'ಕಾಮಿಡಿ ಕಿಲಾಡಿಗಳು ಶೋನಲ್ಲಿ ನನಗೆ ದೊಡ್ಡ ಅವಮಾನ ಆಯ್ತು'
ತುಳು ನಾಡಿನಲ್ಲಿ ಯಶಸ್ಸು ಕಂಡ ಸಿನಿಮಾವೊಂದು ಈಗ ಕನ್ನಡಕ್ಕೆ ಲಗ್ಗೆ ಇಡುತ್ತಿದೆ. ಕಾಮಿಡಿ ಕಿಲಾಡಿಗಳು ಶೋನ ಕಲಾವಿದ ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬಂದ ದಸ್ಕತ್ ಸಿನಿಮಾ ಡಿಸೆಂಬರ್ 13 ರಂದು ತೆರೆ ಕಂಡಿತ್ತು. ತುಳು ಭಾಷೆಯಲ್ಲಿ ತೆರೆ ಕಂಡ ಈ ಸಿನಿಮಾ ಚಿತ್ರತಂಡದ ನಿರೀಕ್ಷೆ ಮೀರಿ ಯಶಸ್ಸು ಕಂಡಿದ್ದು, ಇದೀಗ ಕನ್ನಡದಲ್ಲಿ ಬರಲು ಸಜ್ಜಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಿನಿಮಾ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಅಧೀಕೃತವಾಗಿ ತಿಳಿಸಿದ್ದಾರೆ.
ದಸ್ಕತ್ ಸಿನಿಮಾದ ಬಗ್ಗೆ ಮಾತನಾಡುವಾಗ ನಿರ್ದೇಶಕ ಅನೀಶ್ ಪೂಜಾರಿ ಈ ಸಿನಿಮಾ ಮಾಡಲು ಸ್ಫೂರ್ತಿ ಏನು ಎನ್ನುವುದರ ಬಗ್ಗೆ ಮಾತನಾಡುತ್ತಾ ಈ ಹಿಂದೆ ಒಂದು ದೊಡ್ಡ ವೇದಿಕೆಯಲ್ಲಿ ತಮಗಾದ ಅವಮಾನವನ್ನು ಹಂಚಿಕೊಂಡಿದ್ದಾರೆ.

ಫಿಲ್ಮೀ ಫಸ್ಟ್ ಕನ್ನಡದ ಜೊತೆ ಮಾತನಾಡಿದ ಅವರು, 'ನಾನು ಕಾಮಿಡಿ ಕಿಲಾಡಿಗಳು ಶೋನಲ್ಲಿ ಇದ್ದಾಗ ನನಗೆ ದೊಡ್ಡ ಪ್ರಮಾಣದ ಅವಮಾನ ಆಗುತ್ತದೆ. ಯಾವುದೋ ಒಬ್ಬರು ರೈಟರ್ಸ್ ಅವಮಾನ ಮಾಡುತ್ತಾರೆ. ಇವನ ನಟನೆಯೇ ಸರಿ ಇಲ್ಲ, ಇವನನ್ನು ಬೇಗ ಎಲಿಮಿನೇಷನ್ ಮಾಡಿ ಶೋನಿಂದ ತೆಗೆದು ಬಿಸಾಡಬೇಕು ಅಂತಾ ಎಲ್ಲರ ಎದುರು ಹೇಳುತ್ತಾರೆ. ಅದು ನನ್ನ ಕಿವಿಗೆ ಬೀಳುತ್ತದೆ ಕೂಡ'.
'ಈ ವಿಚಾರ ತಿಳಿದಾಗ ನನಗೆ ನಾನು ಚೆನ್ನಾಗಿ ಮಾಡುತ್ತಿಲ್ಲವಾ ಅಂತಾ ಅನಿಸಿತು. ನಾನು ಯಾವಾಗಲೂ ವಾದಕ್ಕೆ ನಿಂತರೇ ಜೋರಾಗಿ ಮಾಡುತ್ತೇನೆ. ನನ್ನದು ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ. ಸರಿ ಇದ್ದರೆ ಬಿಡುವುದಿಲ್ಲ. ಈ ಅವಮಾನ ಆದ ಮೇಲೆ ನಾನು ಅವರಿಗಿಂತ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಛಲ ಬಂತು' ಎಂದರು.

'ಅವರು ರೈಟರ್ ನಾನು ಅವರಿಗಿಂತ ದೊಡ್ಡ ರೈಟರ್ ಆಗಬೇಕು. ಮೊದನಿಂದಲೂ ನನಗೆ ಬರೆಯುವ ಕೌಶಲ್ಯತೆ ಇತ್ತು. ಆದರೆ ಬರೆಯುವ ಮನಸ್ಸು ಮಾಡಿರಲಿಲ್ಲ. ಅವರು ನಾನು ವೇಸ್ಟ್ ಅಂತಾ ಹೇಳಿದರಲ್ಲಾ ಅವತ್ತೇ ನಾನು ಬರೆಯಲು ಶುರು ಮಾಡಿದೆ. ದಸ್ಕತ್ ನಾನು ಬರೆದ ಮೊದಲ ಸಿನಿಮಾ ಅಲ್ಲ. ಇದಕ್ಕೂ ಮುಂಚೆ ಕನಸು ಮಾರಟಕ್ಕಿದೆ ಎನ್ನುವ ಸಿನಿಮಾ ಮಾಡಿದ್ದೆ. ಆಮೇಲೆ ಬಿಗ್ ಬಾಸ್ ಭೂಮಿ ಶೆಟ್ಟಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ ವನಜ ಎನ್ನುವ ಸಿನಿಮಾ ಮಾಡಿದ್ದೆ. ಅವತ್ತು ನನಗೆ ಅವಮಾನ ಮಾಡಿದವರು ಇನ್ನೂ ಒಂದು ಸಿನಿಮಾ ಮಾಡಿಲ್ಲ. ಅವಮಾನ ಮಾಡಿಸಿಕೊಂಡವನು ಸಿನಿಮಾ ಮಾಡಿ ಜನರಿಂದ ಸನ್ಮಾನ ಆಯ್ತು' ಎಂದರು.
'ಅವರು ಕೆಟ್ಟವರಲ್ಲ ಒಳ್ಳೆಯವರೇ ಅವರು ಒಂದು ಅವಮಾನ ಮಾಡಿದ್ದಕ್ಕೆ ನನಗೆ ಇವತ್ತು ಬರೆಯಲು ಒಂದು ಸ್ಫೂರ್ತಿ ಸಿಕ್ಕಿತು. ಅದಾದ ಮೇಲೆ ಒಂದು ಕಥೆ ಇಟ್ಟುಕೊಂಡು ಒಬ್ಬರು ನಿರ್ಮಾಪಕರ ಬಳಿ ಹೋದೆವು. ಅಲ್ಲಿ ಕೂಡ ನಮಗೆ ಅವಮಾನ ಆಯ್ತು. ನಿಮಗೆ ಏನು ಅನುಭವ ಇದೆ ಅಂತಾ ಹೇಳಿ ಸಿನಿಮಾ ಮಾಡಲು ಹೊರಟ್ಟಿದ್ದೀರಿ ಅಂತಾ ನಮ್ಮ ವಯೋಮಾನದ ಸ್ನೇಹಿತರೇ ಅವಮಾನ ಮಾಡಿದರು. ಆಗ ಸಿನಿಮಾ ಮಾಡಬೇಕು ಅಂತಾ ಇನ್ನಷ್ಟು ಛಲ ಹೆಚ್ಚಾಯ್ತು ಸರಿ ನಾವು ಗೆದ್ದು ಬರುತ್ತೇವೆ ಅಂತಾ ಅವರಿಗೂ ಹೇಳಿ ಬಂದೆವು. ಬಳಿಕ ಸಿಕ್ಕ ನಿರ್ಮಾಪಕರಿಗೆ ಕಥೆ ಹೇಳಿ ಒಪ್ಪಿಸಿದೆವು. ಅವರು ಈಗ ಗೆದ್ದಿದ್ದಾರೆ. ಸಂಪೂರ್ಣ ತುಳು ನಾಡು ನಮ್ಮ ಕಥೆಯನ್ನು ಒಪ್ಪಿಕೊಂಡಿದೆ. ನಮ್ಮ ಸಿನಿಮಾಗೆ ಅವಾರ್ಡ್ ಕೂಡ ಬಂದಿದೆ' ಎಂದು ಅನೀಶ್ ಪೂಜಾರಿ ಖುಷಿ ಹಂಚಿಕೊಂಡರು.












Click it and Unblock the Notifications