Upendra- Darshan: ದರ್ಶನ್ ಪ್ರಕರಣದ ವಿಡಿಯೋ ದಾಖಲೆ, ಸಾಕ್ಷಿಗಳ ವಿವರ ಹಂಚಿಕೊಳ್ಳಿ ಎಂದ ನಟ ಉಪೇಂದ್ರ
ಬೆಂಗಳೂರು, ಜೂನ್. 17: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಬರೋಬ್ಬರಿ 19 ಮಂದಿ ಪೊಲೀಸರ ವಶದಲ್ಲಿದ್ದಾರೆ. ಮೃತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಇದೇ ವೇಳೆ ನಟ ಸುದೀಪ್ ಪ್ರಕರಣದ ಬಗ್ಗೆ ಮಾತನಾಡಿದ್ದರು. ಇದಾದ ಒಂದು ದಿನದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಕೂಡ ಪಾರದರ್ಶಕ ವಿಚಾರಣೆಗೆ ಒತ್ತಾಯ ಮಾಡಿದ್ದಾರೆ.
ದರ್ಶನ್ - ರೇಣುಕಾಸ್ವಾಮಿ ಪ್ರಕರಣದಲ್ಲಿ ಪಾರದರ್ಶಕ ವಿಚಾರಣೆ ನಡೆಯಬೇಕು. ಪೊಲೀಸರು ಸಂಬಂಧ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ವಿಡಿಯೋ ದಾಖಲೆ, ಸಾಕ್ಷಿಗಳನ್ನು ಹಂಚಿಕೊಳ್ಳಬೇಕು. ಅದೊಂದು ಕಾನೂನಾಗಬೇಕು ಎಂದು ನಟ ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ದರ್ಶನ್ - ರೇಣುಕಾ ಸ್ವಾಮಿ - ಪಾರದರ್ಶಕ ವಿಚಾರಣೆ .....
"ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ, ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ. ಈ ಹೈ ಪ್ರೊಫೈಲ್ ಕೇಸ್‌ನ ವಿಚಾರಣೆಯಲ್ಲಿ ನಿಷ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ" ಎಂದು ಹೇಳಿದ್ದಾರೆ.
"ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟೀವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ. ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ, ಯಾವುದೇ ಕೇಸ್ ಆದರೂ ಆ ಕೇಸ್‌ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂಧ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು" ಎಂದು ಬೇಡಿಕೆ ಇಟ್ಟಿದ್ದಾರೆ.

"ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದು ಎಲ್ಲವನ್ನೂ ವೀಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು. (ಕಾನೂನು ಸುಧಾರಣೆಗಳು #CriminalJustice Reforms). ಅದೇ ರೀತಿ ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್‌ನ ವಿಚಾರಣೆಯ ವೀಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು" ಎಂದು ಹೇಳಿದ್ದಾರೆ.
" ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ. ಆಗ ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟಿವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೆೇ ಪೋಲೀಸ್ ಮತ್ತು ಟೀವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.












Click it and Unblock the Notifications