ಮತ್ತೆ ಜೈಲು ಕೈದಿ ಬಟ್ಟೆ ಧರಿಸಿದ ನಟ ದರ್ಶನ್, ಕಾರಣವೇನು?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೆಂಗಳೂರು ಹಾಗೂ ಬಳ್ಳಾರಿ ಜೈಲುಗಳಲ್ಲಿ ತಿಂಗಳುಗಳನ್ನೇ ಕಳೆದರು. ಕಳೆದ ವರ್ಷ ಇದೇ ಸಮಯದಲ್ಲಿ ದರ್ಶನ್ ಅವರು ಜೈಲು ಸೇರಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಜೈಲಿನಿಂದ ಹೊರಬಂದು ಸುಧಾರಿಸಿಕೊಂಡಿದ್ದರು. ಇದೀಗ ಮತ್ತೆ ಅವರು ಜೈಲು ಕೈದಿ ಬಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದು, ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಕೊಲೆ ಕೇಸ್ ವಿಚಾರಣೆ ಇನ್ನೂ ನಡೆಯುತ್ತಿರುವಾಗಲೇ ದಿಢೀರನೆ ಕೈದಿ ಬಟ್ಟೆಯಲ್ಲಿ ದರ್ಶನ್ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳಿಗೆ ಮಾತ್ರವೇ ಈ ವಿಶೇಷ ವಸ್ತ್ರ ನೀಡಲಾಗುತ್ತದೆ. ದರ್ಶನ್ ಅವರು ಇನ್ನೂ ಕೊಲೆ ಕೇಸ್‌ನ ಆರೋಪಿಯಾಗಿದ್ದಾರೆ. ಈಗ ದಿಢೀರನೆ ಕೈದಿ ವಸ್ತ್ರ ಧರಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದರ್ಶನ್ ಮತ್ತೆ ಜೈಲಿಗೆ ಹೋದ್ರಾ ಎಂದು ಹಲವರು ಗಾಬರಿಯಾಗಿದ್ದಾರೆ. ಆದರೆ ದರ್ಶನ್ ಅವರು ಕೈದಿ ವಸ್ತ್ರದಲ್ಲಿ ಕಾಣಿಸಿಕೊಳ್ಳಲು ಕಾರಣ ಇಲ್ಲಿದೆ ನೋಡಿ..

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ವಿಚಾರಣಾಧೀನ ಕೈದಿ ಆಗಿದ್ದರಿಂದ ಅವರು ಜೈಲಿನ ಸಮವಸ್ತ್ರವನ್ನು ಹಾಕಿರಲಿಲ್ಲ. ಆದರೆ ಈಗ ದಿಢೀರನೆ ಜೈಲಿನ ವಸ್ತ್ರದಲ್ಲಿ ದರ್ಶನ್ ಅವರನ್ನು ಕಂಡು ಅಭಿಮಾನಿಗಳು ಕಂಗಾಲಾಗಿದ್ದಾರೆ. ಆದರೆ ಅಸಲಿ ವಿಚಾರವೆಂದರೆ ಸಿನಿಮಾದ ಪಾತ್ರಕ್ಕಾಗಿ ದರ್ಶನ್ ಜೈಲಿನ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ದರ್ಶನ್ ನಟನೆಯ ಡೆವಿಲ್ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಇದರ ಪಾತ್ರಕ್ಕಾಗಿ ಈ ಗೆಟಪ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ದರ್ಶನ್ ಅವರ ಪೋಸ್ಟರ್‌ವೊಂದು ರಿಲೀಸ್ ಆಗಿತ್ತು. ಅದರಲ್ಲಿ ಅಂಬರೀಷ್ ಅವರ ಹಿಟ್ ಪಾತ್ರ ಕನ್ವರ್‌ಲಾಲ್‌ನಂತೆ ದರ್ಶನ್ ಕಾಣಿಸಿಕೊಂಡಿದ್ದರು. ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರು ಕೈದಿ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ. ಇದರ ಚಿತ್ರೀಕರಣದ ವೇಳೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅದೇ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಗೊಂದಲಗಳಿಗೆ ತೆರೆ ಬಿದ್ದಿದೆ.
ದರ್ಶನ್ ಅವರು ಈ ಹಿಂದೆಯೂ ಹಲವು ಸಿನಿಮಾಗಳಲ್ಲಿ ಕೈದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನವಗ್ರಹ, ಕಾಟೇರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈಗಾಗಲೇ ಕೈದಿ ಗೆಟಪ್‌ನಲ್ಲಿ ನಟಿಸಿದ್ದ ಅವರು ಡೆವಿಲ್ ಸಿನಿಮಾದಲ್ಲಿ ವಿಭಿನ್ನ ಕೈದಿ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಥೇಟ್ ಅಂಬರೀಷ್ ಅವರ ಅಂತ ಸಿನಿಮಾದ ಕನ್ವರ್‌ಲಾಲ್ ಪಾತ್ರವನ್ನೇ ಈ ಸಿನಿಮಾದಲ್ಲೂ ಮುಂದುವರಿಸಲಾಗಿದೆ ಎಂದು ಇತ್ತೀಚೆಗೆ ಚಿತ್ರತಂಡ ಸುಳಿವು ನೀಡಿತ್ತು.
ಈಗ ವೈರಲ್ ಆಗಿರುವ ಫೋಟೋದಲ್ಲಿ ಜೈಲು ವಸ್ತ್ರದ ಮೇಲೆ ಯಾವುದೇ ಕೈದಿ ನಂಬರ್ ಕೂಡ ಇಲ್ಲ. ಕಾಟೇರ ಬಳಿಕ ಡೆವಿಲ್ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದರಿಂದ ಶೂಟಿಂಗ್ ಕೂಡ ಅರ್ಧಕ್ಕೆ ನಿಂತಿತ್ತು. ಈಗ ಶೂಟಿಂಗ್ ಭರದಿಂದ ಸಾಗಿದ್ದು, ವರ್ಷಗಳ ಬಳಿಕ ಡೆವಿಲ್ ಸಿನಿಮಾಗಾಗಿ ಅಭಿಮಾನಿಗಳು ಕೂಡ ಕಾತರದಿಂದ ಕಾದಿದ್ದಾರೆ.












Click it and Unblock the Notifications