ನನ್ನ ಊಟ, ನನ್ನ ಚಟ, ಎಲ್ಲವೂ ನನ್ನಿಷ್ಟ: ಬಿರಿಯಾನಿ ತಿಂದ ಬಗ್ಗೆ ಡಾಲಿ ಧನಂಜಯ್ ಮೊದಲ ಪ್ರತಿಕ್ರಿಯೆ
ನಟ ಡಾಲಿ ಧನಂಜಯ್ ಬಿರಿಯಾನಿ ಸೇವನೆ ವಿಡಿಯೋ ವೈರಲ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. 'ನಾನು ಈ ವಿಚಾರದ ಬಗ್ಗೆ ಮಾತನಾಡಬಾರದು ಅಂತಲೇ ಇದ್ದೆ. ನನಗಿಂತ ಚೆನ್ನಾಗಿ ಜನರೇ ಅದಕ್ಕೆ ಉತ್ತರ ಕೊಟ್ಟಿದ್ದಾರೆ. ಅದನ್ನ ಯಾರು ಹೇಗೆಲ್ಲ ತೆಗೆದುಕೊಂಡರೋ ಗೊತ್ತಿಲ್ಲ' ಎಂದಿದ್ದಾರೆ. 'ಆದರೆ ಈ ಬಗ್ಗೆ ಒಳ್ಳೆಯ ಚರ್ಚೆಯಂತೂ ನಡೆದಿದೆ. ನನ್ನ ಊಟ, ನನ್ನ ಚಟ ಎಲ್ಲವೂ ನನ್ನ ವೈಯಕ್ತಿಕ ಆಯ್ಕೆ' ಎಂದು ಟ್ರೋಲ್‌ಗಳಿಗೆ ಟಕ್ಕರ್ ಕೊಟ್ಟಿದ್ದಾರೆ.
'ಬಿರಿಯಾನಿ ತಿನ್ನುತ್ತಲೇ ಪ್ರಚಾರ ಮಾಡಿದ್ದೆ'
'ನನ್ನ ಆಪ್ತ ಸ್ನೇಹಿತ ತನ್ನ ಹೋಟೆಲ್ ಉದ್ಘಾಟನೆಗೆ ಕರೆದಿದ್ದ. ಪ್ರೀತಿಯಿಂದ ಉಣಬಡಿಸಿದ. ಟಗರು ಸಿನಿಮಾದಿಂದಲೂ ಬಿರಿಯಾನಿ ಬಗ್ಗೆ ಡೈಲಾಗ್ ಇದೆ. ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲೂ ಬಿರಿಯಾನಿ ಡೈಲಾಗ್ ಇದೆ. ಇದಾದ ಮೇಲೆ ಸುಮಾರು 15 ಬಿರಿಯಾನಿ ಅಂಗಡಿಗಳನ್ನ ನಾನೇ ಓಪನ್ ಮಾಡಿದ್ದೇನೆ. ಹೆಡ್‌ಬುಷ್ ಸಿನಿಮಾ ವೇಳೆ ಬಿರಿಯಾನಿ ತಿನ್ನುತ್ತಲೇ ಪ್ರಚಾರ ಕೂಡ ಮಾಡಿದ್ದೆ. ಆದರೆ ಈಗ ಈ ವಿಚಾರ ಈ ರೀತಿ ತಗೋತಾರೆ ಅನ್ನೋದು ಗೊತ್ತಿರಲಿಲ್ಲ' ಎಂದಿದ್ದಾರೆ ಡಾಲಿ.

'ಲಿಂಗಾಯತರನ್ನ ಎಳೆದುತಂದಿದ್ದು ಸರಿಯಲ್ಲ'
'ಇದರ ಬಗ್ಗೆ ಚರ್ಚೆಯೂ ಚೆನ್ನಾಗಿ ನಡೆದಿದೆ. ಅದು ಒಳ್ಳೆಯದು, ಈ ರೀತಿಯಾದಾಗ ಸಮಾಜದಲ್ಲಿ ಏನೆಲ್ಲ ಚರ್ಚೆಯಾಗುತ್ತೆ ಅನ್ನೋದು ತಿಳಿಯುತ್ತೆ. ಡಾಲಿ ಬಿರಿಯಾನಿ ತಿಂದ್ರಾ ಅನ್ನೋದು ಓಕೆ. ಆದರೆ ಇದರಿಂದ ಲಿಂಗಾಯತರೆಲ್ಲ ಮಾಂಸ ತಿಂತಾರಾ? ಬ್ರಾಹ್ಮಣರೆಲ್ಲ ಬಿರಿಯಾನಿ ತಿಂತಾರಾ? ಅಂತೆಲ್ಲ ಸಮುದಾಯಗಳನ್ನ ಎಳೆದುತಂದಿದ್ದು ಅಗತ್ಯ ಇರಲಿಲ್ಲ. ಡಾಲಿ ಮಾಂಸ ತಿಂದ ಅಂದಿದ್ರೆ ಸಾಕಿತ್ತು. ಆದರೆ ಇದರ ಹಿಂದೆ ಕೆಲವರನ್ನ ಎತ್ತಿಕಟ್ಟುವ ಉದ್ದೇಶವಿತ್ತೋ ಗೊತ್ತಿಲ್ಲ' ಎಂದಿದ್ದಾರೆ.
'ಇಂತದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ಯಾಕಂದ್ರೆ ನಾನು ಸರಿಯಾಗಿದ್ದಾಗ ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಲ್ಲ. ಬೇರೆಯವರಿಗೆ ತೊಂದರೆ ಕೊಡದೆ, ಏನು ಮಾಡಿದ್ರೂ ತಪ್ಪಲ್ಲ ಅನ್ನೋದು ನನ್ನ ನಂಬಿಕೆ. ಅದೇ ನನ್ನಿಂದ ಯಾರಾದ್ರೂ ತೊಂದರೆಗೆ ಒಳಗಾದ್ರೆ ತಪ್ಪಾಗುತ್ತೆ' ಎಂದು ಹೇಳಿದ್ದಾರೆ.
'ಸಿನಿಮಾ ಪಾತ್ರಕ್ಕಾಗಿ ಧೂಮಪಾನ ಮಾಡ್ತಿದ್ದೆ. ಅದನ್ನ ನಿಜ ಜೀವನದಲ್ಲೂ ಮುಂದುವರೆಸಿ ನಿಲ್ಲಿಸಿದ್ದೇನೆ. ಸಿನಿಮಾಗೂ ಮುನ್ನ ನಾನು ತುಂಬಾ ಪಾರ್ಟಿ ಮಾಡ್ತಿದ್ದೆ, ನನ್ನ ಬಿಯರ್ ಬಾಯ್ ಎಂದೇ ಕರೆಯುತ್ತಿದ್ರು. ಈಗ ಆಗಾಗ ಮಾತ್ರ ಅಂತಹ ಪಾರ್ಟಿ ಮಾಡ್ತೀನಿ. ಹಾಗಂತ ನಾನು ಅದನ್ನ ಎಲ್ಲರೂ ಮಾಡಿ ಅಂತ ಪ್ರಚೋದನೆ ನೀಡಲ್ಲ. ಒಂದು ವೇಳೆ ಮಾಡಿದ್ರೂ ಹಿತಮಿತವಾಗಿಯೇ ಇರಿ' ಎಂದು ಹೇಳ್ತೀನಿ.
'ಮಾಂಸ ತಿನ್ನೋದು ಕ್ರೈಂ ಅಲ್ಲ'
'ನನಗೆ ಸೀ ಫುಡ್ ಅಂದ್ರೆ ಇಷ್ಟ, ನಾನು ಅದನ್ನ ಕದ್ದು ಮುಚ್ಚಿ ಮಾಡೋಕೆ ಕ್ರೈಂ ಅಲ್ವಲ್ಲ? ಅದೆಲ್ಲವೂ ನನಗಿಷ್ಟ, ಹಾಗಾಗಿ ತಿಂತೀನಿ. ಈ ಬಗ್ಗೆ ಮುಚ್ಚುಮರೆ ಏನಿಲ್ಲ, ಯಾರೇ ಬಂದು ಡಾಲಿ ನೀನು ಏನ್ ತಿಂತೀಯಾ? ಅಂದ್ರೆ ನೇರವಾಗಿ ಹೇಳ್ತೀನಿ ಎಂದಿದ್ದಾರೆ. ಟ್ರೋಲ್‌ಗಳಿಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಈ ವಿಚಾರ ಚರ್ಚೆಯಾಗಿದೆ. ಆಹಾರ ಅವರ ಹಕ್ಕು ಎಂಬ ಅಭಿಪ್ರಾಯವೂ ಚೆನ್ನಾಗಿ ವ್ಯಕ್ತವಾಗಿದೆ, ಅಷ್ಟು ಸಾಕು' ಎಂದಿದ್ದಾರೆ.
'ಫುಡ್ ನಾನು ತುಂಬಾ ಎಂಜಾಯ್ ಮಾಡ್ತೀನಿ. ಮನೆಯಲ್ಲಿ ಮಾಡೋ ಪುಳಿಯೋಗರೆ, ಚಿತ್ರಾನ್ನದಿಂದ ಹಿಡಿದು ಬಿರಿಯಾನಿವರೆಗೆ ಎಲ್ಲವೂ ಇಷ್ಟವಾಗುತ್ತೆ. ಇಷ್ಟವಾಗೋ ಎಲ್ಲವನ್ನೂ ಚೆನ್ನಾಗಿ ತಿಂತೀನಿ. ಕಲಾವಿದನಾಗಿಯೂ ನಾನು ಎಲ್ಲವನ್ನೂ ಸ್ವೀಕರಿಸುತ್ತೇನೆ' ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚಿಗೆ ಡಾಲಿ ಅವರು ಹೋಟೆಲ್‌ನಲ್ಲಿ ಬಿರಿಯಾನಿ ತಿನ್ನುತ್ತಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೆಲವರು ಈ ವಿಡಿಯೋ ಹಂಚಿಕೊಂಡು ಲಿಂಗಾಯತರು ಬಿರಿಯಾನಿ ತಿಂತಾರಾ? ಅಂತ ಪ್ರಶ್ನೆ ಮುಂದಿಟ್ಟಿದ್ದರು. ಆದರೆ ಡಾಲಿ ಬೆನ್ನಿಗೆ ನಿಂತ ಹಲವರು ಆಹಾರ ಅವರ ವೈಯಕ್ತಿಕ ಎಂದು ಬೆಂಬಿಲಿಸಿದ್ದರು.












Click it and Unblock the Notifications