ದ್ವಾರಕೀಶ್ 18 ವರ್ಷಗಳ ವನವಾಸ ಅಂತ್ಯಗೊಳಿಸಿದ ಆಪ್ತಮಿತ್ರ: ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಇಂದು ವಿಧಿವಶರಾಗಿದ್ದಾರೆ. ದ್ವಾರಕೀಶ್ ನಟನಾಗಿ ಮಾತ್ರವಲ್ಲದೇ ನಿರ್ಮಾಪಕರಾಗಿಯೂ ಕನ್ನಡ ಚಿತ್ರರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿದವರು. ನಿರ್ಮಾಪಕರಾಗಿ ಸುಮಾರು 50 ಸಿನಿಮಾಗಳ ನಿರ್ಮಾಣ ಮಾಡಿದ ದ್ವಾರಕೀಶ್ ಅವರಿಗೆ ಒಂದು ಕಾಲದಲ್ಲ ಐಶ್ವರ್ಯ, ಅಂತಸ್ತು ಎಲ್ಲವೂ ಇತ್ತು. ಆದರೆ ಸಿನಿಮಾದಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ದ್ವಾರಕೀಶ್ ಎಲ್ಲವನ್ನೂ ಕಳೆದುಕೊಂಡರು.
ಒಂದಲ್ಲ.. ಎರಡಲ್ಲ ದ್ವಾರಕೀಶ್ ಅವರ ಬರೋಬ್ಬರಿ 19 ಸಿನಿಮಾಗಳು ಸೋತಿದ್ದವು. ದ್ವಾರಕೀಶ್ ಒಂದು ಸಿನಿಮಾ ಸೋತಾಗ ಸುಮ್ಮನಾಗುತ್ತಿರಲಿಲ್ಲ. ಗೆಲುವಿನ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಸಿನಿಮಾ ಮಾಡುತ್ತಿದ್ದರು. ಸತತವಾಗಿ 19 ಸಿನಿಮಾಗಳು ಸೋತಾಗ ಅವರು, ಬದುಕಿನಲ್ಲಿ ಸಿಕ್ಕಿದ್ದ ಎಲ್ಲಾ ಆಸ್ತಿಗಳನ್ನೂ ಕಳೆದುಕೊಂಡಿದ್ದರು.

ದ್ವಾರಕೀಶ್ ಅವರು ಯಾವ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಗೆಲುವು ಕಂಡಿದ್ದರೋ, ಅದೇ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಪಾತಾಳವನ್ನು ಕೂಡ ಕಂಡರು. ಮೊದಮೊದಲ ಹೀರೋ ಯಾರೇ ಆದರೂ ದ್ವಾರಕೀಶ್ ಚಿತ್ರ ಸೂಪರ್ ಹಿಟ್ ಆಗುತ್ತಿತ್ತು. ಕಾಲಕಳೆದಂತೆ ಎಲ್ಲವೂ ಬದಲಾಯಿತು. ದ್ವಾರಕೀಶ್ ನಿರ್ದೇಶನದ ಚಿತ್ರಗಳು ಸಾಲು ಸಾಲು ಚಿತ್ರಗಳು ಸೋಲತೊಡಗಿದವು.
1985ರಲ್ಲಿ ತೆರೆಗೆ ಬಂದ ನೀ ತಂದ ಕಾಣಿಕೆಯಿಂದ ಶುರುವಾದ ಸೋಲು ದ್ವಾಕೀಶ್ ಅವರ ಬೆನ್ನು ಬಿಡಲೇ ಇಲ್ಲ. ಮಜ್ನು, ಆಫ್ರಿಕಾದಲ್ಲಿ ಶೀಲಾ, ಶೃತಿ ಹಾಕಿದ ಹೆಜ್ಜೆ, ಹೃದಯ ಕಳ್ಳರು ಹೀಗೆ ದೊಡ್ಡ ದೊಡ್ಡ ಚಿತ್ರಗಳೇ ಸೋತು ಮಲಗಿದವು. ಬಹುನಿರೀಕ್ಷಿತ ಚಿತ್ರಗಳೆಲ್ಲಾ ನೆಲಕಚ್ಚಿದ್ದವು. ಈ ಸಮಯದಲ್ಲಿ ವಿಷ್ಣುವರ್ಧನ್ ಅವರು ದ್ವಾರಕೀಶ್ ಬ್ಯಾನರ್ನಲ್ಲಿ ಅಭಿನಯಿಸುವುದನ್ನೇ ಬಿಟ್ಟಿದ್ದರು. ಚಿತ್ರರಂಗ ಕೂಡ ದ್ವಾರಕೀಶ್ ಅವರನ್ನು ಮರೆಯುತ್ತಾ ಬಂತು. ಆರ್ಥಿಕ ಸಂಕಷ್ಟಗಳು ಒಂದೊಂದಾಗಿ ಸುತ್ತಿಕೊಂಡವು. ಬರೋಬ್ಬರಿ ಹದಿನೆಂಟು ವರ್ಷಗಳು ದ್ವಾರಕೀಶ್ ಸೋಲಿನ ವನವಾಸ ಅನುಭವಿಸಿದರು.
ಆಪ್ತಮಿತ್ರನಿಂದಲೇ ಅಂತ್ಯವಾಯ್ತು ಸೋಲಿನ ವನವಾಸ
ಹದಿನೆಂಟು ವರ್ಷಗಳ ನಂತರ ದ್ವಾರಕೀಶ್ ಅವರನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಪುನಃ ಆಪ್ತಮಿತ್ರ ವಿಷ್ಣುವರ್ಧನ್ ಅವರೇ ಬರಬೇಕಾಯಿತು. 2004ರಲ್ಲಿ ವಿಷ್ಣುವರ್ಧನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಆಪ್ತಮಿತ್ರ ಹೆಸರಿನಲ್ಲಿ ದ್ವಾರಕೀಶ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸೋಲಿನ ಸುಳಿಯಿಂದ ಗೆದ್ದು ಬಂದರು. ಬಳಿಕ ಸ್ವಲ್ಪ ಸಮಯ ತೆಗೆದುಕೊಂಡು ಚಾರುಲತಾ, ಚೌಕ ಹೀಗೆ ಭಿನ್ನ ವಿಭಿನ್ನ ಚಿತ್ರಗಳನ್ನು ನಿರ್ಮಾಣ ಮಾಡಿದರು. ಈ ರೀತಿ ಸೋಲಿನ ಕಾರ್ಮೋಡದಲ್ಲಿ ಸಿಲುಕಿದ್ದ ದ್ವಾರಕೀಶ್ ಬಾಳಲ್ಲಿ ಮತ್ತೆ ಗೆಲುವಿನ ಬೆಳಕು ಹರಿಯಿತು.












Click it and Unblock the Notifications