Hansika: ತಪ್ಪಾದ ರೈಲಿನಿಂದ ಇಳಿಯುವುದೇ ಉತ್ತಮ: ಡಿವೋರ್ಸ್ ಬಗ್ಗೆ ಬಿಂದಾಸ್ ನಟಿ ಹನ್ಸಿಕಾ ಮೋಟ್ವಾನಿ ಸ್ಪಷ್ಟನೆ
Hansika Motwani Divorce: ಪುನೀತ್ ರಾಜ್‌ಕುಮಾರ್ ನಟನೆಯ 'ಬಿಂದಾಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದ ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಪತಿ, ಉದ್ಯಮಿ ಸೊಹೈಲ್ ಕತುರಿಯಾ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಮಾರ್ಚ್ 11ರಂದು ಈ ದಂಪತಿಗೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಮಂಜೂರು ಮಾಡಿದೆ. ಇದರೊಂದಿಗೆ ಸುಮಾರು ಮೂರು ವರ್ಷಗಳ ಇವರ ವೈವಾಹಿಕ ಬಾಂಧವ್ಯಕ್ಕೆ ತೆರೆ ಬಿದ್ದಿದೆ. ಈ ಬಗ್ಗೆ ಹನ್ಸಿಕಾ ಕೊನೆಗೂ ಮೌನ ಮುರಿದಿದ್ದಾರೆ.
ಡಿವೋರ್ಸ್‌ಗೆ ಕಾರಣವೇನು?
2022ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಈ ಜೋಡಿ, ಕಳೆದ ಕೆಲವು ಸಮಯದಿಂದ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಿದ್ದರು. ಹೊಂದಾಣಿಕೆಯಾಗದ ಕಾರಣಗಳಿಂದಾಗಿ 2024ರ ಜುಲೈನಿಂದಲೇ ಹನ್ಸಿಕಾ ಮತ್ತು ಸೊಹೈಲ್ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ವಿಶೇಷವೆಂದರೆ ಡಿವೋರ್ಸ್ ಸಮಯದಲ್ಲಿ ಇಬ್ಬರೂ ಯಾವುದೇ ರೀತಿಯ ಜೀವನಾಂಶವನ್ನು ಪರಸ್ಪರ ಕೋರಿಲ್ಲ ಎನ್ನಲಾಗಿದೆ.

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಹನ್ಸಿಕಾ, "ನನ್ನ ಕುಟುಂಬದವರು ಯಾವುದೇ ವಿಷಯಕ್ಕೂ ನನ್ನ ಮೇಲೆ ಒತ್ತಡ ಹೇರುವುದಿಲ್ಲ. ಜನರಿಗೆ ಬೇಕಾದ ಹೆಡ್‌ಲೈನ್‌ಗಳು ಮತ್ತು ಸುದ್ದಿಗಳು ಸಿಕ್ಕಿವೆ. ನಾನು ಈ ಬಗ್ಗೆ ಎಂದೂ ಸ್ಪಷ್ಟನೆ ನೀಡಿಲ್ಲ ಮತ್ತು ಮುಂದೆ ನೀಡುವುದೂ ಇಲ್ಲ, ಏಕೆಂದರೆ ಅದು ನನಗೆ ಮುಖ್ಯವಲ್ಲ" ಎಂದು ನೇರವಾಗಿ ಹೇಳಿದ್ದಾರೆ.
ತಮ್ಮ ನಿರ್ಧಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, "ತಪ್ಪಾದ ರೈಲು ಹತ್ತಿದ ಮೇಲೆ ಅದರಲ್ಲಿ ಕುಳಿತು ಅನುಭವಿಸುವುದಕ್ಕಿಂತ, ಆದಷ್ಟು ಬೇಗ ಇಳಿಯುವುದು ಉತ್ತಮ. ಹಾಗಾಗಿ ಈ ನಿರ್ಧಾರದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ನನ್ನ ಕುಟುಂಬದ ಬೆಂಬಲ ನನಗಿದೆ ಮತ್ತು ಸದ್ಯ ನಾನು ಇರುವ ಸ್ಥಿತಿಯಲ್ಲಿ ತುಂಬಾ ಸಂತೋಷವಾಗಿದ್ದೇನೆ" ಎಂದು ಹೇಳುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯದ ಬಗ್ಗೆಯೂ ಮಾತನಾಡಿದ್ದಾರೆ.
ಇಂದಿನ ಹುಡುಗಿಯರು ತುಂಬಾ ಬಲಶಾಲಿಗಳು
ಮದುವೆ ಮತ್ತು ತಾಯ್ತನದ ಬಗ್ಗೆ ಸಮಾಜವು ಹೆಣ್ಣುಮಕ್ಕಳ ಮೇಲೆ ಹೇರುವ ಕಾಲಮಿತಿಯನ್ನು ಹನ್ಸಿಕಾ ಪ್ರಶ್ನಿಸಿದ್ದಾರೆ. "ನನಗೆ ಇಂತಿಷ್ಟೇ ವಯಸ್ಸಾಗಿದೆ, ನೀನು ಮದುವೆಯಾಗಲೇಬೇಕು ಎಂದು ನನ್ನನ್ನು ಯಾರೂ ಎಂದೂ ಒಂದು ಚೌಕಟ್ಟಿಗೆ ಹಾಕಿಲ್ಲ. ಏನು ಮಾಡಬೇಕು ಎಂದು ಹೇಳುವವರು ಈ ಜಗತ್ತಿನಲ್ಲಿ ನೂರಾರು ಜನ ಇರುತ್ತಾರೆ. ಆದರೆ ಇಂದಿನ ಹುಡುಗಿಯರು ತುಂಬಾ ಬಲಶಾಲಿಯಾಗಿದ್ದಾರೆ ಮತ್ತು ಸ್ವತಂತ್ರರಾಗಿದ್ದಾರೆ. ಅವರಿಗೆ ಯಾವುದು ಒಳ್ಳೆಯದು ಎಂಬುದನ್ನು ಅವರೇ ನಿರ್ಧರಿಸುತ್ತಾರೆ" ಎಂದು ಹನ್ಸಿಕಾ ಹೇಳಿದ್ದಾರೆ.
ಈ ಹಿಂದೆ ಮದುವೆಗೆ 25 ಅಥವಾ 30 ವರ್ಷ ಸರಿಯಾದ ವಯಸ್ಸು ಎನ್ನಲಾಗುತ್ತಿತ್ತು, ಈಗ ಅದು 40ಕ್ಕೆ ಬಂದು ನಿಂತಿದೆ. ಇವುಗಳನ್ನು ನಿರ್ಧರಿಸುವವರು ಯಾರು? ಎಂದು ಪ್ರಶ್ನಿಸಿರುವ ಅವರು, "ಮದುವೆಯಾದ ತಕ್ಷಣ ಮಗು ಬೇಕು ಎಂದು ಒತ್ತಾಯಿಸುತ್ತಾರೆ. ಒಂದು ವೇಳೆ ಆ ನಿರ್ಧಾರ ನಿಮಗೆ ಸರಿ ಅನಿಸದಿದ್ದರೆ ಅದನ್ನು ಮಾಡಬೇಡಿ. ಸುಮ್ಮನೆ ಅಂತಹ ಒತ್ತಡಗಳನ್ನು ಏಕೆ ತೆಗೆದುಕೊಳ್ಳಬೇಕು?" ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಣೆಯಲ್ಲಿ ಬರೆದಿದ್ರೆ ಆಗುತ್ತೆ
ಪ್ರೀತಿ ಎಂಬುದು ಸುಂದರವಾದ ಅನುಭವ ಎಂದು ಬಣ್ಣಿಸಿರುವ ಹನ್ಸಿಕಾ, ಸಂಬಂಧಗಳಿಗಾಗಿ ತಮ್ಮನ್ನು ತಾವು ಕಳೆದುಕೊಳ್ಳಬಾರದು ಎಂಬ ಕಿವಿಮಾತನ್ನೂ ಹೇಳಿದ್ದಾರೆ. "ಪ್ರೀತಿಯಲ್ಲಿ ಬೀಳುವುದು ಒಳ್ಳೆಯದೇ, ಆದರೆ ಅದಕ್ಕೆ ಸರಿಯಾದ ಸಮಯ ಯಾವುದು ಎಂಬುದು ನನಗೆ ತಿಳಿದಿಲ್ಲ. ಬ್ರಹ್ಮಾಂಡವೇ ನನಗೆ ದಾರಿ ತೋರಿಸುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಹಣೆಬರಹದಲ್ಲಿ ಬರೆದಿದ್ದರೆ ಅದು ಖಂಡಿತಾ ಸಂಭವಿಸುತ್ತದೆ" ಎಂದಿದ್ದಾರೆ.
"ಯಾವುದೇ ಸಂಬಂಧಕ್ಕಾಗಿ ನಿಮ್ಮನ್ನು ನೀವು ಏಕೆ ಕಳೆದುಕೊಳ್ಳಬೇಕು? ಮೊದಲು ನೀವು ನಿಮಗೆ ಗೌರವ ಕೊಡಬೇಕು, ಆಗ ಮಾತ್ರ ನೀವು ಇನ್ನೊಬ್ಬರನ್ನು ಗೌರವಿಸಲು ಸಾಧ್ಯ" ಎಂದು ಹೇಳುವ ಮೂಲಕ ಸ್ವಾವಲಂಬಿ ಬದುಕಿನ ಮಹತ್ವವನ್ನು ಒತ್ತಿ ಹೇಳಿದ್ದಾರೆ. ವಿಚ್ಛೇದನದ ನಂತರವೂ ಹನ್ಸಿಕಾ ಅವರು ಆತ್ಮವಿಶ್ವಾಸದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಜ್ಜಾಗಿದ್ದಾರೆ.













Click it and Unblock the Notifications