Vijaya Lakshmi Letter: ಪೊಲೀಸ್ ಆಯುಕ್ತರಿಗೆ ಸತ್ಯದ ಅರಿವು ಮೂಡಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ!
ಬೆಂಗಳೂರು ಜುಲೈ 4: ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ವಿಚಾರ ದೇಶ ವಿದೇಶದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪತಿ ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿ ಮುಂದಾಗಿದ್ದು ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಇದೇ ವೇಳೆ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಹೌದು... ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಸತ್ಯದ ಅರಿವು ಮೂಡಿಸಿದ್ದಾರೆ. ಪತ್ರದಲ್ಲಿ 'ಪವಿತ್ರಾ ಗೌಡ ದರ್ಶನ್ ಅವರ ಪತ್ನಿ ಅಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೊಮ್ಮೆ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ದರ್ಶನ್ ಪತ್ನಿ ಪವಿತ್ರಾ ಗೌಡ ಎಂದು ಹೇಳಿದ್ದರು. ಈ ವಿಚಾರವನ್ನು ಪ್ರಸ್ತಾಪಿದ ವಿಜಯಲಕ್ಷ್ಮಿ ದರ್ಶನ್ ಪತ್ನಿ ಪವಿತ್ರಾ ಗೌಡ ಅಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿ ಬಗ್ಗೆ ಮಾತನಾಡುವಾಗ ಪೊಲೀಸ್ ಆಯುಕ್ತರು ಪವಿತ್ರಾ ಗೌಡ ದರ್ಶನ್ ಪತ್ನಿ ಎಂದಿದ್ದರು. ಇದಾದ ಬಳಿಕ ರಾಷ್ಟ್ರವ್ಯಾಪಿ ಮಾದ್ಯಮಗಳಲ್ಲಿ ಪವಿತ್ರಾ ಗೌಡ ದರ್ಶನ್ ಪತ್ನಿ ಎಂದೇ ಪ್ರಸಾರವಾಯಿತು. ಈ ವಿಚಾರವಾಗಿ ವಿಜಯಲಕ್ಷ್ಮಿ ಪತ್ರ ಬರೆದಿದ್ದಾರೆ.
'ನಾನು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ. ಸುದ್ದಿಗೋಷ್ಠಿಯಲ್ಲಿ ನೀವು ದರ್ಶನ್ ಪತ್ನಿ ಪವಿತ್ರಾ ಗೌಡ ಎಂದು ಹೇಳಿದ್ದಿರಿ. ಹೀಗಾಗಿ ಇದನ್ನೇ ಅನುಸರಿಸಿ ಗೃಹಸಚಿವರು ಹಾಗೇ ಹೇಳಿದ್ದಾರೆ. ಬಳಿಕ ಮಾದ್ಯಮಗಳಲ್ಲೂ ಇದೇ ಸುದ್ದಿ ಪ್ರಸಾರ ಮಾಡಲಾಗಿದೆ. ಇದರಿಂದ ನನ್ನ ಹಾಗೂ ನನ್ನ ಮಗನಿಗೆ ಬೇಸರವಾಗಿದೆ. ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ. ನಿಮ್ಮ ಈ ಒಂದು ಹೇಳಿಕೆಯಿಂದ ಮುಂದಿನ ದಿನಗಳಲ್ಲಿ ನಾನು ಹಾಗೂ ನನ್ನ ಮಗ ತೊಂದರೆ ಅನುಭವಿಸುವಂತೆ ಆಗಬಾರದು' ಎಂದು ಬರೆದಿದ್ದಾರೆ.

'ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯಕ್ಕಾಗಿ ಸಮಯ ತೆಗೆದುಕೊಳ್ಳುತ್ತದೆ. ಆದರೆ ಪವಿತ್ರಾ ಗೌಡ ವಿಚಾರದಲ್ಲಿ ಮಾಹಿತಿ ಸೂಕ್ತವಾಗಿರಲಿ ಎಂದು ನಾನು ಬಯಸುತ್ತೇನೆ. ಆಕೆ ನನ್ನ ಗಂಡನ ಸ್ನೇಹಿತೆ ಎನ್ನುವುದು ಸತ್ಯ. ಆದರೆ ಆಕೆ ನನ್ನ ಗಂಡನ ಪತ್ನಿ ಅಲ್ಲ. ಆಕೆಗೆ ಈ ಹಿಂದೆ ಸಂಜಯ್ ಎಂಬಾತನೊಂದಿಗೆ ಮದುವೆ ಆಗಿದೆ. ಆಕೆಗೆ ಒಬ್ಬ ಮಗಳೂ ಇದ್ದಾಳೆ. ನಾನು ಮಾತ್ರ ಕಾನೂನಾತ್ಮಕವಾಗಿ ದರ್ಶನ್ ಕೈ ಹಿಡಿದಿದ್ದೇನೆ. ಧರ್ಮಸ್ಥಳದಲ್ಲಿ 2003ರ ಮೇ19ರಂದು ನಮ್ಮ ಮದುವೆ ನಡೆದಿತ್ತು. ಹೀಗಾಗಿ ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ' ಎಂದು ವಿಜಯಲಕ್ಷ್ಮಿ ಪತ್ರದಲ್ಲಿ ಬರೆದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಲು ಪವಿತ್ರಾ ಗೌಡ ಕಾರಣ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಎಂಬ ಕಾರಣಕ್ಕೆ ಪವಿತ್ರಾ ಗೌಡ ದರ್ಶನ್ ಹಾಗೂ ಗ್ಯಾಂಗ್ ಬಳಸಿಕೊಂಡು ರೇಣುಕಾಸ್ವಾಮಿ ಕೊಲೆ ಮಾಡಿಸಿದ ಆರೋಪವಿದೆ. ಹೀಗಾಗಿ ಕನ್ನಡ ಸಿನಿಮಾ ರಂಗದ ಖ್ಯಾತ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.
ಈ ಪ್ರಕರಣ ಇಡೀ ಚಂದನವನವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆ ಎಲ್ಲೆಡೆ ಭಾರೀ ಸುದ್ದಿಯಾಗಿದೆ. ಸದ್ಯ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ದರ್ಶನ್ ಜೈಲಿನಿಂದ ಬೇಗ ಹೊರಬರುತ್ತಾರಾ ಎಂದು ಕಾದು ನೋಡಬೇಕಿದೆ.
ದರ್ಶನ್ ಬಗ್ಗೆ ಕೊನೆಗೂ ಮೌನ ಮುರಿದ ಸುಮಲತಾ
ದರ್ಶನ್ ಬಗ್ಗೆ ನಟಿ ಹಾಗೂ ಸಂಸದೆ ಸುಮಲತಾ ಅವರು ಕೊನೆಗೂ ಮೌನ ಮುರಿದಿದ್ದಾರೆ. ದರ್ಶನ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. 'ನಾನು ಬದುಕಿರುವವರೆಗೂ ದರ್ಶನ್ ನನ್ನ ಹಿರಿಯ ಮಗ. ಎಲ್ಲರಿಗೂ ಸಹಾಯ ಮಾಡುವ ಮನೋಭಾವವು ದರ್ಶನ್‌ಗಿದೆ. ರೇಣುಕಾಸ್ವಾಮಿ ಕೊಲೆ ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಟಿ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications