ಕಾಂತಾರ ಜೊತೆ ನನಗೆ ವೈಯಕ್ತಿಕ ಸಂಬಂಧವಿದೆ: ಖ್ಯಾತ ಗಾಯಕ ದಿಲ್ಜಿತ್ ದೋಸಾಂಜ್
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್-1 ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ಕಾಂತಾರ ಮೊದಲ ಸಿನಿಮಾದ ಹಾಡುಗಳು ವಿಶೇಷವಾಗಿ ಗಮನ ಸೆಳೆದಿದ್ದವು. ಅಜನೀಶ್ ಲೋಕನಾಥ್ ಅವರ ಸಂಗೀತಕ್ಕೆ ಜನ ಫಿದಾ ಆಗಿದ್ದರು. ಇದೀಗ ಕಾಂತಾರ ಪ್ರೀಕ್ವೆಲ್‌ಗೆ ಭಾರತದ ಖ್ಯಾತ ಗಾಯಕ-ನಟ ದಿಲ್ಜಿತ್ ದೋಸಾಂಜ್ (Diljit Dosanjh) ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಿಲ್ಜಿತ್ ಅವರು ರಿಷಬ್ ಜೊತೆಗಿನ ವಿಡಿಯೋ ಹಂಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಕಾಂತಾರ ಚಾಪ್ಟರ್-1ರಲ್ಲಿ ದಿಲ್ಜಿತ್ ಅವರು ಒಂದು ಹಾಡು ಹಾಡಿದ್ದಾರಂತೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.
ಈ ವಿಡಿಯೋದಲ್ಲಿ ದಿಲ್ಜಿತ್ ತಮಾಷೆಯಾಗಿ ಎಂಟ್ರಿ ನೀಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಅವರು ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಿದ್ದಾರೆ. ನಂತರ ಅವರು ಸ್ಟುಡಿಯೋದಲ್ಲಿ ರೆಕಾರ್ಡಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಅಜನೀಶ್ ಅವರೊಂದಿಗೆ ಮಾತನಾಡುತ್ತಾ ಒಟ್ಟಿಗೆ ಫೋಟೋಗೆ ಪೋಸ್ ಕೂಡ ನೀಡಿದ್ದಾರೆ. ಆ ವಿಡಿಯೋದಲ್ಲಿ ದಿಲ್ಜಿತ್ ಹಾಡನ್ನು ರೆಕಾರ್ಡ್ ಮಾಡುತ್ತಿರುವ ಮತ್ತು ರಿಷಬ್ ಜೊತೆ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸುಳಿವು ನೀಡಿರುವ ದಿಲ್ಜಿತ್, ಕಾಂತಾರದಂತಹ ಮಾಸ್ಟರ್‌ಪೀಸ್ ಸಿನಿಮಾ ನಿರ್ಮಿಸಿದ ಬಿಗ್ ಬ್ರದರ್ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದೆ. ಈ ವ್ಯಕ್ತಿಗೆ ನನ್ನ ನಮಸ್ಕಾರ. ನನಗೆ ಈ ಚಿತ್ರದೊಂದಿಗೆ ವೈಯಕ್ತಿಕ ಸಂಬಂಧವಿದೆ. ಅದನ್ನು ನಾನು ಹೇಳಲಾರೆ. ಆದರೆ ನಾನು ಚಿತ್ರಮಂದಿರಗಳಲ್ಲಿ ನೋಡುತ್ತಿದ್ದಾಗ ಕೊನೆಯಲ್ಲಿ "ವರಾಹ ರೂಪ" ಹಾಡು ಬಂದಾಗ ನಾನು ತುಂಬಾ ಭಾವಪರವಶನಾಗಿ ಅತ್ತಿದ್ದೆ ಎಂದು ನನಗೆ ನೆನಪಿದೆ ಎಂದಿದ್ದಾರೆ.
ಈಗ ಕಾಂತಾರ ಚಾಪ್ಟರ್-1 ಅಕ್ಟೋಬರ್ 2ರಂದು ನಿಮ್ಮ ಮುಂದೆ ಬರುತ್ತಿದೆ. ಇದನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಕಾಯಲು ಆಗುತ್ತಿಲ್ಲ. ಅಜನೀಶ್ ಲೋಕನಾಥ್ ಸರ್ ಅವರಿಗೆ ತುಂಬಾ ಧನ್ಯವಾದಗಳು. ನಿಮ್ಮಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದು ದಿಲ್ಜಿತ್ ಬರೆದುಕೊಂಡಿದ್ದಾರೆ.
ಕಾಂತಾರ ಆಲ್ಬಮ್‌ಗಾಗಿ ದಿಲ್ಜಿತ್
ಕಾಂತಾರ ಆಲ್ಬಮ್‌ಗಾಗಿ ದಿಲ್ಜಿತ್ ದೋಸಾಂಜ್ ಅವರೊಂದಿಗೆ ಕೈಜೋಡಿಸಲು ಉತ್ಸುಕನಾಗಿದ್ದೇನೆ. ಶಿವನ ಕೃಪೆಯಿಂದ ಎಲ್ಲವೂ ಸರಿಯಾಗಿ ನಡೆಯಿತು. ತುಂಬಾ ಪ್ರೀತಿಯಿಂದ, ಮತ್ತೊಬ್ಬ ಶಿವಭಕ್ತ ಕಾಂತಾರವನ್ನು ಭೇಟಿಯಾಗಿದ್ದಾರೆ ಎಂದು ರಿಷಬ್ ಶೆಟ್ಟಿ ಕೂಡ ಹೇಳಿದ್ದಾರೆ. ಹಾಗಾಗಿ ಕಾಂತಾರ ಪ್ರೀಕ್ವೆಲ್‌ನಲ್ಲಿ ದಿಲ್ಜಿತ್ ಅವರ ಧ್ವನಿಯಲ್ಲಿ ಒಂದು ಹಾಡು ಬರುವುದು ಖಚಿತವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಾಪ್ಟರ್ 1ಕ್ಕೆ ಬಂಡವಾಳ ಹಾಕಿದೆ. ಈ ಸಿನಿಮಾ ಕಾಂತಾರಗಿಂತಲೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಬಾಕ್ಸಾಫೀಸ್‌ನಲ್ಲಿ ಮತ್ತೆ ಶೇಕ್ ಮಾಡುವ ನಿರೀಕ್ಷೆಯಲ್ಲಿದೆ. ಈ ಸಿನಿಮಾ ಅಕ್ಟೋಬರ್ 2ರಂದು ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಿಲೀಸ್ ಆಗಲಿದೆ.












Click it and Unblock the Notifications