Hebbuli Cut film: ನನ್ನ ಶೇವಿಂಗ್, ಕಟಿಂಗ್ ನಾನೇ ಮಾಡಿಕೊಳ್ಳುತ್ತೇನೆ: ಬಿಜೆಪಿ ನಾಯಕ ಹೀಗಂದಿದ್ದೇಕೆ?
ಬೆಂಗಳೂರು, ಜುಲೈ 07: ಇತ್ತೀಚೆಗೆ ಸದಭಿರುಚಿಯ, ಅಪರೂಪದ ಕಥಾವಸ್ತು ಹೊಂದಿರುವ ಸಿನಿಮಾ ಕನ್ನಡದಲ್ಲಿ ತೆರೆಕಂಡಿದೆ. ಹೊಸಬರೇ ಸೇರಿಕೊಂಡು ಮಾಡಿರುವ ಈ 'ಹೆಬ್ಬುಲಿ ಕಟ್' ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ. KRG ಸ್ಟುಡಿಯೋ ಸಿನಿಮಾ ವಿತರಿಸಿದೆ. ಸಿನಿಮಾದಲ್ಲಿ ತೋರಿಸುವ ಕಥೆ, ದೃಶ್ಯಗಳು ಕಹಿ ಸತ್ಯವಾಗಿವೆ. "ಹೆಬ್ಬುಲಿ ಕಟ್" ಸಿನಿಮಾ ನನ್ನ ಜೀವನದ ಪ್ರತಿಬಿಂಬ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಹೇಳಿದ್ದಾರೆ.
ಜುಲೈ 4ರಂದು "ಹೆಬ್ಬುಲಿ ಕಟ್" (Hebbuli Cut Movie) ಕನ್ನಡದಲ್ಲಿ ರಾಜ್ಯಾದ್ಯಂತ ತೆರೆಗೆ ಬಂದಿದೆ. ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ''ಇದು ಕೇವಲ ಒಂದು ಸಿನಿಮಾ ಅಲ್ಲ...ಇದು ನನ್ನ ಜೀವನದ ಕಹಿ ಸತ್ಯ. ಇದು ಸಮಾಜಕ್ಕೆ ಒಂದು ನಿಜವಾದ ಪಾಠ'' ಎಂದು ಅವರು ತಿಳಿಸಿದ್ದಾರೆ. ''ನಿಮಗೆ ಅಚ್ಚರಿ ಅನ್ನಿಸಬಹುದು. ನೀವು ನಂಬುವುದಿಲ್ಲ. ಇಂದಿಗೂ ನನ್ನ ಕ್ಷೌರವನ್ನು ನಾನೇ ಮಾಡಿಕೊಳ್ಳುತ್ತೇನೆ. ಸಿನಿಮಾದಲ್ಲಿ ತೋರಿದಂತೆಯ ಪರಿಸ್ಥಿತಿಯನ್ನು ನಾನು ಬಾಲ್ಯದಲ್ಲಿ ಕಳೆದಿದ್ದೇನೆ. ಹೀಗಾಗಿ ಈ 'ಹೆಬ್ಬುಲಿ ಕಟ್' ನನಗೆ ತುಂಬಾ ಆಪ್ತವಾಗುತ್ತದೆ. ಏಕೆಂದರೆ ನನ್ನ ಜೀವನದಲ್ಲಿ ನಾನು ಅನುಭವಿಸಿದ ನೋವು, ಹೋರಾಟ ಮತ್ತು ಹೆಮ್ಮೆ ಎಲ್ಲವೂ ಈ ಸಿನಿಮಾದಲ್ಲಿ ಪ್ರತಿಬಿಂಬಿತವಾಗಿವೆ ಎಂದು ಹೇಳಿದ್ದಾರೆ.

'ಹೆಬ್ಬುಲಿ ಕಟ್' ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ನನ್ನ ಕಣ್ಮುಂದೆ ನನ್ನ ಜೀವನವನ್ನೆ ನೋಡಿದಂತಾಯಿತು. ಸಿನಿಮಾದಲ್ಲಿ ಕಟು ಸತ್ಯ ತೋರಿಸಲಾಗಿದೆ. ನನಗೆ 11 ವರ್ಷ ಇದ್ದಾಗ ಹಳ್ಳಿಯಲ್ಲಿ ನನಗೆ ಕಟಿಂಗ್ ಮಾಡಲಿಲ್ಲ. ಹೀಗಾಗಿ ಇವತ್ತಿಗೂ ಕಟಿಂಗ್ ಮತ್ತು ಶೇವಿಂಗ್ ನಾನೇ ಮಾಡಿಕೊಳ್ಳುತ್ತೇನೆ. ಇದನ್ನು ಬಹುಶಃ ನೀವು ನಂಬಲ್ಲ ಎಂದು ಹೇಳಿದರು.
ಸಿನಿಮಾದಲ್ಲಿ ತೋರಿಸಿದಂತೆ ಆಗ ಮೂರು ತಿಂಗಳಿಗೆ ಒಮ್ಮೆ ಕ್ಷೌರಿಕರು ಹಳ್ಳಿಗೆ ಬರುತ್ತಿದ್ದರು. ಊರಿನ ಎಲ್ಲ ಅಸ್ಪೃಶ್ಯರಿಗೆ ಒಂದೇ ಬಾರಿಗೆ ಕಟಿಂಗ್ ಮಾಡುತ್ತಿದ್ದರು. ಅವರು ಬಾರದೇ ಇದ್ದಾಗ ನಮ್ಮ ಅಪ್ಪ ತಲೆ ಮೇಲೆ ಒಂದು ದುಂಡನೆಯ ಬಟ್ಟಲು ಇಟ್ಟು ಸೈಡ್ ಇರುವ ಕೂದಲು ಕತ್ತರಿಸುತ್ತಿದ್ದರು. ಕಟಿಂಗ್ ಮಾಡುತ್ತಿದ್ದರು. ಬಳಿಕ ಅದು ಟೋಪಿ ಹಾಕಿದ ರೀತಿ ಕಾಣಿಸುತ್ತಿತ್ತು. ಜನ ನಮ್ಮನ್ನು ನೋಡಿ ನಗುತ್ತಿದ್ದರು...
ಈ ಸಿನಿಮಾದ ಕಥೆ ಸಮಾಜಕ್ಕೆ ಪಾಠ
ನಗುವ ಜನರನ್ನು ನೋಡಿ ನನಗೆ ಆಗಲೇ ಇಂತಹ ಪರಿಸ್ಥಿತಿ ವಿರುದ್ಧ ಬೇರೆ ಏನಾದರು ಮಾಡಬೇಕು ಎಂದನಿಸಿತ್ತು. ಇದೀಗ ಅಂತಹದ್ದೇ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಕಥೆ ಸಮಾಜಕ್ಕೆ ಇದೊಂದು ಪಾಠ. ಯಾರು ಅಸ್ಪೃಶ್ಯತೆಯನ್ನು ಪಾಲನೆ ಮಾಡುತ್ತಾರೋ ಅವರಿಗೆ ಪಾಠ ಎಂದು ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ. ಸಿನಿಮಾ ಯಶಸ್ವಿಯಾಗಲಿ. ಸಮಾಜ ಬದಲಾಗಲಿ. ಚಿಂತನೆಯಲ್ಲಿ ಕ್ರಾಂತಿ ಬರಲಿ. ಎಲ್ಲರೂ ತಪ್ಪದೇ ಈ ಸಿನಿಮಾ ನೋಡಿ ಎಂದು ಅವರು ಮನವಿ ಮಾಡಿದ್ದಾರೆ.

ಹೇಗಿದೆ ಹೆಬ್ಬುಲಿ ಕಟ್? ನೋಡಿದವರ ಹೇಳಿದ್ದೇನು?
ಹೆಬ್ಬುಲಿ ಕಟ್ ಹೊಸ ರೂಪದ ಕಥೆ. ನಿರ್ದೇಶಕ ಭೀಮರಾವ್ ಅವರು ಸೂಕ್ಷ್ಮ ಕಥೆಯನ್ನು, ಗಂಭೀರ ವಿಷಯವನ್ನು ಮನಮುಟ್ಟುವಂತೆ ಹೆಣೆದ ಸಿನಿಮಾ. ಹೊಸಬರು ಅಪರೂಪದ ಕತಾವಸ್ತುವಿನ ಜೊತೆಗೆ ಬರುತ್ತಾರೆ ಎಂಬ ಮಾತನ್ನು 'ಹೆಬ್ಬುಲಿ ಕಟ್'ನಿಜವಾಗಿಸಿದೆ. ಪ್ರೇಕ್ಷಕ ಪ್ರಭುಗಳಿಂದ ಸಿನಿಮಾ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.
ಕೆಲವು ಜಾತಿ ಜನರನ್ನು ಕ್ಷೌರದ ಅಂಗಡಿಯೊಳಗೆ ಬಿಟ್ಟುಕೊಡುವುದಿಲ್ಲ. ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಆಚರಣೆ ಹೇಗಿರುತ್ತದೆ ಎಂಬುದರ ಮೇಲೆ ಕಥೆ ಸಾಗುತ್ತದೆ. ಉತ್ತರ ಕರ್ನಾಟಕದ ಹಳ್ಳಿ ಭಾಗದ ಸಿನಿಮಾ ಶೂಟಿಂಗ್ ಆಗಿದೆ. ಕೆಳಜಾತಿಯ ಹೈಸ್ಕೂಲ್ ಓದುವ ಬಾಲಕನೊಬ್ಬ ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾದಲ್ಲಿ ನಾಯಕ ಹೇರ್‌ಸ್ಟೈಲ್‌ನಂತೆ ತಾನು ಮಾಡಿಸಿಕೊಳ್ಳಬೇಕೆಂದು ಬಯಸುತ್ತಾನೆ. ತನ್ನ ಹೇರ್ ಸ್ಟೈಲ್ ಮೇಲೆ ಅಪಾರ ಪ್ರೀತಿ ಹೊಂದಿರುತ್ತಾನೆ. ಅದಕ್ಕಾಗಿ ಆತ ಏನೆಲ್ಲ ಮಾಡುತ್ತಾನೆ. ಆತನನ್ನು ಕ್ಷೌರದಂಗಡಿಗೆ ಬಿಟ್ಟುಕೊಳ್ಳುತ್ತಾರಾ? ಇಲ್ಲವಾ?, ಇದೇ ಹುಡುಗನಿಗೆ ಮೇಲು ಜಾತಿ ಹುಡುಗಿ ಮೇಲೆ ಒನ್‌ಸೈಡ್ ಲವ್ ಆಗುತ್ತದೆ. ಮುಂದೇನಾಗುತ್ತದೆ ಎಂಬುದೇ ಕಥೆ ತಿರುಳು. ಸಿನಿಮಾ ನೋಡಿದವರು ಒಂದೊಳ್ಳೆ ಕಥೆಯ ಸಿನಿಮಾ ಇದು ಎಂದು ಆಶಿಸಿದ್ದಾರೆ. ಇದೀಗ ಅದೇ ಸಾಲಿಗೆ ಛಲವಾದಿ ನಾರಾಯಣಸ್ವಾಮಿ ಅವರು ಸಹ ಸೇರಿದ್ದಾರೆ.












Click it and Unblock the Notifications