Pavithra Gowda: ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ ಸಮಯದಲ್ಲೇ ಶಿರಡಿಯಲ್ಲಿ ಕಾಣಿಸಿಕೊಂಡ ದರ್ಶನ್ ಗೆಳತಿ ಪವಿತ್ರಾ ಗೌಡ
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ಗೆಳತಿ ಪವಿತ್ರಾ ಗೌಡ ಸೇರಿದಂತೆ ಏಳು ಜನ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ. ಈ ಸಮಯದಲ್ಲಿ ನಟಿ ಪವಿತ್ರಾ ಗೌಡ ಶಿರಡಿ ಸಾಯಿಬಾಬಾ ದರ್ಶನ ಪಡೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೈಲಿನಿಂದ ಹೊರ ಬಂದ ಬಳಿಕ ಪವಿತ್ರಾ ಗೌಡ ಟೆಂಪಲ್ ರನ್ ಶುರು ಮಾಡಿದ್ದಾರೆ. ಹೊರ ರಾಜ್ಯಕ್ಕೆ ಭೇಟಿ ನೀಡಲು ಅನುಮತಿ ಪಡೆದುಕೊಂಡಿದ್ದ ದರ್ಶನ್ ಗೆಳತಿ ಪವಿತ್ರಾ ತಮ್ಮ ಬ್ಯುಸಿನೆಸ್ ಕೂಡ ಆರಂಭಿಸಲು ಅನುಮತಿ ಪಡೆದುಕೊಂಡಿದ್ದರು. ಜೈಲಿನಿಂದ ಹೊರ ಬಂದ ದಿನ ಮನೆ ದೇವರಿಗೆ ಪೂಜೆ ಸಲ್ಲಿಸಿ ಇದೀಗ ಶಿರಡಿ ಸಾಯಿ ಬಾಬಾನ ದರ್ಶನ ಪಡೆದು ಬಂದಿದ್ದಾರೆ. ಈ ಫೋಟೋಗಳನ್ನು ಪವಿತ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಶಿರಡಿ ಸಾಯಿ ಬಾಬಾನ ಆಶೀರ್ವಾದ ಪವಿತ್ರಾಳ ಮೇಲೆ ಇದ್ದಂತೆ ಕಾಣಿಸುತ್ತಿಲ್ಲ.

ಪವಿತ್ರಾಗೆ ತಪ್ಪದ ಸಂಕಷ್ಟ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಒಟ್ಟು 17 ಜನ ಆರೋಪಿಗಳಿಗೆ ಮೆರಿಟ್ ಆಧಾರದಲ್ಲಿ ಹೈಕೋರ್ಟ್ ಜಾಮೀನು ನೀಡಿದೆ. ದರ್ಶನ್ ಹಾಗೂ ಪವಿತ್ರಾ ಸೇರಿದಂತೆ ಪ್ರಕರಣದ ಉಳಿದ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ ಜೈಲಿನಿಂದ ಬಿಡುಗಡೆಯಾದರೂ ಕೂಡ ಆರೋಪಿಗಳಿಗೆ ಸಂಕಷ್ಟ ತಪ್ಪುತ್ತಿಲ್ಲ.
ಪವಿತ್ರಾ ಜೈಲಿಗೆ ಹೋಗುವ ಮುನ್ನ ರೆಡ್ ಕಾರ್ಪೆಟ್ ಎನ್ನುವ ಡಿಸೈನರ್ ಶೋರೂಂ ತೆರೆದಿದ್ದರು. ಇದರಿಂದ ಸಿನಿಮಾಗಳಲ್ಲಿ ನಟಿಸುವ ತಾರೆಯರಿಗೆ ಬಟ್ಟೆಗಳನ್ನು ಡಿಸೈನ್ ಮಾಡಿ ಕೊಡುತ್ತಿದ್ದರು. ಪವಿತ್ರಾ ಜೈಲಿಗೆ ಹೋದ ಬಳಿಕ ಇದನ್ನು ಮಗಳು ಖುಷಿ ಕೆಲ ದಿನ ನೋಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಶಿರಡಿ ಸಾಯಿಬಾಬಾನ ದರ್ಶನ ಮೂಲಕ ಇದನ್ನು ಮತ್ತೆ ರೀ ಓಪನ್ ಮಾಡಲು ಪವಿತ್ರಾ ಬಯಸಿದ್ದರು. ಆದರೆ ಎಲ್ಲವೂ ಶುರುವಾಗುವ ಮುನ್ನವೇ ವಿಘ್ನ ಎದುರಾಗಿದೆ.
ಪವಿತ್ರಾಗಿಲ್ಲ ಶಿರಡಿ ಸಾಯಿಬಾಬಾನ ಆಶೀರ್ವಾದ
ಶಿರಡಿ ಸಾಯಿಬಾಬಾನ ಫೋಟೋ ಮುಂದೆ ಫೋಟೋ ಪೋಸ್ ಕೊಟ್ಟ ಪವಿತ್ರಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಇತ್ತ ಸುಪ್ರೀಂ ಕೋರ್ಟ್ ಪವಿತ್ರಾ ಗೌಡ ಅವರಿಗೆ ಬಿಗ್ ಶಾಕ್ ಕೊಟ್ಟಿದೆ. ಪವಿತ್ರಾ ಗೌಡಗೆ ಮತ್ತೆ ಸಂಕಷ್ಟ ಎದುರಾಗಿದೆ. ಜೈಲಿನಿಂದ ಹೊರ ಬಂದರೂ ಕೂಡ ನೆಮ್ಮದಿ ಇಲ್ಲದಂತಾಗಿದೆ.
ಎಲ್ಲವನ್ನು ಮರೆತು ದೇವರ ಆಶೀರ್ವಾದದಿಂದ ಹೊಸ ಜೀವನ ಶುರು ಮಾಡಲು ಪವಿತ್ರಾ ಗೌಡ ಅವರಿಗೆ ಆಗದಂತಾಗಿದೆ. ಇಂದು ಸುಪ್ರೀಂ ಕೋರ್ಟ್ ಕೊಟ್ಟ ನೋಟೀಸ್ ಗೆ ಪವಿತ್ರಾ ಉತ್ತರ ನೀಡಬೇಕು. ಅವರ ಪರ ವಕೀಲರಿಂದ ನೋಟೀಸ್‌ಗೆ ಉತ್ತರ ಕಳುಹಿಸಬೇಕು. ಅಲ್ಲದೆ ಹೈಕೋರ್ಟ್‌ನಲ್ಲಿ ವಿಚಾರಣೆ ಆದಂತೆ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆಯಲಿದೆ. ಇದಕ್ಕೆ ಆರೋಪಿಗಳು ಹಾಜರಾಗಬೇಕಾಗುತ್ತದೆ. ಹೀಗಾಗಿ ಪವಿತ್ರಾಗೆ ಯಾವ ದೇವರ ಬಳಿ ಹೋದರು ನೆಮ್ಮದಿ ಇಲ್ಲದಂತಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಪರ ವಕೀಲರು ಸುಪ್ರೀಂಕೋರ್ಟ್‌ಗೆ 1,492 ಪುಟಗಳ ದಾಖಲೆ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ದರ್ಶನ್ ಹಾಗೂ ಗೆಳತಿ ಪವಿತ್ರಾ ಸೇರಿದಂತೆ ಏಳು ಜನ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದೆ.












Click it and Unblock the Notifications