ಒಂದು ವರ್ಷದ ಹಿಂದೆಯೇ ಚಂದನ್ ಹಾಗೂ ನಿವೇದಿತಾ ವಿಚ್ಚೇದನಕ್ಕೆ ನಿರ್ಧಾರ- ವಕೀಲೆ ಅನಿತಾ ಹೇಳಿದ್ದೇನು?
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹ ವಿಚ್ಚೇದನ ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ವಿಚ್ಚೇದನಕ್ಕೆ ಕಾರಣ ಏನು ಎನ್ನುವ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ. ಮಾದ್ಯಮಗಳಲ್ಲಿ ಅನೇಕ ಊಹಾಪೋಹಗಳು ಹರಿದಾಡುತ್ತಿದ್ದಂತೆ ನಿವೇದಿತಾ ಅವರ ವಕೀಲೆ ಅನಿತಾ ಅವರು ವಿಚ್ಚೇದನಕ್ಕೆ ಕಾರಣ ಏನು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಚಂದನ್ ಹಾಗೂ ನಿವೇದಿತಾ ಜೋಡಿ ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎನ್ನುವದರ ಮಾಹಿತಿಯನ್ನು ಇಬ್ಬರೂ ಕೂಡ ನೀಡಿಲ್ಲ. ಆದರೆ ಇವರಿಬ್ಬರೂ ಒಂದು ವರ್ಷದ ಹಿಂದೆಯೇ ವಿಚ್ಚೇದನ ಆಗಲು ಬಯಸಿದ್ದರು ಎನ್ನುವುದು ತಿಳಿದು ಬಂದಿದೆ.

ಹೌದು... ಸುದ್ದಿಗಾರರೊಂದಿಗೆ ಮಾತನಾಡಿದ ನಿವೇದಿತಾ ಪರ ವಕೀಲರಾದ ಅನಿತಾ ಅವರು, 'ನಾನು ಮಾಧ್ಯಮಗಳ ಜೊತೆಗೆ ಮಾತನಾಡಲು ಕಾರಣ ಏನು ಅಂದರೆ ಮಾಧ್ಯಮದಲ್ಲಿ ನಿವೇದಿತಾ ಹಾಗೂ ಚಂದನ್ ವಿಚ್ಚೇದನದ ಬಗ್ಗೆ ತಪ್ಪಾಗಿ ಪ್ರಸಾರ ಮಾಡಲಾಗುತ್ತಿದೆ. ಸಾಕಷ್ಟು ಊಹಾಪೋಹಗಳಿವೆ. ಹೀಗಾಗಿ ನಾನು ಸ್ಪಷ್ಟತೆ ನೀಡಲು ಬಯಸುತ್ತೇನೆ. ವಿಚ್ಚೇದನದ ಪಡೆಯಲು ಆರು ತಿಂಗಳು ಕಾಲಾವಕಾಶ ಇರುತ್ತಿತ್ತು. ಆದರೆ ಈಗ ಹಾಗಲ್ಲ. ತಕ್ಷಣಕ್ಕೆ ವಿಚ್ಚೇದನ ಪಡೆಯಬಹುದು. ಇಬ್ಬರೂ ಮೆಚ್ಯೂರ್ ಆಗಿದ್ದಾರೆ. ಇಬ್ಬರೂ ಬೆಸ್ಟ್ ಹ್ಯೂಮನ್ ಬೀಯಿಂಗ್ಸ್. ಒಂದು ವರ್ಷದ ಹಿಂದೆಯೇ ಅವರಿಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡುವುದು ಸರಿ ಅಲ್ಲ' ಎಂದರು.
'ಅವರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದಾಗ ದೊಡ್ಡವರು ಸಂಧಾನ ಮಾಡಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಇಬ್ಬರೂ ಸಂತೋಷದಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ. ಹಣ, ವಯಸ್ಸು, ಮಗು ವಿಚಾರ ವಿಚ್ಚೇದನಕ್ಕೆ ಕಾರಣವಲ್ಲ. ಅದು ತಪ್ಪು ಭಾವನೆ. ವಿಚ್ಚೇದನಕ್ಕೆ ದೊಡ್ಡ ಮನಸ್ತಾಪವೇ ಆಗಬೇಕೆಂದಿಲ್ಲ. ಇಬ್ಬರ ಆಲೋಚನೆ ಬೇರೆ ಇದೆ. ಒಬ್ಬರಿಗೊಬ್ಬರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತಾರೆ. ಕನಸುಗಳನ್ನು ಬೆನ್ನತ್ತಬೇಕು ಎಂದರೆ ಕೆಲವು ತ್ಯಾಗ ಮಾಡಲೇಬೇಕು. ಹೀಗಾಗಿ ಅವರಿಬ್ಬರೂ ವಿಚ್ಚೇದನ ಪಡೆದುಕೊಂಡಿದ್ದಾರೆ' ಎಂದರು.

ಇಬ್ಬರಿಗೂ ಹೆಚ್ಚಿನ ಸಾಮಾರ್ಥ್ಯವಿದೆ. ಅವರಿಬ್ಬರೂ ಸೆಲೆಬ್ರಿಟಿಗಳು. ಅವರಿಬ್ಬರಿಗೂ ಕನಸುಗಳಿವೆ. ಆ ಕನಸು ನನಸಾಗಿಸುವ ಪ್ರಯತ್ನದಲ್ಲಿದ್ದಾರೆ. ಅವರ ಖಾಸಗಿತನಕ್ಕೆ ಗೌರವ ಕೊಡಬೇಕು ಎಂದು ಅನಿತಾ ಹೇಳಿದರು.
ಬಿಗ್ ಬಾಸ್ ಕನ್ನಡ ಸೀಸನ್ 5' ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪೋಸ್ ಮಾಡಿದ್ದರು. ಬಳಿಕ ಅವರಿಬ್ಬರು 2020 ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಬಳಿಕ ಗಿಚ್ಚಿಗಿಲಿಗಿಲಿ ಸೇರಿದಂತೆ ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ಈ ಜೋಡಿ ಕಾಣಿಸಿಕೊಳ್ಳುತಿತ್ತು. ಇನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿರುವ ನಿವೇದಿತಾ ಗೌಡ ಆಗಾಗ ಹೊಸ ಹೊಸ ರೀಲ್ಸ್ ಹಂಚಿಕೊಳ್ಳುತ್ತಾರೆ. ಹೀಗೆ ಅನ್ಯೋನ್ಯವಾಗಿದ್ದ ಈ ಜೋಡಿ ವಿಚ್ಚೇದನಕ್ಕೆ ಮುಂದಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.












Click it and Unblock the Notifications