ಸಿನಿಮಾ ಅವಕಾಶ ಸಿಗದೆ ಡ್ರೈವರ್ ಕೆಲಸ ಮಾಡ್ತಿದ್ದೀನಿ: 'ಜೋಗಿ' ಖ್ಯಾತಿಯ ನಟ ಉಮೇಶ್ ಪುಂಗ
ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಒಂದು ಲೆಕ್ಕದಲ್ಲಿ ಲಾಟರಿ ಇದ್ದಂಗೆ ಅಂತಾರೆ. ಸಾಲು ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ರೂ ಅವಕಾಶಗಳು ಹರಿದು ಬರುವುದು ಕನಸಿನ ಮಾತು. ಒಂದು ಕಾಲಕ್ಕೆ ಸಿನಿಮಾಗಳಲ್ಲಿ ಮಿಂಚಿದವರು ಅವಕಾಶಗಳಿಲ್ಲದೆ ಬದುಕು ನಡೆಸಲು ಪರದಾಡುತ್ತಿರುವ ನಿದರ್ಶನಗಳು ಸಾಕಷ್ಟು ನಮ್ಮ ಕಣ್ಣಮುಂದೆಯೇ ಇದೆ. ಈಗ ಇದೇ ಸಾಲಿನಲ್ಲಿ ಶಿವಣ್ಣ ನಟನೆಯ ಹಿಟ್ ಸಿನಿಮಾ "ಜೋಗಿ"ಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಉಮೇಶ್ ಪುಂಗ ಅವರು ಕಾಣಿಸಿಕೊಂಡಿದ್ದಾರೆ. ಅಂದು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದ ಪುಂಗ ಅವರು, ಅವಕಾಶಗಳಿಲ್ಲ ಹೊಟ್ಟೆಪಾಡಿಗಾಗಿ ಡ್ರೈವರ್ ಆಗಿ ಬದುಕು ನಡೆಸುತ್ತಿರುವ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಉಮೇಶ್ ಪುಂಗ ಅವರ ವಿಡಿಯೋ ತುಂಬಾ ವೈರಲ್ ಆಗಿದೆ. ಹುಚ್ಚ, ಮೆಜೆಸ್ಟಿಕ್, ಕರಿಯ, ಎಕ್ಸ್‌ಕ್ಯೂಸ್‌ಮಿ, ಜೋಗಿ, ಜೋಗಯ್ಯ, ರಾಜ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಉಮೇಶ್ ಅವರು ನಟಿಸಿದ್ದರು. ಹೀರೋಗಳ ಸ್ನೇಹಿತ, ಆಪ್ತ, ವಿಲನ್ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಸ್ಟಾರ್ ನಟರಾದ ಕಿಚ್ಚ ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಪುಂಗ.

ಆದರೆ ಜೋಗಿ ಸಿನಿಮಾದ ಪಾತ್ರದಿಂದಾಗಿ 'ಪುಂಗ' ಎನ್ನುವ ಹೆಸರು ಮನೆಮಾತಾಯಿತು. ತಮ್ಮ ಕಥೆ ಹೇಳಿಕೊಂಡಿರುವ ಅವರು, 'ನನಗೆ ರಾಜ್‌ಕುಮಾರ್ ಹಾಗೂ ರಜನಿಕಾಂತ್ ಅಂದ್ರೆ ತುಂಬಾ ಇಷ್ಟ. ನಾನು ಮೊದಲಿಗೆ ನಟ ಶಶಿಕುಮಾರ್ ಅವರ ಹತ್ತಿರ ಕೆಲಸ ಮಾಡುತ್ತಿದ್ದೆ. ಅವರ ಪರ್ಸನಲ್ ಡ್ರೈವರ್ ಆಗಿದ್ದೆ' ಎಂದು ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.
ಪುಂಗ ಹೆಸರಿನ ಹಿಂದೆ ರಜನಿಕಾಂತ್
'ಚೆನ್ನೈನಲ್ಲಿ ಬಾಷಾ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ರಜನಿಕಾಂತ್ ಅವರು ಅಲ್ಲೇ ಇದ್ರು. ನಾನು ಹೋಗಿ ನಮಸ್ಕಾರ ಅಣ್ಣ ಅಂದಿದ್ದಕ್ಕೆ, ಅವರು ಎದ್ದು ನಿಂತು ಏನ್ರೀ ಕನ್ನಡ ಮಾತನಾಡುತ್ತಿದ್ದೀರಿ ಎಂದು ಅಚ್ಚರಿಯಿಂದ ಮಾತನಾಡಿಸಿದ್ರು. ಆಗ ಶಶಿಕುಮಾರ್ ಅವರೂ ಅದೇ ಸಮಯಕ್ಕೆ ಅಲ್ಲಿಗೆ ಬಂದರು. ಏನ್ ಸರ್ ನಮ್ ಉಮೇಶ ಏನೋ ಹೇಳ್ತಿದ್ದಾನೆ ಅಂತ ತಮಾಷೆಯಾಗಿ ಕೇಳಿದ್ರು. ಆಗ ಕನ್ನಡ ಇಂಡಸ್ಟ್ರಿ ಬಂಗೆ ಪುಂಗ್ತಾ ಇದ್ದಾರೆ ಎಂದು ಜೋಕ್ ಮಾಡಿದ್ರು. ಆಗಿನಿಂದಲೂ ಶಶಿಕುಮಾರ್ ಅವರು ನನ್ನ ಪುಂಗ ಅಂತಲೇ ಕರೆಯುತ್ತಿದ್ರು. ನನಗೂ ಪುಂಗ ಅಂತ ಕರೆದರೆ ತುಂಬಾ ಖುಷಿಯಾಗುತ್ತಿತ್ತು. ಪುಂಗೇಶ್ವರ ಅನ್ನೋದು ಶಿವನ ಹೆಸರು. ಹಾಗಾಗಿ ಅದೇ ಹೆಸರಿನಿಂದಲೇ ನನ್ನ ಕರೆಯಲು ಶುರು ಮಾಡಿದ್ರು' ಎಂದು ತಮ್ಮ ಸಿನಿ ಜರ್ನಿ ಬಗ್ಗೆ ಉಮೇಶ್ ಅವರು ವಿವರಿಸಿದ್ದಾರೆ.
'ಬದುಕಿದ್ದಾಗಲೇ ನಮ್ಮನ್ನ ಗುರುತಿಸಿ'
ಉಸಿರು ಇರುವಾಗ ಪಾಪಿ ಅನ್ನೋ ಜನ, ಉಸಿರು ನಿಂತ ಮೇಲೆ ಅಯ್ಯೋ ಪಾಪ ಅಂದ್ರೆ ಏನು ಪ್ರಯೋಜನ? ಸತ್ತ ಮೇಲೆ ಕೊಡುವ ಬೆಲೆ ಯಾರಿಗೆ ಬೇಕು? ಬದುಕಿರುವಾಗಲೇ ನಮ್ಮನ್ನ ಗುರುತಿಸಿ, ಬದುಕುವುದಕ್ಕೂ ಬಿಡಿ. ಇಂದಿನ ಕನ್ನಡ ಇಂಡಸ್ಟ್ರಿಯಲ್ಲಿ ನಮ್ಮಂತ ಎಷ್ಟೋ ಹಳೆಯ ಕಲಾವಿದರು ಬದುಕಿದ್ದಾರೆ. ನಮ್ಮನ್ನೂ ಒಂದು ಚೂರು ಕಣ್ಣುಬಿಟ್ಟು ನೋಡ್ರಪ್ಪ. ಆವಾಗ ಬುದ್ಧಿ ಇಲ್ಲದೆ ಕುಡಿತದ ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಂಡೆ. ಈಗ ಬುದ್ಧಿ ಬಂದಿದೆ, ಆದ್ರೆ ಕೈಯಲ್ಲಿ ಕೆಲಸ ಇಲ್ಲ' ಎಂದು ಸಂಕಟ ಹೊರಹಾಕಿದ್ದಾರೆ.
'ಕನ್ನಡ ಇಂಡಸ್ಟ್ರಿ ಇವಾಗ ಬದಲಾಗಿದೆ. ಈಗೆಲ್ಲ ಸಖತ್ ಕಷ್ಟ, ಯಾವ ಶೂಟಿಂಗ್ ಇರಲ್ಲ. ಸರಿಯಾಗಿ ಕೆಲಸ ಇರಲ್ಲ. ನನಗೆ ಡ್ರೈವಿಂಗ್ ಕೆಲಸ ಗೊತ್ತಿರುವುದರಿಂದ ಅದೇ ಕೆಲಸ ಮಾಡ್ತೀನಿ. ನನಗೂ ಹೆಂಡತಿ, ಮಕ್ಕಳು ಇದ್ದಾರೆ, ಜೀವನ ಮಾಡಬೇಕಲ್ಲ, ಹೊಟ್ಟೆಪಾಡು' ಎಂದು ಬೇಸರದಿಂದ ಮಾತನಾಡಿದ್ದಾರೆ.












Click it and Unblock the Notifications