ದರ್ಶನ್ ಕಷ್ಟದಲ್ಲಿದಾಗ ಯಾರು ಬರಲಿಲ್ಲ ಯಾಕೆ? ಧರ್ಮ ಕೀರ್ತಿರಾಜ್ ಉತ್ತರವೇನು?
ಕನ್ನಡ ಚಿತ್ರರಂಗದ ನಟ ದರ್ಶನ್ ಕೆಲವು ಸಮಯದ ಹಿಂದೆ ಸಾಲು ಸಾಲು ಸಂಕಷ್ಟಗಳನ್ನು ಎದುರಿಸಿದರು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಸದ್ಯ ಜಾಮೀನ ಮೇರೆಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರಿಗೆ ದರ್ಶನ್ ನೆರವಾಗಿದ್ದಾರೆ. ಆದರೆ ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ದರ್ಶನ್ ಭೇಟಿಯಾದವರು ಹಾಗೂ ಅವರ ಜೊತೆ ನಿಂತವರು ಬಹಳ ಕಡಿಮೆ. ದರ್ಶನ್ ಕಷ್ಟದ ಸಮಯದಲ್ಲಿ ಅವರ ಆಪ್ತ ವಲಯದಲ್ಲಿದ್ದವರು ನೆರವಿಗೆ ಬರಲಿಲ್ಲ ಎನ್ನುವ ಆರೋಪದ ಬಗ್ಗೆ ನಟ ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ.
ನಮ್ಮ ಕೆಎಫ್‌ಐ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಇದಕ್ಕಿಂತ ಮುಂಚೆ ಸಾರಥಿ ಸಮಯದಲ್ಲಿ ಅವರ ಜೀವನದಲ್ಲಿ ಒಂದು ದುರ್ಘಟನೆ ನಡೆದಿತ್ತು. ನನ್ನ ಮೇಲೆ ಇಂದಿಗೂ ಅವರಿಗೆ ಒಂದು ವಿಶ್ವಾಸ ಇದೆ ಅಂದರೆ ಅದಕ್ಕೆ ಕಾರಣ ಆ ಸಮಯದಲ್ಲಿ ನಾನು ಅವರ ಜೊತೆಯಲ್ಲಿ ಇದ್ದೆ. ಅದು ಅವರಿಗೂ ಗೊತ್ತು, ವಿಜಿ ಅಕ್ಕನಿಗೂ ಗೊತ್ತು, ದಿನಕರ್ ಸರ್‌ಗೂ ಗೊತ್ತು. ಆಮೇಲೆ ನನ್ನ ಸಿನಿಮಾಗಳು ಬಂದಾಗ ಅವರು ಬಂದು ಸಪೋರ್ಟ್ ಮಾಡುತ್ತಿದ್ದರು' ಎಂದರು.

'ಆದರೆ ಈ ಬಾರಿ ಈ ಸಂದರ್ಭದಲ್ಲಿ ಎಲ್ಲರಿಗೂ ಒತ್ತಡವಾಯ್ತು. ಕಾನೂನು ತುಂಬಾ ಕಠಿಣವಾಗಿತ್ತು. ಇಲ್ಲಿ ಯಾರಿಗೂ ಭಾಗಿ ಆಗಲು ಆಗಲಿಲ್ಲ. ಧನ್ವೀರ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಇದರಲ್ಲಿ ಭಾಗಿ ಆಗಲು ಆಗಲಿಲ್ಲ. ಧನ್ವೀರ್ ಅವರು ವಿಜಿ ಅಕ್ಕ ಹಾಗೂ ಅವರ ಕುಟುಂಬಸ್ಥರ ಜೊತೆ ತುಂಬಾ ಬಲವಾಗಿ ನಿಂತುಕೊಂಡರು. ನಾವು ಅದನ್ನು ಪ್ರಶಂಸಿಸಬೇಕು. ಅವರು ದರ್ಶನ್ ಅವರಿಗೆ ನಿಜವಾದ ಸಹೋದರನ ರೀತಿ ಜೊತೆಯಲ್ಲಿ ನಿಂತರು' ಎಂದು ಹೇಳಿದರು.
'ಕೆಲವೊಂದು ಸಲ ಏನಾಗುತ್ತದೆ ಅಂದರೆ ಪರಪ್ಪನ ಅಗ್ರಹಾರಕ್ಕೆ ಹೋಗಲು ಅನುಮತಿ ಸಿಗುವುದಿಲ್ಲ. ದರ್ಶನ್ ಅವರು ಬಳ್ಳಾರಿಯಲ್ಲಿದ್ದಾಗ ಅವರ ಕುಟುಂಬಸ್ಥರು ಬಿಟ್ಟು ಮತ್ಯಾರಿಗೂ ಅವರನ್ನು ಭೇಟಿಯಾಗಲು ಅವಕಾಶ ಇರಲಿಲ್ಲ. ಹೀಗಾಗಿ ನಾನು ದಿನಕರ್ ಸರ್ ಜೊತೆ ಸಂಪರ್ಕದಲ್ಲಿದ್ದೆ. ಆದರೆ ಅವರಿಗೂ ಕೂಡ ಪದೇ ಪದೇ ಫೋನ್ ಮಾಡಿ ಏನಾಯ್ತು ಅಂತಾ ಕೇಳಲು ಆಗುವುದಲ್ಲ. ನನ್ನ ಪ್ರಕಾರ ಇದೆಲ್ಲಾ ಒಂದು ಸಮಯ ಅಷ್ಟೇ. ಇದು ಕಾನೂನು ಬದ್ಧವಾಗಿ ಕಠಿಣವಾಗಿದ್ದರಿಂದ ಯಾರು ಬಂದು ಮಾತನಾಡಲು ಆಗುವುದಿಲ್ಲ ಎನ್ನುವುದು ಅವರಿಗೂ ಗೊತ್ತಿತ್ತು' ಎಂದರು.

'ನಾನು ಅವರ ಬಗ್ಗೆ ಎಲ್ಲಾ ಕಡೆಯಲ್ಲೂ ಮಾತನಾಡಿದ್ದೇನೆ. ಎಲ್ಲಿಯೂ ನಾನು ಅವರ ವಿಚಾರ ಮಾತನಾಡಲ್ಲ ಅಂತಾ ಹೇಳಿಲ್ಲ. ಅವತ್ತು ಅವರ ಬಗ್ಗೆ ಮಾತನಾಡಿದ್ದೆ, ಇವತ್ತು ಕೂಡ ಮಾತನಾಡುತ್ತೇನೆ. ಅವರ ಬಗ್ಗೆ ಹೃದಯದಿಂದ ಮಾತನಾಡುತ್ತೇವೆ. ಅವರು ಈ ಆರೋಪಗಳಿಂದ ಬೇಗ ಹೊರಗೆ ಬರಲಿ ಎನ್ನುವುದಷ್ಟೇ ನನ್ನ ಪ್ರಾರ್ಥನೆ. ಅವರಿಗೆ ಎಲ್ಲದೂ ಒಳ್ಳೆಯದಾಗಲಿ, ರೇಣುಕಾಸ್ವಾಮಿ ಕುಟುಂಬಕ್ಕೂ ಒಳ್ಳೆದಾಗಲಿ, ಬೇಗ ಇದಕ್ಕೆಲ್ಲಾ ಒಂದು ಅಂತ್ಯ ಬೀಳಲಿ' ಎಂದು ಧರ್ಮ ಕೀರ್ತಿರಾಜ್ ಹೇಳಿದರು.












Click it and Unblock the Notifications