ಖ್ಯಾತ ನಿರ್ದೇಶಕನ ಸಿನಿಮಾ ಶೂಟಿಂಗ್ ಮೇಲೆ ದಾಳಿ, ಶುರುವಾಯ್ತಾ ನಟ್ಟು-ಬೋಲ್ಟ್ ಟೈಟ್?
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿನಿಮಾದವರು ಬರಲಿಲ್ಲ ಎಂಬ ಕಾರಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಯಾರಿಗೆ ಎಲ್ಲಿ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಪರ ವಿರೋಧದ ಚರ್ಚೆ ನಡೆಯುತ್ತಿರುವಾಗಲೇ ಕನ್ನಡ ಸಿನಿಮಾವೊಂದರ ಶೂಟಿಂಗ್‌ಗೆ ಅಡ್ಡಿಪಡಿಸಲಾಗಿದೆ. ಡಿಕೆಶಿ ಹೇಳಿಕೆ ಬೆನ್ನಲ್ಲೇ ಅಧಿಕಾರಿಗಳು ಶೂಟಿಂಗ್‌ಗೆ ಅಡ್ಡಿಪಡಿಸಿರುವುದು ಅನುಮಾನ ಮೂಡಿಸಿದೆ.
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ ಅವರ ಸಿನಿಮಾ ಶೂಟಿಂಗ್ ಬಂದ್ ಮಾಡಿರುವುದಾಗಿ ವರದಿಯಾಗಿದೆ. ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ನಾಮದ ಚಿಲುಮೆ ಅರಣ್ಯ ಪ್ರದೇಶದಲ್ಲಿ ತರುಣ್ ಸುಧೀರ್ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವಿಚಾರ ತಿಳಿದು ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ನಾಮದ ಚಿಲುಮೆ ಅರಣ್ಯ ಪ್ರದೇಶದಲ್ಲಿ ಯಾವುದೇ ಅನುಮತಿ ಇಲ್ಲದೇ ಚಿತ್ರತಂಡ ಶೂಟಿಂಗ್ ಮಾಡುತ್ತಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ ಚಿತ್ರತಂಡದ ಶೂಟಿಂಗ್ ಲೈಟ್ ಸೇರಿದಂತೆ ಕೆಲ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಸಿನಿಮಾವನ್ನು ತರುಣ್ ಸುಧೀರ್ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನೂ ಹೆಸರಿಡದ ಸಿನಿಮಾ ಶೂಟಿಂಗ್ ಅರಣ್ಯ ಭೂಮಿಯಲ್ಲಿ ನಡೆದ ಆರೋಪದ ಮೇರೆಗೆ ತುಮಕೂರಿನ ಸಹಾಯಕ ಸಂರಕ್ಷಣಾಧಿಕಾರಿಗಳ ತಂಡ ದಾಳಿ ನಡೆಸಿದೆ. ಇನ್ನು ಕಳೆದ ಐದು ದಿನಗಳಿಂದ ಚಿತ್ರತಂಡ ಇಲ್ಲಿ ಶೂಟಿಂಗ್ ನಡೆಸುತ್ತಿರುವುದು ತಿಳಿದುಬಂದಿದೆ. ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಚಿತ್ರತಂಡದ ಶೂಟಿಂಗ್ ಲೈಟ್, ಚೇರ್‌ಗಳು, ಅಡುಗೆ ಸಾಮಾಗ್ರಿಗಳು ಹಾಗೂ ಶೂಟಿಂಗ್ ವಾಹನವನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ತುಮಕೂರಿನ ಪ್ರಸಿದ್ಧ ನಾಮದ ಚಿಲುಮೆ ಗೇಟ್ ಬಳಿ ಶೂಟಿಂಗ್ ನಡೆದಿದ್ದು, ದಾಳಿ ವೇಳೆ ತರುಣ್ ಸುಧೀರ್ ಕ್ರಿಯೇಟಿವ್ ಚಿತ್ರತಂಡ ಅಲ್ಲೇ ಇತ್ತು ಎನ್ನಲಾಗಿದೆ. ಈ ಸಿನಿಮಾದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಕ್ಯಾರವಾನ್, ಕ್ಯಾಮರಾ ಲೈಟ್ ಸೇರಿದಂತೆ ಸಿನಿಮಾ ಶೂಟಿಂಗ್‌ಗೆ ಸಂಬಂಧಿಸಿದ ಪರಿಕರಗಳು ಪತ್ತೆಯಾಗಿವೆ.
ನಾಮದ ಚಿಲುಮೆಯು ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ವನ್ಯ ಜೀವಿಗಳಿರುವ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಶೂಟಿಂಗ್ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೂ ಇಲ್ಲಿನ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುತ್ತೆ ಎಂದು ಸ್ಥಳೀಯರಿಂದ ವಿರೋಧವೂ ವ್ಯಕ್ತವಾಗಿದೆ. ಶೂಟಿಂಗ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಚಿತ್ರರಂಗದವರ ಮೇಲೆ ಕೋಪದಿಂದ ಆಡಿರುವ ಮಾತುಗಳ ನಡುವೆಯೇ ಈ ಘಟನೆ ನಡೆದಿರುವುದು ಸಂಚಲನ ಸೃಷ್ಟಿಸಿದೆ. ಡಿಕೆಶಿ ಹೇಳಿದಂತೆ ನಟ್ಟು ಬೋಲ್ಟು ಟೈಟ್ ಮಾಡಲು ಶುರು ಮಾಡಿದ್ರಾ? ಎಂಬ ಚರ್ಚೆಯೂ ನಡೆಯುತ್ತಿದೆ.
ತರುಣ್ ಸುಧೀರ್ ಹೇಳಿದ್ದೇನು?
ಶೂಟಿಂಗ್ ಮಾರ್ಗ ಮಧ್ಯೆ ನಮ್ಮ ಪ್ರೊಡಕ್ಷನ್ ಗಾಡಿ ನಿಂತಿತ್ತು. ಊಟಕ್ಕಾಗಿ ಒಂದು ಲೈಟ್ ಹಾಕಲಾಗಿತ್ತು. ಇದನ್ನ ತಪ್ಪಾಗಿ ತಿಳಿದುಕೊಂಡಿದ್ದ ವ್ಯಕ್ತಿ ಶೂಟಿಂಗ್ ಎಂದು ದೂರು ಕೊಟ್ಟಿದ್ದಾರೆ. ನಮಗೆ ಅದು ನಾಮದ ಚಿಲುಮೆ ಹಾಗು ಅರಣ್ಯ ಜಾಗ ಅನ್ನೋದೆ ಮಾಹಿತಿ ಇರಲಿಲ್ಲ. ಪಾರ್ಕಿಂಗ್ ಜಾಗ ಇದ್ದಿದ್ದರಿಂದ ಗಾಡಿ ನಿಲ್ಲಿಸಿದ್ರು. ಯಾವ ಸೀಜ್ ಕೂಡ ಆಗಿಲ್ಲ. ಇಲಾಖೆ ಕಾನೂನು ಪ್ರಕಾರ ದಂಡ ಹಾಕಿದ್ರು, ಅದನ್ನು ಕಟ್ಟಿದ್ದೇವೆ ಎಂದು ತರುಣ್ ಸುಧೀರ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications