ಹೊಟ್ಟೆಯಲ್ಲಿ ಮಗು..ಸಂಪೂರ್ಣ ಸುಟ್ಟ ದೇಹ: ನಟಿ ಸೌಂದರ್ಯ ಸಾವಿನ ದಿನ ಆಗಿದ್ದೇನು?
ಬಹುಭಾಷಾ ನಟಿ ಸೌಂದರ್ಯ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿ ಎರಡು ದಶಕಗಳೇ ಕಳೆದಿದ್ದು, ಇದೀಗ ಇದು ಆಕಸ್ಮಿಕ ಸಾವಲ್ಲ ಕೊಲೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ. ಮಾಸಿ ಹೋಗಿದ್ದ ಘಟನೆಯೊಂದು ಈಗ ಹೊಸ ಗೊಂದಲ ಸೃಷ್ಟಿಸಿದೆ.
ಖ್ಯಾತ ತೆಲುಗು ಹಿರಿಯ ನಟನ ವಿರುದ್ಧ ನಟಿ ಸೌಂದರ್ಯ ಸಾವಿನ ಆರೋಪ ಕೇಳಿ ಬರುತ್ತಿದ್ದು, ಟಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಸೌಂದರ್ಯನ ಸಾವಿನ ದಿನ ಏನಾಯ್ತು? ಸೌಂದರ್ಯ ಮೃತದೇಹ ಯಾವ ಸ್ಥಿತಿಯಲ್ಲಿ ಪತ್ತೆಯಾಯ್ತು? ಮತ್ತೆ ಸುದ್ದಿ ಮುನ್ನೆಲೆಗೆ ಬಂದಿದ್ದೇಕೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಚಿತ್ರರಂಗದಲ್ಲಿ ಸೌಂದರ್ಯ ಎಂದೇ ಗುರುತಿಸಿಕೊಂಡಿದ್ದ ಅವರ ನಿಜವಾದ ಹೆಸರು ಸೌಮ್ಯಾ ಸತ್ಯನಾರಾಯಣ. ಕನ್ನಡದಲ್ಲಿ ಸಿಪಾಯಿ, ಶ್ರೀ ಮಂಜುನಾಥ ಆಪ್ತಮಿತ್ರ ಸೇರಿದಂತೆ ಹಿಟ್ ಸಿನಿಮಾಗಳನ್ನೇ ನೀಡಿದ್ದ ಸೌಂದರ್ಯ ಆ ಸಮಯದಲ್ಲಿ ಬಹುಭಾಷೆಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ಸೌಂದರ್ಯ ದುರಂತವಾಗಿ ಸಾವನ್ನಪ್ಪಿದರು.
2004ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷದ ಪ್ರಚಾರಕ್ಕಾಗಿ ಏಪ್ರಿಲ್ 17 ರಂದು ಸೌಂದರ್ಯ ಬೆಂಗಳೂರಿನಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಪ್ರಯಾಣಿಸುತ್ತಿದ್ದರು. ಸೌಂದರ್ಯ, ತಮ್ಮ ಸಹೋದರ ಅಮರ್‌ನಾಥ್, ಬಿಜೆಪಿ ಕಾರ್ಯಕರ್ತ ರಮೇಶ್ ಕದಮ್ ಮತ್ತು ಪೈಲಟ್ ಜಾಯ್ ಫಿಲಿಪ್ಸ್ ಅವರೊಂದಿಗೆ ವಿಮಾನ ಪ್ರಯಾಣ ಆರಂಭಿಸಿದ್ದರು.
ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನವು 150 ಅಡಿ ಎತ್ತರದಲ್ಲಿ ಎಡಕ್ಕೆ ಓರೆಯಾಗಿ ಚಲಿಸಲು ಆರಂಭಿಸಿ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಅಪ್ಪಳಿಸಿತು. ವಿಮಾನವು ಡಿಕ್ಕಿಯಾದ ರಭಸಕ್ಕೆ ಸ್ಫೋಟಗೊಂಡು ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ದುರಂತ ಅಂತ್ಯಕಂಡರು.

ಈ ವಿಮಾನದಲ್ಲಿ ಅವಘಡದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ತಮ್ಮ 32ನೇ ವಯಸ್ಸಿಗೆ ಕೊನೆಯುಸಿರೆಳೆದರು. ಗರ್ಭಿಣಿಯಾಗಿದ್ದ ಸೌಂದರ್ಯ ಅವರ ಮೃತದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಮಾನ ದುರಂತದ ಬಗ್ಗೆ ಅಂದು ತೀವ್ರ ತನಿಖೆಗಳು ನಡೆದಿದ್ದು, ಪೈಲಟ್ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿತ್ತು ಎನ್ನಲಾಗಿತ್ತು. ಆದರೆ ಬರೋಬ್ಬರಿ ಇಪ್ಪತ್ತು ವರ್ಷದ ಬಳಿಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ಆಕಸ್ಮಿಕ ಸಾವಲ್ಲ ಕೊಲೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಎರಡು ದಶಕಗಳ ಬಳಿಕ ನಟಿ ಸೌಂದರ್ಯ ಕೇಸ್‌ಗೆ ಬಿಗ್ ಟ್ವಿಸ್ಟ್
ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿ ಎರಡು ದಶಕಗಳು ಕಳೆದ ಬಳಿಕ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಹಿರಿಯ ತೆಲುಗು ನಟ ಮೋಹನ್ ಬಾಬು ವಿರುದ್ಧ ಸೌಂದರ್ಯ ಕೊಲೆಯ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದು, ದೂರುದಾರ ಚಿಟ್ಟಿಮಲ್ಲು ಸೌಂದರ್ಯ ಅವರದು ಸಾವು ಆಕಸ್ಮಿಕವಲ್ಲ, ಬದಲಾಗಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಡಿರುವ ಕೊಲೆ ಎಂದು ಆರೋಪಿಸಿದ್ದಾರೆ.
ಶಂಶಾಬಾದ್‌ನ ಹಳ್ಳಿಯಲ್ಲಿದ್ದ ಆರು ಎಕರೆ ಜಮೀನನ್ನು ಮಾರಾಟ ಮಾಡುವಂತೆ ಸೌಂದರ್ಯ ಮತ್ತು ಅವರ ಸಹೋದರನ ಮೇಲೆ ನಟ ಮೋಹನ್ ಬಾಬು ಒತ್ತಡ ಹೇರಿದ್ದರು. ಈ ವಿಚಾರದಿಂದ ಇಬ್ಬರ ನಡುವೆ ಸಂಘರ್ಷ ಉಂಟಾಗಿತ್ತು. ಆದರೆ ಸೌಂದರ್ಯ ಜಮೀನನ್ನು ಮಾರಾಟ ಮಾಡಲು ನೇರವಾಗಿ ನಿರಾಕರಿಸಿದ್ದರು. ಸೌಂದರ್ಯ ಅವರ ಸಾವಿನ ನಂತರ ಮೋಹನ್ ಬಾಬು ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿಲಾಗಿದೆ. ಈ ಆರೋಪ ಹಾಗೂ ದೂರಿನ ಬಗ್ಗೆ ಸ್ಥಳೀಯ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಕೂಡ ಬಹಿರಂಗಪಡಿಸಿಲ್ಲ. ಅದೇನೇ ಇರಲಿ, ಚಿಟ್ಟಿಮಲ್ಲು ಎನ್ನುವವರು ನೀಡಿರುವ ಈ ಹೊಸ ದೂರಿನಿಂದ ನಟಿ ಸೌಂದರ್ಯ ಅವರ ಸಾವಿನ ರಹಸ್ಯದ ಬಗ್ಗೆ ಕೂತೂಹಲ ಹೆಚ್ಚಾಗಿರುವುದಂತೂ ಸತ್ಯ.












Click it and Unblock the Notifications