New Year 2025: ಈ ವರ್ಷ ತೆರೆ ಕಾಣುವ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಇಲ್ಲಿದೆ
2024ರ ವರ್ಷವನ್ನು ಯಶಸ್ವಿಯಾಗಿ ಮುಗಿಸಿರುವ ನಾವು 2025ನ್ನು ಈಗಾಗಲೇ ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದೇವೆ. 2025ರ ಹೊಸ ವರ್ಷ ಹೊಸತನದೊಂದಿಗೆ ಹೊಸ ಹರುಷ ತರಲಿ, ಹೊಸ ಮನೋರಂಜನೆ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಚಿತ್ರಗಳು ಬರಲಿ ಎಂದು ಆಶಿಸುವವರಿಗಾಗಿ ಈ ಸುದ್ದಿ. 2025ರಲ್ಲಿ ತೆರೆ ಕಾಣಲು ಸಜ್ಜಾಗಿರುವ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ಇಲ್ಲಿದೆ.

ಕಾಂತಾರ ಚಾಪ್ಟರ್ 1
ಕಾಂತಾರ ಬಹುದೊಡ್ಡ ಯಶ್ವಸಿನ ನಂತರ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೈಗೆತ್ತಿಕೊಂಡ ಸಿನಿಮಾವೇ ಕಾಂತಾರ ಚಾಪ್ಟರ್ 1. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದ್ದಾರೆ. ದೈವ-ದೇವರ ಕಥಾಹಂದರ ಹೊಂದಿರುವ ಈ ಸಿನಿಮಾ 2025ರ ಅಕ್ಟೋಬರ್ 2 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ.

ಟಾಕ್ಸಿಕ್
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು 2025ರಲ್ಲಿ ಹಬ್ಬ ಮಾಡಲು ಸಜ್ಜಾಗಿ. ಕೆಜಿಎಫ್ 2 ಬಳಿಕ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಈ ವರ್ಷ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಗೀತು ಮೋಹನ್ ದಾಸ್ ನಿರ್ದೇಶನ, ವೆಂಕಟ್ ನಾರಾಯಣ್ ನಿರ್ಮಾಣದ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾ 2025 ವರ್ಷದ ಅಂತ್ಯದಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ಕೆಡಿ
ಕಳೆದ ವರ್ಷ ಮಾರ್ಟಿನ್ ಸಿನಿಮಾ ನೀಡಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಈ ವರ್ಷದ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಶಿವ ಹಾಡು ವೈರಲ್ ಆಗುತ್ತಿದ್ದು, ಜನರಿಗೆ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕೆಡಿ ಚಿತ್ರಕ್ಕೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ವೆಂಕಟ್ ನಾರಾಯಣ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾ ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

45
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸುವ ಸಿನಿಮಾವೊಂದು ತಯಾರಾಗುತ್ತಿದೆ. ಅರ್ಜುನ್ ಜನ್ಯ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 45 ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗಲಿದೆ. ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಒಟ್ಟಾಗಿ ನಟಿಸಿರುವ ಈ ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಮೂವರು ಘಟಾನುಘಟಿ ನಾಯಕರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ.

ಡೆವಿಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರ ಈ ವರ್ಷ ಬಿಡುಗಡೆಯಾಗಲಿದೆ. 2024ರ ಡಿಸೆಂಬರ್‌ನಲ್ಲೇ ತೆರೆ ಕಾಣಬೇಕಿದ್ದ ಡೆವಿಲ್ ದರ್ಶನ್ ಜೈಲು ಸೇರಿದ ಕಾರಣ ಸ್ಥಗಿತಗೊಂಡಿತ್ತು. ಇದೀಗ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಈ ವರ್ಷ ಡೆವಿಲ್ ಸಿನಿಮಾ ತೆರೆ ಮೇಲೆ ಬರುವುದು ಖಚಿತವಾಗಿದೆ.

ಕರಾವಳಿ ಮತ್ತು ಮಾಫಿಯಾ
ಈ ವರ್ಷ ಪ್ರಜ್ವಲ್ ದೇವರಾಜ್ ನಟಿಸಿರುವ ಕರಾವಳಿ ಮತ್ತು ಮಾಫಿಯಾ ಎರಡು ಸಿನಿಮಾಗಳು ಬಿಡುಗಡೆಯಾಗಲಿದೆ. ಕರಾವಳಿಯ ಸಾಂಸ್ಕೃತಿಕ ವೈಭವ ಹೊಂದಿರುವ ಕರಾವಳಿ ಸಿನಿಮಾ 2025ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಮಾಫಿಯಾ ಸಿನಿಮಾ ಹೆಸರೇ ಹೇಳುವಂತೆ ಮಾಸ್ ಸಿನಿಮಾವಾಗಿದ್ದು, ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಛೂ ಮಂತರ್
ಕರ್ವ ಸಿನಿಮಾ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಮೂಡಿಬಂದಿರುವ ನಟ ಶರಣ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಛೂ ಮಂತರ್ ಈ ವರ್ಷದ ಆರಂಭದಲ್ಲೇ ಬಿಡುಗಡೆಯಾಗಲಿದೆ. ಡಾರ್ಕ್ ಹ್ಯೂಮರ್ ಜಾನರ್ನ ಹಾರರ್ ಆಗಿರುವ ಈ ಸಿನಿಮಾ ಜನವರಿ 10ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
Image Credit- Instagram












Click it and Unblock the Notifications