ಮಹಾನಟಿಗೆ ಬಂದು ತಪ್ಪು ಮಾಡಿದ್ರಾ ನಟಿ ಗಗನ?
ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಿಟಿ ಶೋ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟ ಚಿತ್ರದುರ್ಗ ಮೂಲದ ನಟಿ ಗಗನ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ರಿಯಾಲಿಟಿ ಶೋನಲ್ಲಿ ಕೂಡ ಮಿಂಚುತ್ತಿದ್ದಾರೆ. ಈ ಹಿಂದೆ ವೇದಿಕೆಯ ಮೇಲೆ ನಟಿ ಗಗನ ಜೀ ಕನ್ನಡದ ಪ್ರತಿಯೊಂದು ಶೋನಲ್ಲಿಯೂ ತಾನು ಇರಬೇಕು ಎನ್ನುವ ಆಸೆ ಹೊರಹಾಕಿದ್ದರು.
ಅದರಂತೆ ಒಂದಾದ ಮೇಲೋಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಗಗನ ಅದ್ಯಾಕೋ ಈಗ ಈ ಕ್ಷೇತ್ರದ ಬಗ್ಗೆ ಬೇಸರಗೊಂಡಂತೆ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದ್ದು, ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಗಗನ ಇಲ್ಲಿಗೆ ಬಂದು ತಪ್ಪು ಮಾಡಿದೆನಾ? ಎನ್ನುವ ಗೊಂದಲವನ್ನು ಹೊರಹಾಕಿದ್ದಾರೆ.

'ನಾನು ಮನೋರಂಜನಾ ಕ್ಷೇತ್ರಕ್ಕೆ ಬಂದು ಕೇವಲ ಒಂದು ವರ್ಷ ಆಗಿದೆ. ಜೀ ಕನ್ನಡಕ್ಕೆ ಒಂದು ವರ್ಷ ಆಗಿದೆ. ಮುಂಚೆ ಐಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದು ಸಂಪೂರ್ಣವಾಗಿ ಬೇರೆ ಜೀವನವೇ ಆಗಿತ್ತು. ಆ ಸಮಯದಲ್ಲಿ ಮಹಾನಟಿಗೆ ಬಂದು, ಮಹಾನಟಿಯಿಂದ ಡಾನ್ಸ್ ಕರ್ನಾಟಕ ಡಾನ್ಸ್ ಮುಗಿಸಿ, ಈಗ ಭರ್ಜರಿ ಬ್ಯಾಚುಲರ್ಸ್ ೨ ಶೋ ಮಾಡುತ್ತಿದ್ದೇನೆ. ಈ ಸೆಲೆಬ್ರೆಟಿ ಜೀವನವನ್ನು ನಾನಷ್ಟೇ ಅಲ್ಲದೇ ನಮ್ಮ ಕುಟುಂಬದವರು ಕೂಡ ಎಂಜಾಯ್ ಮಾಡುತ್ತಿದ್ದಾರೆ. ನಮ್ಮ ಕುಟುಂಬದವರು ಎಲ್ಲಿಗೆ ಹೋದರು ಜನ ಗುರುತಿಸುತ್ತಿದ್ದಾರೆ. ನನ್ನನ್ನು ಕೂಡ ಜನ ಗುರುತಿಸಿ ಮಾತನಾಡಿಸಿದಾಗ ಖುಷಿ ಆಗುತ್ತದೆ' ಎಂದರು.
'ಈ ಕ್ಷೇತ್ರದಲ್ಲಿ ಎಷ್ಟು ಪಾಸಿಟಿವ್ ಇದೆಯೋ, ಅಷ್ಟೇ ನೆಗೆಟಿವ್ ವಿಚಾರಗಳು ಕೂಡ ಇದೆ. ಬೇಜಾರು ಕೂಡ ಇದೆ. ಇದು ಬೇಕಿತ್ತಾ, ಐಟಿಯಲ್ಲೇ ಕೆಲಸ ಮಾಡಬಹುದಿತ್ತಾ, ಇಲ್ಲಿಗೆ ಬಂದು ತಪ್ಪು ಮಾಡಿದೆನಾ?, ಇದು ಒಳ್ಳೆಯದಾ? ಕೆಟ್ಟದಾ? ಎನ್ನುವ ಆಲೋಚನೆಯಲ್ಲೇ ದಿನ ಕಳೆಯುತ್ತಿದೆ. ಇನ್ನೂ ಕೂಡ ಇದರ ಬಗ್ಗೆ ಯೋಚನೆ ಮಾಡುತ್ತಲೇ ಇದ್ದೇನೆ' ಎಂದು ಹೇಳಿದರು.
ತಮ್ಮ ಮುಂದಿನ ಹೆಜ್ಜೆ ಬಗ್ಗೆ ಮಾತನಾಡಿದ ಗಗನ, ' ನನ್ನ ಪ್ರಕಾರ ಭರ್ಜರಿ ಬ್ಯಾಚುಲರ್ಸ್ ೨ ಶೋ ಇನ್ನೂ ಒಂದೂವರೆ ತಿಂಗಳು ಬರುತ್ತದೆ. ಅದಾದ ಮೇಲೆ ನನ್ನದೇ ಆದ ಯಾವುದೇ ಯೋಚನೆಗಳಿಲ್ಲ. ನಾನು ಜೀವನ ಬಂದಂತೆ ಸ್ವೀಕರಿಸುವವಳು. ಹೀಗಾಗಿ ಯಾವ ಅವಕಾಶ ಮುಂದೆ ಸಿಗುತ್ತದೆ ನೋಡೋಣಾ ಅಂತಾ ಇದ್ದೇನೆ. ಜೊತೆಗೆ ಐಟಿಯಲ್ಲಿ ಕೆಲಸ ಮಾಡಿದ ಅನುಭವ ಕೂಡ ಇದ್ದು, ಅಲ್ಲಿನ ಲೆಟರ್‌ಅನ್ನು ಕೂಡ ತೆಗೆದು ಇಟ್ಟಿದ್ದೇನೆ. ಇಲ್ಲಿ ಯಾವಾಗ ಬೋರ್ ಅನಿಸುತ್ತದೆ ಆಗ ಅಲ್ಲಿಗೆ ಹೋಗುತ್ತೇನೆ. ಒಂದು ವೇಳೆ ಇಲ್ಲಿಯೇ ಒಳ್ಳೆಯ ಅವಕಾಶಗಳು ಬಂದು ಜನ ನನ್ನನ್ನು ಇನ್ನಷ್ಟು ಇಷ್ಟಪಟ್ಟರೆ ಖಂಡಿತಾವಾಗಿಯೂ ಇಲ್ಲೇ ಇರುತ್ತೇನೆ. ರಾಯರು ನನ್ನನ್ನು ಇಟ್ಟಹಾಗೆ ಇರುತ್ತೇನೆ' ಎಂದು ಹೇಳಿದರು.












Click it and Unblock the Notifications