ಅನ್ನ ಕದ್ದು ತಿಂದ ದಿನಗಳಿಂದ ಫಿನಾಲೆ ವೇದಿಕೆವರೆಗೆ: ಗಿಲ್ಲಿ–ಕಾವ್ಯ ಕಥೆ ಕೇಳಿ ಕಣ್ಣೀರಿಟ್ಟ ಬಿಗ್‌ಬಾಸ್ ಮನೆಮಂದಿ
ಬಿಗ್‌ಬಾಸ್ ಕನ್ನಡ ಸೀಸನ್-12 ಫಿನಾಲೆ ಹಂತ ತಲುಪುತ್ತಿದ್ದಂತೆ, ಮನೆಯೊಳಗಿನ ವಾತಾವರಣ ಸಂಪೂರ್ಣವಾಗಿ ಭಾವುಕವಾಗಿದೆ. ಇಲ್ಲಿವರೆಗೆ ಪ್ರೇಕ್ಷಕರನ್ನು ನಗು, ಜಗಳ, ಆಟಗಳಿಂದ ರಂಜಿಸಿದ್ದ ಸ್ಪರ್ಧಿಗಳು, ಫಿನಾಲೆ ಹೊಸ್ತಿಲಲ್ಲಿ ತಮ್ಮ ಜೀವನದ ನೋವು-ನಲಿವು, ಏಳುಬೀಳುಗಳ ಕಥೆಗಳನ್ನು ಹೃದಯಬಿಚ್ಚಿ ಹಂಚಿಕೊಂಡಿದ್ದಾರೆ. ಈ ಕ್ಷಣಗಳು ಬಿಗ್‌ಬಾಸ್ ಮನೆಯನ್ನೇ ಮೌನಗೊಳಿಸಿದ್ದು, ಸ್ಪರ್ಧಿಗಳ ಕಣ್ಣೀರು ಉಳಿದವರ ಮನಸನ್ನೂ ತಟ್ಟಿದೆ.
ಫಿನಾಲೆ ರೇಸ್‌ನಲ್ಲಿರುವ ಗಿಲ್ಲಿ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ರಘು, ಅಶ್ವಿನಿ ಗೌಡ ಹಾಗೂ ಧನುಷ್ ಗೌಡ ತಮ್ಮ ಬದುಕಿನ ಕಷ್ಟಕರ ಅಧ್ಯಾಯಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಪ್ರತಿಯೊಬ್ಬರ ಕಥೆಯೂ ನೋವಿನಿಂದ ತುಂಬಿದ್ದು, "ಸೆಲೆಬ್ರಿಟಿ" ಎನ್ನುವ ಮುಖವಾಡದ ಹಿಂದೆ ಮರೆತಿರುವ ಸಂಕಷ್ಟಗಳ ನಿಜ ಚಿತ್ರಣವನ್ನು ಹೊರಹಾಕಿದೆ.

ಮಲಗೋ ಜಾಗಕ್ಕೆ ಒದ್ದಾಡಿದೆ
ಅತ್ಯಂತ ಭಾವುಕವಾಗಿ ಮಾತನಾಡಿದ ಗಿಲ್ಲಿ, "ನನ್ನ ಜೀವನದಲ್ಲಿ ನಾನು ಒದ್ದಾಡಿದ್ದು ಮಲಗೋಕೆ ಜಾಗಕ್ಕಾಗಿಯೇ ಎಂದಿದ್ದಾರೆ. ಜನರು ದುಡ್ಡು, ಚಿನ್ನ ಕದ್ದ ಕಥೆ ಕೇಳಿರುತ್ತೀರಿ. ಆದರೆ ನಾನು ಅನ್ನ ಕದ್ದು ತಿಂದ ದಿನಗಳಿವೆ" ಎಂದು ಹೇಳಿದಾಗ, ಮನೆಯೊಳಗೆ ಸಂಪೂರ್ಣ ಮೌನ ಆವರಿಸಿತು. ಅವರ ಈ ಮಾತುಗಳು ಕೇಳುತ್ತಿದ್ದಂತೆಯೇ ರಕ್ಷಿತಾ ಹಾಗೂ ಉಳಿದವರ ಕಣ್ಣು ತುಂಬಿ ಬಂತು. ಕಷ್ಟದ ದಿನಗಳಲ್ಲಿ ಹಸಿವನ್ನು ತಣಿಸಲು ಮಾಡಿದ ಹೋರಾಟ, ಇಂದು ಫಿನಾಲೆ ಹಂತಕ್ಕೆ ತಲುಪಿರುವ ಅವರ ಪಯಣವನ್ನು ಇನ್ನಷ್ಟು ದೊಡ್ಡದಾಗಿಸಿದೆ.
ಬೀದಿಗೊಬ್ಬ ನಟ, ಇದೆಲ್ಲ ಆಗಲ್ಲ
ಕಿರುತೆರೆ ನಟನಾಗಿ ಗುರುತಿಸಿಕೊಂಡಿರುವ ಧನುಷ್ ಗೌಡ ಕೂಡ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು."ಪ್ರತಿ ಬೀದಿಗೂ ಒಬ್ಬ ಹೀರೋ ಇರ್ತಾನೆ. ನಟನಾಗೋದು ಸುಲಭ ಅಲ್ಲ. ಇದು ಆಗದ ಕೆಲಸ ಅಂತ ಹಲವರು ಹೇಳಿದರು" ಎಂದು ತಮ್ಮ ವೃತ್ತಿ ಜೀವನದ ಆರಂಭದ ನಿರಾಶೆಗಳನ್ನು ಹಂಚಿಕೊಂಡರು. ಅವರ ಮಾತುಗಳಲ್ಲಿ ಅಸಹಾಯಕತೆ ಜೊತೆಗೆ ಹಠವೂ ಸ್ಪಷ್ಟವಾಗಿ ಕಾಣಿಸಿಕೊಂಡಿತು.
ನೋವಿನ ದಿನಗಳು, ಕಣ್ಣೀರಿನ ಕತೆಗಳೇ ಸಾಧನೆಗೆ ಸ್ಫೂರ್ತಿ
— Colors Kannada (@ColorsKannada) January 16, 2026
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/kbddfnsNdm
ಅಕ್ಕಿ ತರಲು ಲೆಕ್ಕಾಚಾರ
ಇನ್ನು ಕಾವ್ಯ ಶೈವ ತಮ್ಮ ಬಾಲ್ಯದ ಸಂಕಷ್ಟಗಳನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು. "ಹಾಲು ತರುವುದಕ್ಕೂ ಹಣ ಇರಲಿಲ್ಲ. ಅಕ್ಕಿಯನ್ನೂ ಲೆಕ್ಕಾಚಾರ ಹಾಕಿಕೊಂಡೇ ತರುತ್ತಿದ್ದೆವು" ಎಂದು ಹೇಳುವಾಗ ಅವರ ಧ್ವನಿ ಕಂಪಿಸುತ್ತಿತ್ತು. ಬದುಕಿನ ಪ್ರತಿದಿನವೂ ಲೆಕ್ಕಾಚಾರ, ಕೊರತೆಗಳ ನಡುವೆಯೇ ಸಾಗಿದ್ದ ಆ ದಿನಗಳು ಕಾವ್ಯ ಅವರ ಮಾತುಗಳಲ್ಲಿ ಜೀವಂತವಾಗಿ ಮೂಡಿಬಂದವು.
ಅಶ್ವಿನಿ ಗೌಡ ತಮ್ಮ ತಂದೆಯನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತರು. "ನನ್ನ ಮಗಳೇ ದೇವರು ಕೊಟ್ಟ ವರ ಅಂತ ನನ್ನ ತಂದೆ ಹೇಳ್ತಿದ್ರು" ಎಂದು ಹೇಳಿದಾಗ, ಅವರ ಮಾತುಗಳಲ್ಲಿ ತಂದೆಯ ಪ್ರೀತಿ, ಕುಟುಂಬದ ಹೋರಾಟ ಎಲ್ಲವೂ ಮಿಶ್ರಣಗೊಂಡಿತ್ತು. ಈ ಮಾತುಗಳು ಕೇಳಿ ಮನೆಯಲ್ಲಿದ್ದವರೂ ಭಾವುಕರಾದರು.

ಪ್ರತಿ ಸ್ಪರ್ಧಿಯ ಕಥೆಯೂ ಒಂದೊಂದು ಪಾಠದಂತಿದ್ದು, ಕಷ್ಟಗಳ ನಡುವೆಯೇ ಕನಸು ಕಟ್ಟಿಕೊಂಡು ಮುಂದೆ ಬಂದ ಬದುಕಿನ ಕಥೆಗಳಾಗಿವೆ. ಈ ಭಾವುಕ ಕ್ಷಣಗಳಲ್ಲಿ ಬಿಗ್‌ಬಾಸ್ ಮನೆ ಕೇವಲ ಸ್ಪರ್ಧೆಯ ವೇದಿಕೆ ಅಲ್ಲ, ಬದಲಾಗಿ ಬದುಕಿನ ನಿಜ ಕಥೆಗಳು ಅನಾವರಣಗೊಂಡ ವೇದಿಕೆಯಾಗಿ ಪರಿಣಮಿಸಿತು. ಫಿನಾಲೆ ಹತ್ತಿರವಾಗುತ್ತಿದ್ದಂತೆ ಪ್ರೇಕ್ಷಕರಿಗೂ ಸ್ಪರ್ಧಿಗಳು ಇನ್ನಷ್ಟು ಹತ್ತಿರವಾಗಿದ್ದು, ಗೆಲುವಿಗಿಂತಲೂ ದೊಡ್ಡದು ಅವರ ಜೀವನದ ಹೋರಾಟ ಎಂಬ ಸಂದೇಶವನ್ನು ಈ ಕಣ್ಣೀರಿನ ಕ್ಷಣಗಳು ಮತ್ತೊಮ್ಮೆ ಸಾಬೀತುಪಡಿಸಿವೆ.












Click it and Unblock the Notifications