ಪುನೀತ್, ಸುದೀಪ್, ಶಿವಣ್ಣನಿಗೆ ಹಿರಿಯ ನಟನ ಹೆಸರಲ್ಲಿ ಕೆಟ್ಟ ಕಾಮೆಂಟ್ಸ್ ಹಾಕಿದ್ಯಾರು?
ಸೋಷಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯಗಳು ದೊಡ್ಡ ಅನಾಹುತಗಳನ್ನೇ ಸೃಷ್ಟಿಸುತ್ತಿವೆ. ಇತ್ತೀಚೆಗಷ್ಟೇ ನಟಿ ರಮ್ಯಾ ಅವರ ವಿರುದ್ಧ ದರ್ಶನ್ ಅವರ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡಿರುವ ವಿಚಾರ ದೊಡ್ಡ ಕಿಚ್ಚನ್ನೇ ಹೊತ್ತಿಸಿದೆ. ಇದೀಗ ಸ್ಯಾಂಡಲ್‌ವುಡ್ ನಟರಾದ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಬಗ್ಗೆಯೂ ನನ್ನ ಹೆಸರಿನಲ್ಲಿ ಕೆಟ್ಟ ಕೆಟ್ಟ ಕಾಮೆಂಟ್ ಮಾಡಿದ್ದಾರೆ ಎಂದು ಹಿರಿಯ ನಟ, ನಿರ್ದೇಶಕ ಎಸ್.ನಾರಾಯಣ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಅವರು ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ಸಹ ಕೊಟ್ಟಿದ್ದಾರೆ. ಸ್ಟಾರ್ ನಟರಿಗೆ ಹೇಗೆಲ್ಲ ಕೆಟ್ಟ ಕಾಮೆಂಟ್ ಮಾಡಿದ್ದಾರೆ ಎಂದು ಎಸ್.ನಾರಾಯಣ್ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
'ನಾನು ಎಕ್ಸ್ (ಟ್ವಿಟರ್) ಖಾತೆ ಬಳಸಲ್ಲ. ನನ್ನ ಅಕೌಂಟ್ ಕೂಡ ಇಲ್ಲ. ಯಾರೋ ಅದನ್ನ ನನ್ನ ಹೆಸರಿನಲ್ಲಿ ಓಪನ್ ಮಾಡಿಕೊಂಡು ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳ ಫೋಟೋ ಹಾಕಿದ್ದಾರೆ. ಅಲ್ಲದೆ ಆ ನಟರನ್ನ ನಾನು ತೆಗಳುವ ಹಾಗೆ ಪೋಸ್ಟ್‌ಗಳನ್ನ ಹಾಕಲಾಗಿದೆ. ಈ ರೀತಿ ಸಾವಿರಾರು ಮೆಸೇಜ್, ಫೋಟೋಗಳು ಬರ್ತಿವೆ. ಈ ವಿಚಾರ ನನಗೆ ನಾಲ್ಕು ದಿನದ ಹಿಂದೆ ಗೊತ್ತಾಯಿತು. ಇದನ್ನ ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಯ್ತು. ಹಾಗಾಗಿ ನಾನು ಪೊಲೀಸರಿಗೆ ದೂರು ಕೊಡುವುದು ನನ್ನ ಕರ್ತವ್ಯ. ಮುಂದೆ ಯಾವುದೇ ಅನಾಹುತಗಳಾಗಬಾರದು ಎಂದು ನಾನು ಬೆಂಗಳೂರು ಪೊಲೀಸ್ ಕಮೀಷನರ್ ಅವರಿಗೆ ದೂರು ಕೊಟ್ಟಿದ್ದೇನೆ' ಎಂದು ಎಸ್.ನಾರಾಯಣ್ ಹೇಳಿದ್ದಾರೆ.

'ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ತುಂಬಾ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಆದರೆ ನಾನು ಪುನೀತ್ ಉತ್ತಮ ಬಾಂಧವ್ಯ ಹೊಂದಿದ್ದೆವು. ಅವರಿಗೆ ಸಿನಿಮಾ ಕೂಡ ಮಾಡಿದ್ದೀನಿ. ಇನ್ನು ಸುದೀಪ್, ಶಿವಣ್ಣ ಅವರೊಂದಿಗೂ ನಾನು ಚೆನ್ನಾಗಿ ಇದ್ದೇನೆ, ಅವರ ಬಗ್ಗೆಯೂ ಕೆಟ್ಟ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಯುವರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾ ಬಗ್ಗೆ ಏನೇನೋ ಹಾಕಿದ್ದಾರೆ. ಆ ಸಿನಿಮಾ ಬಗ್ಗೆ ನಾನು ಕೆಟ್ಟದಾಗಿ ಕಾಮೆಂಟ್ ಮಾಡಿದಂತಿದೆ' ಎಂದು ವಿವರಿಸಿದ್ದಾರೆ.
'ಆದರೆ ಈ ಯಾವ ನಟರು ಕೂಡ ನನಗೆ ಫೋನ್ ಮಾಡಿ, ಈ ಬಗ್ಗೆ ಯಾವುದೇ ಪ್ರಶ್ನೆ ಮಾಡಲಿಲ್ಲ. ನನ್ನ ಸ್ವಭಾವ ಅವರಿಗೆಲ್ಲ ಗೊತ್ತಿರುವುದರಿಂದ ಅವರು ಯಾರೂ ಅಪಾರ್ಥ ಮಾಡಿಕೊಳ್ಳಲ್ಲ. ಆದರೆ ಮುಂದೆ ಇದರಿಂದ ಏನೆಲ್ಲ ಸಮಸ್ಯೆಗಳಾಗಬಹುದು? ಸಮಾಜಕ್ಕೆ ಮಾರಕವಾದ ಸುದ್ದಿ ಬಂದು, ಇಂಡಸ್ಟ್ರಿಗೆ ಹಾನಿಯಾಗಬಹುದು ಎಂಬ ಮುಂಜಾಗ್ರತೆಯಿಂದಾಗಿ ನಾನು ಮೊದಲೇ ದೂರು ಕೊಡುತ್ತಿದ್ದೇನೆ' ಎಂದು ಹೇಳಿದ್ದಾರೆ.
ನನ್ನ ಹೆಸರಿಗೆ ಮಸಿ ಬಳಿಯಲು ಕೃತ್ಯ
'ಈ ಎಲ್ಲ ಕೃತ್ಯಗಳನ್ನು ನೋಡಿದರೆ ನನಗೆ ಕೆಟ್ಟ ಹೆಸರು ತರಬೇಕು ಎಂದೇ ಇದೆಲ್ಲ ಮಾಡಿದಂತೆ ಕಾಣುತ್ತಿದೆ. ಇವರಿಗೆಲ್ಲ ಕೆಲಸ ಇರಲ್ಲ, ಸುಮ್ಮನೆ ಕೂತ್ಕೊಂಡು ಹೀಗೆಲ್ಲ ಮಾಡ್ತಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ನನ್ನನ್ನಂತೂ ಇವರು ಡ್ಯಾಮೇಜ್ ಮಾಡೋಕೆ ಆಗಲ್ಲ. ಏಕೆಂದರೆ ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರಿದೆ. ಎಲ್ಲರೂ ನನ್ನ ವ್ಯಕ್ತಿತ್ವ ತಿಳಿದುಕೊಂಡಿದ್ದಾರೆ. ನನ್ನ ಹೆಸರಿಗೆ ಮಸಿ ಬಳಿಯೋಕೆ ಈ ಮೂರ್ಖರಿಂದ ಸಾಧ್ಯವಿಲ್ಲ' ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ರಮ್ಯಾ ಅವರಿಗೆ ಬ್ಯಾಡ್ ಕಾಮೆಂಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಫ್ಯಾನ್ಸ್ ವಾರ್ಗಳು ಮೊದಲಿನಿಂದಲೂ ಇದೆ. ಆದರೆ ಲಿಮಿಟ್ ಮೀರಿ ಹೋಗುತ್ತಿರಲಿಲ್ಲ. ಇತ್ತೀಚಿನ ಬೆಳವಣಿಗೆ ನೋಡಿದ್ರೆ ಹೇಳಿಕೊಳ್ಳೋದಕ್ಕೂ ಅಸಹ್ಯ ಆಗ್ತಿದೆ. ನಾವೆಲ್ಲ ತಲೆತಗ್ಗಿಸೋ ಪ್ರವೃತ್ತಿ, ಇದನೆಲ್ಲ ನಾವು ಖಂಡಿಸ್ತೀವಿ. ಇದಕ್ಕೆಲ್ಲ ಸದ್ಯದಲ್ಲೇ ಪರಿಹಾರದ ಕೆಲಸವೂ ಆಗುತ್ತೆ' ಎಂದು ಎಸ್.ನಾರಾಯಣ್ ಹೇಳಿದ್ದಾರೆ.












Click it and Unblock the Notifications