ಪುತ್ರನ ಸಿನಿಮಾದ ಡ್ರೋನ್ ಟೆಕ್ನಿಷಿಯನ್ ಕೇಸ್, ಜಮೀರ್ ಪ್ರಕಾರ ಯಾರಿಂದ ತಪ್ಪಾಯ್ತು?
ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾದ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದ್ದು ಭಾರಿ ಸುದ್ದಿಯಾಗಿತ್ತು. ಶೂಟಿಂಗ್ ವೇಳೆ ಹಾಳಾದ ಡ್ರೋನ್‌ಗೆ ಚಿತ್ರತಂಡ ಯಾವುದೇ ಪರಿಹಾರ ಕೊಡಲಿಲ್ಲ ಎಂದು ಮನನೊಂದು ಡ್ರೋಲ್ ಮಾಲೀಕ ಆತ್ಮಹತ್ಯೆ ಯತ್ನಿಸಿದ್ದರು.
ಅಲ್ಲದೆ ಚಿತ್ರದ ನಟ ಹಾಗೂ ನಿರ್ಮಾಪಕರೂ ಆಗಿರುವ ಜೈದ್ ಖಾನ್ ವಿರುದ್ಧವೂ ಡ್ರೋನ್ ತಂತ್ರಜ್ಞ ಸಂತೋಷ್ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಕೇಸ್ ಬಗ್ಗೆ ಇದೀಗ ಜೈದ್ ಖಾನ್ ಅವರ ತಂದೆ ಸಚಿವ ಜಮೀರ್ ಅಹಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಡ್ರೋನ್ ತಂತ್ರಜ್ಞ ಸಂತೋಷ್ ಅವರಿಗೆ ಪುತ್ರ ಜೈದ್ ಪರಿಹಾರ ನೀಡುವುದಾಗಿ ಜಮೀರ್ ಹೇಳಿದ್ದಾರೆ.

ಸಿನಿಮಾದ ಡ್ರೋನ್ ವಿಚಾರ ನನ್ನ ಗಮನಕ್ಕೂ ಬಂತು. ಶೂಟಿಂಗ್ ವೇಳೆ ಡ್ರೋನ್‌ಗೆ ಡ್ಯಾಮೇಜ್ ಆಗಿದೆಯಂತೆ. ಡ್ರೋನ್ ಹಾರಿಸುವುದು ಅವರ ಜವಾಬ್ದಾರಿಯಾಗಿತ್ತು. ತುಂಬಾ ಎತ್ತರಕ್ಕೆ ಡ್ರೋನ್ ಹಾರಿಸಿದ್ದು ಯಾರ ತಪ್ಪು? ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಇಷ್ಟಾಗಿದ್ದರೂ ನನ್ನ ಪುತ್ರ ಜೈದ್ ನಷ್ಟ ಪರಿಹಾರ ನೀಡುವುದಾಗಿ ಒಪ್ಪಿದ್ದಾನೆ. ಡ್ರೋನ್ ಆಪರೇಟರ್ ಕಡೆಯಿಂದಲೇ ಈ ತಪ್ಪಾಗಿದೆ. ಅವನು ತೀರಾ ಬಡವನಾದ ಕಾರಣ ನನ್ನ ಮಗನೇ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಅವನಿಗೆ ಡ್ರೋನ್ ಖರೀದಿಸಲು ನೆರವಾಗುತ್ತೇವೆ ಎಂದು ಜಮೀರ್ ಭರವಸೆ ನೀಡಿದ್ದಾರೆ.

ಏನಿದು ಪ್ರಕರಣ?: ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ನಟ ಜೈದ್ ಖಾನ್ ಅವರ ನಟನೆಯ 'ಕಲ್ಟ್' ಸಿನಿಮಾ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಚಿತ್ರತಂಡದ ಡ್ರೋನ್ ಟೆಕ್ನಿಷಿಯನ್ ಸೂಸೈಡ್‌ಗೆ ಯತ್ನಿಸಿರುವ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಲ್ಟ್ ಚಿತ್ರತಂಡದ ಯಡವಟ್ಟಿನಿಂದ ಡ್ರೋನ್ ಟೆಕ್ನಿಷಿಯನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಚಿತ್ರದ ಡ್ರೋನ್ ಟೆಕ್ನಿಷಿಯನ್ ಆಗಿದ್ದ ಸಂತೋಷ್ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ್ದು, ಡ್ರೋನ್ ಹಾಳಾಗಿ ನಷ್ಟ ಪರಿಹಾರ ಸಿಗದಿದ್ದಕ್ಕೆ ಸಾಯಲು ಮುಂದಾಗಿದ್ದ ಎಂದು ಹೇಳಲಾಗಿತ್ತು.

ಕಲ್ಟ್ ಸಿನಿಮಾ ನಾಯಕ ಜೈದ್ ಖಾನ್ ಹಾಗೂ ನಿರ್ದೇಶಕ ಅನಿಲ್ ಮೇಲೂ ಹಲವು ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಚಿತ್ರದುರ್ಗದಲ್ಲಿ ಕಲ್ಟ್ ಸಿನಿಮಾದ ಶೂಟಿಂಗ್ ನಡೆದಾಗ ಇದಕ್ಕೆ ಡ್ರೋನ್ ಟೆಕ್ನಿಷಿಯನ್ ಆಗಿ ಸಂತೋಷ್ ಕೆಲಸ ಮಾಡಿದ್ರು. ಆದ್ರೆ ಆ ಲೊಕೇಶನ್‌ನಲ್ಲಿ ಡ್ರೋನ್ ಬೇಡ ಎಂದು ಹೇಳಿದ್ರೂ ಚಿತ್ರತಂಡ ಬಲವಂತವಾಗಿ ಡ್ರೋನ್‌ನಿಂದ ಶೂಟ್ ಮಾಡಿಸಿದ್ರು. ಈ ವೇಳೆ ವಿಂಡ್ ಫ್ಯಾನ್‌ಗೆ ತಗುಲಿ ಡ್ರೋನ್ ಪೀಸ್ ಪೀಸ್ ಆಗಿತ್ತು.
ಆದರೆ, ಇದಕ್ಕೆ ನಷ್ಟ ಪರಿಹಾರ ಕೊಡುವಂತೆ ಕೇಳಿದರೆ ಚಿತ್ರತಂಡ ಕೊಡಲಿಲ್ಲ ಎಂದು ಸಂತೋಷ್ ದೂರಿದ್ದರು. ಅಲ್ಲದೆ ಸಿನಿಮಾದ ನಿರ್ಮಾಪಕರಾದ ಜೈದ್ ಖಾನ್ ಕೂಡ ನನಗೆ ಮೋಸ ಮಾಡಿದ್ರು ಎಂದು ಗಂಭೀರ ಆರೋಪ ಮಾಡಿದ್ರು. ಡ್ರೋನ್ ನಂಬಿ ಜೀವನ ನಡೆಸುತ್ತಿದ್ದ ನನಗೆ ಡ್ರೋನ್ ಕೂಡ ಇಲ್ಲ, ನಷ್ಟ ಪರಿಹಾರವೂ ಇಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಂತೋಷ್ ಹೇಳಿಕೆ ನೀಡಿದ್ದರು.












Click it and Unblock the Notifications