ಪ್ರೇಮಿಗಳ ದಿನವೇ ಖ್ಯಾತ ನಟಿಯೊಂದಿಗೆ ರಜನಿಕಾಂತ್ ಮಾಜಿ ಅಳಿಯ ಧನುಷ್ ಎರಡನೇ ಮದುವೆ: ವರದಿ
ನಟ ರಜನಿಕಾಂತ್ ಮಾಜಿ ಅಳಿಯ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅವರ ಎರಡನೇ ಮದುವೆ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ನಟ ಧನುಷ್ ವಿವಾಹವಾಗಲಿದ್ದಾರೆ ಎಂಬ ವದಂತಿ ಇದೀಗ ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ ಮುಂದಿನ ತಿಂಗಳು ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ಖ್ಯಾತ ಬಹುಭಾಷಾ ನಟಿಯೊಂದಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಷಯದ ಬಗ್ಗೆ ಧನುಷ್ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಹುಭಾಷಾ ನಟಿಯಾಗಿರು ಮೃಣಾಲ್ ಠಾಕೂರ್ ಜೊತೆ ಧನುಷ್ ಸಪ್ತಪದಿ ತುಳಿಯಲಿದ್ದಾರಂತೆ. ಈ ವದಂತಿಯ ಮೂಲ ಏನು ಎಂಬುದನ್ನು ನೋಡಿದರೆ, ಕಥೆ ಹಿಂದಿನ ವರ್ಷದ ಆಗಸ್ಟ್ ತಿಂಗಳಿಗೆ ಹೋಗಿ ತಲುಪುತ್ತದೆ. ಮೃಣಾಲ್ ಠಾಕೂರ್ ನಟಿಸಿರುವ 'ಸನ್ ಆಫ್ ಸರ್ದಾರ್ 2' ಚಿತ್ರದ ಪ್ರೀಮಿಯರ್ ವೇಳೆ ಧನುಷ್ ಅಚ್ಚರಿಯಾಗಿ ಕಾಣಿಸಿಕೊಂಡಿದ್ದರು. ಧನುಷ್ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಮೃಣಾಲ್ ತಕ್ಷಣವೇ ಮುಂದೆ ಹೋಗಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು.

ಮೃಣಾಲ್ ಸ್ಪಷ್ಟನೆ ಏನು?
ಈ ವಿಡಿಯೋ ವೈರಲ್ ಆದ ಬಳಿಕ, ಧನುಷ್ ವಿಶೇಷವಾಗಿ ಮೃಣಾಲ್ ಬೆಂಬಲಕ್ಕಾಗಿ ಪ್ರೀಮಿಯರ್‌ಗೆ ಬಂದಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿದ್ದವು. ಇದೇ ವೇಳೆ, ಇಬ್ಬರ ನಡುವೆ ವಿಶೇಷ ಸಂಬಂಧವಿದೆ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡಿದ್ದವು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಮೃಣಾಲ್ ಠಾಕೂರ್ ಸ್ಪಷ್ಟನೆ ನೀಡಿದ್ದರು. "ಧನುಷ್ ನನಗೆ ಒಳ್ಳೆಯ ಸ್ನೇಹಿತ ಮಾತ್ರ. ಅವರನ್ನು ಪ್ರೀಮಿಯರ್‌ಗೆ ಆಹ್ವಾನಿಸಿದ್ದು ನನ್ನ ಸಹ ನಟ ಅಜಯ್ ದೇವಗನ್" ಎಂದು ಹೇಳಿದ್ದರು. ಆ ಬಳಿಕ ಈ ವದಂತಿ ತಣ್ಣಗಾಗಿದ್ದವು.
ಆದರೆ ಇದೀಗ ಅಚ್ಚರಿಯಾಗಿ ಧನುಷ್-ಮೃಣಾಲ್ ವಿವಾಹ ದಿನಾಂಕ ಎಂಬ ಹೊಸ ವರದಿ ವೈರಲ್ ಆಗಿರುವುದರಿಂದ, ಹಳೆಯ ಗಾಸಿಪ್‌ಗಳಿಗೆ ಮತ್ತೆ ಜೀವ ಬಂದಿದೆ. ಫೆಬ್ರವರಿ 14ರಂದು ಮದುವೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಕೆಲವರು ಶುಭಾಶಯ ಕೋರುತ್ತಿದ್ದಾರೆ. ಕೆಲವರು ಇದನ್ನು ಕೇವಲ ವದಂತಿ ಎಂದೇ ಹೇಳುತ್ತಿದ್ದಾರೆ. ಈಗ ಎಲ್ಲರ ಗಮನ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರ ಮೇಲಿದ್ದು, ಇಬ್ಬರೂ ಮದುವೆ ಫೋಟೋಗಳನ್ನು ಹಂಚಿಕೊಳ್ಳುತ್ತಾರಾ ಅಥವಾ ಈ ಸುದ್ದಿಯನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಅಲ್ಲಿಯವರೆಗೆ, ಈ ವಿವಾಹ ಸುದ್ದಿ ಸಿನಿ ಪ್ರೇಕ್ಷಕರ ನಡುವೆ ಹಾಟ್ ಟಾಪಿಕ್ ಆಗಿಯೇ ಮುಂದುವರಿಯುವ ಸಾಧ್ಯತೆ ಇದೆ.

ರಜನಿ ಪುತ್ರಿಗೆ ಧನುಷ್ ಡಿವೋರ್ಸ್
ನಟ ಧನುಷ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದರು. ದೀರ್ಘಕಾಲದ ಚರ್ಚೆ ಹಾಗೂ ಊಹಾಪೋಹಗಳ ಬಳಿಕ, ನವೆಂಬರ್ 2024ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. 2004ರಲ್ಲಿ ವಿವಾಹವಾಗಿದ್ದ ಈ ಜೋಡಿ, 2022ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಸಾರ್ವಜನಿಕವಾಗಿ ಘೋಷಿಸಿದ್ದರು. ವಿಚ್ಛೇದನದ ಬಳಿಕವೂ, ಇಬ್ಬರೂ ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗ ಅವರ ಭವಿಷ್ಯ ಮತ್ತು ಆರೈಕೆಗೆ ಆದ್ಯತೆ ನೀಡುತ್ತಾ, ಸಹ-ಪೋಷಕರಾಗಿ ಮುಂದುವರಿಯಲು ನಿರ್ಧರಿಸಿದ್ದರು.
ಧನುಷ್-ಐಶ್ವರ್ಯಾ ವಿಚ್ಛೇದನದ ನಿಖರ ಕಾರಣಗಳ ಬಗ್ಗೆ ಇಬ್ಬರೂ ಬಹಿರಂಗವಾಗಿ ವಿವರಿಸಿಲ್ಲ. ಆದರೆ, ಸಮೀಪದ ಮೂಲಗಳ ಪ್ರಕಾರ, ವೈಯಕ್ತಿಕ ಬೆಳವಣಿಗೆ, ಜೀವನದ ಗುರಿಗಳಲ್ಲಿನ ಭಿನ್ನತೆ ಹಾಗೂ ವಿಭಿನ್ನ ಹಾದಿಗಳನ್ನು ಆಯ್ಕೆ ಮಾಡಿಕೊಂಡಿರುವುದೇ ಪ್ರತ್ಯೇಕತೆಯ ಪ್ರಮುಖ ಕಾರಣ ಎನ್ನಲಾಗಿದೆ. ಯಾವುದೇ ವಿವಾದ ಅಥವಾ ಆರೋಪಗಳಿಲ್ಲದೆ, ಗೌರವಯುತವಾಗಿ ಬೇರ್ಪಡುವ ನಿರ್ಧಾರ ಕೈಗೊಂಡಿದ್ದನ್ನು ಅಭಿಮಾನಿಗಳು ಕೂಡ ಸ್ವಾಗತಿಸಿದ್ದರು.












Click it and Unblock the Notifications