Actor Darshan: ಚಿಕ್ಕಣ್ಣ ಅವರಿಂದಲೇ ದರ್ಶನ್‌ಗೆ ಸಂಕಷ್ಟ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ ಹೋಗಿ ಎರಡು ತಿಂಗಳು ಕಳೆದೇ ಹೋಯಿತು. ನಟ ದರ್ಶನ್ ಮತ್ತು ಗ್ಯಾಂಗ್ ಕಳೆದ 50 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್‌ರ ಬಂಧನಕ್ಕೆ ಹೊರಗಡೆ ಭಾರಿ ಪ್ರಯತ್ನ ನಡೆಯುತ್ತಿದೆ. ಮತ್ತೊಂದು ಕಡೆ ಪೊಲೀಸರು ಕೂಡ ಆರೋಪಿಗಳ ವಿರುದ್ಧ ಪ್ರಬಲವಾದ ಸಾಕ್ಷಿ ಸಂಗ್ರಹ ಮಾಡುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ನಟ ದರ್ಶನ್ ವಿರುದ್ಧ ಕೂಡ ಪೊಲೀಸರಿಗೆ ಪ್ರಬಲವಾದ ಸಾಕ್ಷಿಗಳೇ ಸಿಕ್ಕಿದೆ. ಅವರ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್‌ನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಕೂಡ ಪತ್ತೆಯಾಗಿದ್ದು ಪ್ರಕರಣಕ್ಕೆ ಬಲ ಬಂದಂತಾಗಿದೆ. ಇದೇ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಆಘಾತ ಎದುರಾಗಿದೆ ಅದು ಕೂಡ ಗೆಳೆಯ, ಸಹನಟ ಚಿಕ್ಕಣ್ಣ ಅವರಿಂದ!

ಚಿಕ್ಕಣ್ಣ ಹೇಳಿಕೆ ಈಗ ಸಾಕ್ಷಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅದು ಕೂಡ ಸಿಆರ್ ಪಿಸಿ (CrPC) 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ಪೊಲೀಸರು ಚಿಕ್ಕಣ್ಣ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿರುವುದು ಪ್ರಕರಣದ ಪ್ರಮುಖ ಸಾಕ್ಷಿ ಎಂದು ಪರಿಗಣಿಸಲಾಗುತ್ತದೆ.
ರೇಣುಕಾಸ್ವಾಮಿ ಕೊಲೆ ನಡೆದ ದಿನ ದರ್ಶನ್ ಅವರ ಜೊತೆ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು, ಇದೇ ವಿಚಾರವಾಗಿ ಚಿಕ್ಕಣ್ಣ ಅವರನ್ನು ಠಾಣೆಗೆ ಕರೆದು ವಿಚಾರಣೆ ಕೂಡ ಮಾಡಲಾಗಿತ್ತು. ನಟ ಚಿಕ್ಕಣ್ಣ ಠಾಣೆಗೆ ಬಂದು ಪೊಲೀಸರು ಕೇಳಿದ ವಿವರಗಳನ್ನು ಕೊಟ್ಟಿದ್ದರು.
ದಿನಕಳೆದಂತೆ ಚಿಕ್ಕಣ್ಣ ಏನಾದರೂ ತಮ್ಮ ಹೇಳಿಕೆಯನ್ನು ಬದಲಿಸಿದರೆ ವಿಚಾರಣೆಗೆ ಹಿನ್ನಡೆಯಾಗುತ್ತದೆ ಎಂದು ಅರಿತಿದ್ದ ಪೊಲೀಸರು ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಚಿಕ್ಕಣ್ಣ ವಿಚಾರಣೆ ವೇಳೆ ಏನು ಹೇಳಿದ್ದರೋ ಅದನ್ನೇ ಸಂದರ್ಭ ಬಂದಾಗ ನ್ಯಾಯಾಲಯದಲ್ಲಿ ಕೂಡ ಹೇಳಬೇಕಾಗುತ್ತದೆ. ಇದು ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ಜೂನ್ 8 ರಂದು ನಡೆದಿದ್ದ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು. ಪಾರ್ಟಿ ಬಳಿಕ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದರು ಎನ್ನಲಾಗಿದೆ. ಚಿಕ್ಕಣ್ಣ ಪಾರ್ಟಿ ಮುಗಿದ ಬಳಿಕ ಮನೆಗೆ ವಾಪಸ್ ಆಗಿದ್ದರು ಎಂದು ಹೇಳಲಾಗಿದೆ.
ಪೊಲೀಸರಿಗೆ ಚಿಕ್ಕಣ್ಣ ಹೇಳಿದ್ದೇನು?
ದರ್ಶನ್ ಅವರ ಜೊತೆ ಪಾರ್ಟಿಯಲ್ಲಿ ನಾನು ಭಾಗವಹಿಸಿದ್ದರೆ ಊಟ ಮಾಡಿದ ಬಳಿಕ ನಾನು ಮನೆಗೆ ಬಂದೆ. ಊಟ ಮಾಡುವ ಸಂದರ್ಭದಲ್ಲಿ ನಟ ದರ್ಶನ್ ಅವರಿಗೆ ಫೋನ್ ಬಂದಿತ್ತು, ಅವರು ಸ್ವಲ್ಪ ಆತಂಕದಲ್ಲಿರುವಂತೆ ಕಂಡಿತು. ಅವರ ಜೊತೆ ವಿನಯ್, ಪ್ರದೂಶ್ ಕೂಡ ಇದ್ದರು. ದರ್ಶನ್ ತಕ್ಷಣ ಅಲ್ಲಿಂದ ಹೋದರು, ಶೆಡ್‌ನಲ್ಲಿ ಏನಾಯಿತು ಎನ್ನುವ ಮಾಹಿತಿ ನನಗೆ ಇಲ್ಲ, ನಾನು ಪಾರ್ಟಿ ಬಳಿಕೆ ಮನೆಗೆ ಹೋದೆ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಚಿಕ್ಕಣ್ಣ ಅವರ ಈ ಹೇಳಿಕೆ ಪ್ರಕರಣದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದನ್ನು ಕೂಡ ಪೊಲೀಸರು ಪ್ರಮುಖ ಸಾಕ್ಷಿಯೆಂದು ಪರಿಗಣಿಸಿದ್ದಾರೆ. ಏನಾದರೂ ನಟ ದರ್ಶನ್ ಅವರ ಸಮಯ ಸರಿಯಿಲ್ಲ ಎನಿಸುತ್ತದೆ. ಮನೆ ಊಟ ಪಡೆಯಲು ಕೂಡ ದರ್ಶನ್‌ಗೆ ಸಾಧ್ಯವಾಗುತ್ತಿಲ್ಲ ಈ ನಡುವೆ ಅವರ ವಿರುದ್ಧ ಪೊಲೀಸರು ಪ್ರಮುಖ ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ಮತ್ತೊಂದು ಕಡೆ ಮನೆಯವರು, ಅಭಿಮಾನಿಗಳು ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋಗಿದ್ದಾರೆ.












Click it and Unblock the Notifications