮ್ಮ ಬಂಧುಗಳು ಎನ್ನುವಂತೆ ನೋಡಿಕೊಂಡಿದ್ದಾರೆ. ಈ ಕ್ಯಾನ್ಸರ್ ಸೆಂಟರ್‌ನ ಎಲ್ಲರೂ ನನ್ನನ್ನು ಚೆನ್ನಾಗಿ ಆರೈಕೆ ಮಾಡಿದರು. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಯಬಯಸುತ್ತೇನೆ. ಇದು ತಮಾಷೆಯ ಮಾತಲ್ಲ, ಏಕೆಂದರೆ ಆಗಿರುವುದು ದೊಡ್ಡ ಆಪರೇಷನ್'.
'ಆದರೆ, ಯಾರೂ ನನ್ನ ಆಪರೇಷನ್ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ. ತುಂಬಾ ಸಿಂಪಲ್ ಆಗಿ ಆಪರೇಷನ್ ನಡೆದಿದೆ. ಆಪರೇಷನ್ ಬಗ್ಗೆ ವಿವರವಾಗಿ ಹೇಳಲು ಹೋದರೆ ಎಲ್ಲರೂ ಗಾಬರಿಯಾಗ್ತಾರೆ ಎನ್ನುವ ಭಯವಷ್ಟೇ. ಗಾಬರಿ ನಮಗೇ ಇರಲಿ. ನಮ್ಮ ಎಲ್ಲ ಹಂತದಲ್ಲೂ ನಮ್ಮೊಂದಿಗೆ ಇದ್ದೀರಿ ಎನ್ನುವುದೇ ಖುಷಿ. ನಿಮ್ಮೆಲ್ಲರ ಆಶೀರ್ವಾದವನ್ನು ನಾನು ಎಂದಿಗೂ ಮರೆಯುವುದಿಲ್ಲ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು' ಎಂದು ಹಾರೈಸಿದ್ದಾರೆ.
'ನಾನು ಶೀಘ್ರದಲ್ಲೇ ಹೊಸ ವರ್ಶನ್‌ನಲ್ಲಿ ನಿಮ್ಮ ಮುಂದೆ ಬರುತ್ತೇನೆ. ವೈದ್ಯರು ಮೊದಲ ತಿಂಗಳು ನಿಧಾನವಾಗಿ ಹೋಗುವಂತೆ ತಿಳಿಸಿದ್ದಾರೆ. ಬಳಿಕ ಕೆಲ ತಿಂಗಳ ನಂತರ ನಿಮ್ಮಂತೆಯೇ ಇರಿ ಎಂದಿದ್ದಾರೆ. ನಾನು ಖಂಡಿತ ನನ್ನ ಶೈಲಿಯಲ್ಲೇ ನಿಮ್ಮ ಮುಂದೆ ಬರಲಿದ್ದೇನೆ. ಐ ವಿಲ್ ಬಿ ಬ್ಯಾಕ್...! ಶಿವಣ್ಣ ಮೊದಲು ಹೇಗಿದ್ದನೋ, ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್, ಫೈಟ್, ಲುಕ್ ಎಲ್ಲದರಲ್ಲೂ ನಿಮ್ಮ ಆಶೀರ್ವಾದ ಇರುವತನಕ ಹಾಗೆಯೇ ಇರುತ್ತೇನೆ. ಎಲ್ರಿಗೂ ಲವ್ ಯೂ ಆಲ್, ಹ್ಯಾಪಿ ನ್ಯೂ ಇಯರ್' ಎಂದು ವಿಶ್ ಮಾಡಿ ಎನರ್ಜಿ ತುಂಬಿದ್ದಾರೆ.












Click it and Unblock the Notifications