ಶಿವಣ್ಣನಿಗೆ ಮಹತ್ವದ ಸ್ಥಾನ ಕೊಟ್ಟ ತಮಿಳು ನಟ ಕಮಲ್ ಹಾಸನ್
ಕನ್ನಡದಲ್ಲೂ ನಟಿಸಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರು ಡಾ.ರಾಜ್‌ಕುಮಾರ್ ಅವರ ಕುಟುಂಬದೊಂದಿಗೆ ತೀರಾ ಆಪ್ತತೆ ಹೊಂದಿದ್ದವರು. ರಾಜ್‌ಕುಮಾರ್ ಹಾಗೂ ಕಮಲ್ ಅವರ ಒಡನಾಟ ಹಲವು ದಶಕಗಳದ್ದು. ಇಂದಿಗೂ ಕಮಲ್ ರಾಜ್ ಕುಟುಂಬದೊಂದಿಗೆ ಅದೇ ಪ್ರೀತಿ, ಬಾಂಧವ್ಯ ಮುಂದುವರಿಸಿದ್ದಾರೆ. ತಮ್ಮ ಥಗ್ ಲೈಫ್ ಸಿನಿಮಾದ ಕಾರ್ಯಕ್ರಮದಲ್ಲೂ ಅವರು ರಾಜ್‌ಕುಮಾರ್ ಅವರ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಕೂಡ ಗೆಸ್ಟ್ ಆಗಿದ್ದರು. ಶಿವಣ್ಣನ ಬಗ್ಗೆಯೂ ಕಮಲ್ ಹಾಸನ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಶಿವರಾಜ್‌ಕುಮಾರ್ ಅವರನ್ನು ಎಲ್ಲರೂ ಶಿವಣ್ಣ ಎಂದು ಕರೆಯುತ್ತಾರೆ. ನಾನು ಹಾಗೆಯೇ ಕರೆಯುತ್ತೇನೆ. ಆದರೆ ನಿಜ ಹೇಳಬೇಕು ಅಂದ್ರೆ ನಾನು ಅವರಿಗೆ ಚಿಕ್ಕಪ್ಪ. ಅವರ ಹೆಸರು ಶಿವಣ್ಣ ಆಗಿರುವುದರಿಂದ ಸಹಜವಾಗಿ ಅಣ್ಣ ಎಂದು ಕರೆಯುತ್ತೇನೆ. ಕನ್ನಡ ಸೂಪರ್‌ಸ್ಟಾರ್ ನನಗಾಗಿ ಬಂದಿದ್ದಾರೆ. ಅವರು ನನ್ನ ಮಗನಾಗಿ, ನನ್ನ ಅಭಿಮಾನಿಯಾಗಿ ಇಲ್ಲಿಗೆ ಬಂದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಕಮಲ್ ಹಾಸನ್ ಶಿವಣ್ಣ ಅವರನ್ನು ಹಾಡಿಹೊಗಳಿದ್ದಾರೆ.

ನಾನು ಕಮಲ್ ಸರ್ ದೊಡ್ಡ ಅಭಿಮಾನಿ!
ಥಗ್ ಲೈಫ್ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ನನಗೆ ಏನು ಮಾತನಾಡಬೇಕೋ ಗೊತ್ತಿಲ್ಲ, ನಿಮ್ಮೆಲ್ಲರಂತೆ ನನಗೂ ಕೂಡ ಇದು ಫ್ಯಾನ್ ಮೂವ್‌ಮೆಂಟ್. ಯಾಕಂದ್ರೆ ನಾನು ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿ. ಅವರ ಸಿನಿಮಾಗಳನ್ನ ಫಸ್ಟ್ ಡೇ ಫಸ್ಟ್ ಶೋ ನೋಡುವ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ. ಕಮಲ್ ಸರ್ ಅವರ ಎಲ್ಲ ಸಿನಿಮಾಗಳನ್ನು ನಾನು ನೋಡಿದ್ದೀನಿ. ಅವರ ನಗು, ನಟನೆ ಎಲ್ಲವೂ ನನಗಿಷ್ಟ ಎಂದು ಶಿವಣ್ಣ ಹೇಳಿದ್ದಾರೆ.
ಒಮ್ಮೆ ಅವರು ನಮ್ಮ ಮನೆಗೆ ಬಂದಿದ್ರು, ಅಪ್ಪಾಜಿ ಅವರೊಂದಿಗೆ ಮಾತನಾಡ್ತಿದ್ರು. ಆಗ ನಾನು ಅವರನ್ನೇ ನೋಡುತ್ತಾ ನಿಂತಿದ್ದೆ. ಆಗ ಅಪ್ಪಾಜಿ ಯಾಕೋ ಮಗನೇ ಅಂತ ಕೇಳಿದ್ರು. ನನ್ನನ್ನು ಕಮಲ್ ಸರ್‌ಗೆ ಪರಿಚಯ ಮಾಡಿಕೊಟ್ರು. ಬಳಿಕ ನಾನು ನಿಮ್ಮನ್ನು ಒಮ್ಮೆ ತಬ್ಬಿಕೊಳ್ಳಬಹುದಾ ಎಂದು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡ್ರು. ಅದಾ ಮೂರು ದಿನ ನಾನು ಅದೇ ಗುಂಗಿನಲ್ಲೇ ಇದ್ದೆ. ಮೂರು ದಿನ ಸ್ನಾನ ಕೂಡ ಮಾಡಲಿಲ್ಲ. ಆ ರೀತಿ ನಾನು ಅವರಿಗೆ ದೊಡ್ಡ ಫ್ಯಾನ್ ಎಂದಿದ್ದಾರೆ.
ʼಅಪ್ಪಾಜಿ ಜೊತೆ ಮಾತನಾಡಿದಂತಿತ್ತುʼ
ನಾನು ಕ್ಯಾನ್ಸರ್ ಸರ್ಜರಿಗಾಗಿ ಅಮೇರಿಕಾದ ಮಿಯಾಮಿಗೆ ತೆರಳಿದ್ದೆ. ಈ ವೇಳೆ ಕಮಲ್ ಹಾಸನ್ ಅವರು ಕರೆ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾನು ಶಸ್ತ್ರಚಿಕಿತ್ಸೆಗಾಗಿ ಮಿಯಾಮಿಯಲ್ಲಿದ್ದಾಗ ಕಮಲ್ ಸರ್ ನನಗೆ ಫೋನ್ ಮಾಡಿ ಮಾತನಾಡಿದ್ರು, ಆ ಸಮಯದಲ್ಲಿ ಅವರು ಕೂಡ ಚಿಕಾಗೋದಲ್ಲಿದ್ದರು. ಅವರ ಕರೆ ನನಗೆ ನಿಜಕ್ಕೂ ಖುಷಿ ಕೊಟ್ಟಿತ್ತು. ಕಮಲ್ ಸರ್ ಹೇಳಿದ ಆ ಮಾತನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಅಪ್ಪಾಜಿ ಜೊತೆ ಮಾತನಾಡುತ್ತಿರುವಂತೆಯೇ ನನಗೆ ಆಗ ಭಾಸವಾಯಿತು ಎಂದು ಶಿವಣ್ಣ ನೆನೆದಿದ್ದಾರೆ.












Click it and Unblock the Notifications