Shiva Rajkumar: ಶಿವಣ್ಣನನ್ನ ಅದ್ಧೂರಿಯಾಗಿ ಸ್ವಾಗತಿಸಲು ಫ್ಯಾನ್ಸ್ ಸಿದ್ಧತೆ ಹೇಗಿದೆ?
ನಟ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇದೇ ವಾರ ಅವರು ಅಮೇರಿಕಾದಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕಾಗಿ ಅಮೇರಿಕಾಗೆ ತೆರಳಿದ್ದ ಅವರು ಸರ್ಜರಿ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಚೇತರಿಸಿಕೊಂಡಿರುವ ಕಾರಣ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಈ ಹಿನ್ನೆಲೆ ಶಿವಣ್ಣನ ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಶಿವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆ ಅವರನ್ನು ಅದ್ಧೂರಿಯಾಗಿ ವೆಲ್‌ಕಮ್ ಮಾಡಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಆ ದಿನ ಬೆಂಗಳೂರಿನಲ್ಲಿ ದೊಡ್ಡ ಹಬ್ಬ ಮಾಡಲು ತಯಾರಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಶಿವಣ್ಣನ ಅಭಿಮಾನಿಗಳು ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದು, ಕಾಲನ ಯುದ್ಧ ಗೆದ್ದು ತಾಯ್ನಾಡಿಗೆ ಮರಳುತ್ತಿರುವ ಮೃತ್ಯುಂಜಯನ ಬರ ಮಾಡಿಕೊಳ್ಳಲು ಶಿವಸೈನ್ಯ ಸರ್ವ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಜನವರಿ 26ರಂದು ನಟ ಶಿವರಾಜ್‌ಕುಮಾರ್ ಅವರು ಅಮೇರಿಕಾದಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಈ ವೇಳೆ ಶಿವಣ್ಣನನ್ನು ಭರ್ಜರಿಯಾಗಿ ಸ್ವಾಗತ ಮಾಡಲು ಅಭಿಮಾನಿಗಳು ಹಲವು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅಂದು ಬೆಳಿಗ್ಗೆ ಕೆಂಪೇಗೌಡ ಏರ್‌ಪೋರ್ಟ್‌ನ ಟೋಲ್ ಗೇಟ್ ಬಳಿಯಿಂದ ನಾಗವಾರದ ಬಳಿ ಇರುವ ನಟ ಶಿವರಾಜ್ ಕುಮಾರ್ ಅವರ ನಿವಾಸದವರೆಗೆ ಬೃಹತ್ ಮೆರವಣಿಗೆ, ರೋಡ್ ಶೋ ನಡೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ಶಿವಣ್ಣನ ಅಭಿಮಾನಿಗಳು ಮಾಸ್ ಮೃತ್ಯುಂಜಯ ಶಿವಣ್ಣ ಅವರಿಗೆ ಆದರದ ಸುಸ್ವಾಗತ, ಅಭಿಮಾನಿಗಳ ಹೊಸ ವರ್ಷದ ಅದ್ದೂರಿ ಸಂಭ್ರಮಾಚರಣೆ ಬೆಳಿಗ್ಗೆ 9 ಗಂಟೆಗೆ ನಾಗವಾರದ ಶ್ರೀಮುತ್ತು ನಿವಾಸದ ಬಳಿ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಟ ಶಿವರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಬಹಿರಂಗವಾಗಿತ್ತು. ಈ ಹಿನ್ನೆಲೆ ಅವರು ಸರ್ಜರಿಗಾಗಿ ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಸಂಸ್ಥೆಗೆ ತೆರಳಿದ್ದರು. ಸರಿಸುಮಾರು ಒಂದು ತಿಂಗಳಿನಿಂದ ಅವರು ಅಮೇರಿಕಾದಲ್ಲೇ ಇದ್ದರು. ಡಿಸೆಂಬರ್‌ನಲ್ಲಿ ಅವರಿಗೆ ಸರ್ಜರಿ ನಡೆದಿತ್ತು. ಬಳಿಕ ಶಿವರಾಜ್‌ಕುಮಾರ್ ಅವರೇ ಖುದ್ದಾಗಿ ವಿಡಿಯೋ ಹಂಚಿಕೊಳ್ಳುವ ಮೂಲಕ ನಾನು ಗುಣಮುಖನಾಗಿದ್ದೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಮುಂದೆ ಇನ್ನೂ ಎನರ್ಜಿಯಿಂದ ವಾಪಸ್ ಬರುತ್ತೇನೆ ಎಂದು ಹೇಳಿದ್ದರು. ಈ ಹಿನ್ನೆಲೆ ಅಭಿಮಾನಿಗಳು ಶಿವಣ್ಣನ ಬರುವಿಕೆಗಾಗಿ ಕಾಯುತ್ತಿದ್ದು, ಹಬ್ಬದಂತೆ ಸಂಭ್ರಮಿಸಲು ಮುಂದಾಗಿದ್ದಾರೆ.

ಶೂಟಿಂಗ್‌ಗೆ ಆತುರ ಬೇಡ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಶಿವರಾಜ್ ಕುಮಾರ್ ಅವರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರೀತಿಯ ಶಿವಣ್ಣ, ನೀವು ಪೂರ್ಣಗುಣಮುಖರಾಗಿ ಭಾರತಕ್ಕೆ ಬರುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದ್ದಾರೆ. ಅಮೇರಿಕಾದ ಮಯಾಮಿಯಲ್ಲಿರುವ ನನ್ನ ಸೋದರ 'ಅಕ್ಕ' ಬಳಗದ ನಾಗರಾಜು ನಾಗತಿಹಳ್ಳಿ ನಿಮ್ಮನ್ನು ಭೇಟಿಯಾಗಿರುವುದು ನನಗೆ ಖುಷಿ ತಂದಿದೆ. ಅಪಾರ ಜೀವನೋತ್ಸಾಹಿಗಳಾದ ನೀವು ಬಂದ ಕೂಡಲೇ ಚಿತ್ರೀಕರಣಕ್ಕೆ ಧುಮುಕಬೇಡಿ, ವಿಶ್ರಾಂತಿ ಇರಲಿ. ನಿಮ್ಮ ಆರೋಗ್ಯ ಎಲ್ಲಕ್ಕಿಂತ ಮುಖ್ಯ ಎಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ಮನವಿ ಮಾಡಿದ್ದಾರೆ.












Click it and Unblock the Notifications