Bigg Boss: ಬಿಗ್ ಬಾಸ್ ವೇದಿಕೆ ಮೇಲೆ ಚೈತ್ರಾ ಕುಂದಾಪುರ ಕಾಂಟ್ರವರ್ಸಿ ಹೇಳಿಕೆ
ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿದ್ದು, ಹದಿನೇಳು ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಪೈಕಿ ಚೈತ್ರಾ ಕುಂದಾಪುರ ಕೂಡ ಒಬ್ಬರು. ಇದೀಗ ಚೈತ್ರಾ ಕುಂದಾಪುರ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚೈತ್ರಾ ಕುಂದಾಪುರ ಹಿಂದೂ ಪರ ಭಾಷಣಗಳ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಕಳೆದ ವರ್ಷ ಚೈತ್ರಾ ಕುಂದಾಪುರ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಜೈಲು ವಾಸ ಕೂಡ ಅನುಭವಿಸಿ ಹೊರ ಬಂದಿದ್ದರು. ಭಾರೀ ಮೊತ್ತದ ಹಣ ಪಡೆದು ವಂಚನೆ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು.

ಇದೀಗ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ಗ್ರ್ಯಾಂಡ್ ಓಪನಿಂಗ್ ದಿನವೇ ವೇದಿಕೆ ಮೇಲೆ ಚೈತ್ರಾ ತಮ್ಮ ವಿವಾದ ಹಾಗೂ ಇತರ ವಿಚಾರವಾಗಿ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಎದುರು ವೇದಿಕೆ ಮೇಲೆ ಮಾತನಾಡಿದ ಚೈತ್ರಾ ಕುಂದಾಪುರ, 'ಅರ್ಧ ಗಂಟೆ ಒಂದು ಗಂಟೆ ವೇದಿಕೆ ಮೇಲೆ ನಿಂತು ಭಾಷಣ ಮಾಡುವುದು ಮಾತ್ರ ಚೈತ್ರಾ ಅಲ್ಲ. ಅದರಾಚೆಗಿನ ಚೈತ್ರಾ ಬೇರೆನೆ ಇದ್ದಾರೆ. ಬಹುಶಃ ಅದನ್ನು ತೋರಿಸುವಂತಹ ಸಮಯ ಈಗ ಬಂದಿದೆ ಅಂತಾ ನಾನು ಭಾವಿಸುತ್ತೇನೆ. ವೇದಿಕೆ ಮೇಲೆ ನಿಂತು ಮಾತನಾಡುವುದು ಹಾಗೂ ವೇದಿಕೆಯಿಂದ ಆಚೆಗೆ ಸಮಾಜಕ್ಕೆ ಕಾಣುವ ವ್ಯಕ್ತಿತ್ವ ಬೇರೆನೆ ಇರುತ್ತದೆ' ಎಂದರು.
ಬಹಳ ಬೇಗ ರಿಯ್ಯಾಕ್ಟ್ ಆಗುತ್ತಾರೆ ಎನ್ನುವಂತಹ ಸಂದರ್ಭದಲ್ಲಿ ನಾನು ರಿಯ್ಯಾಕ್ಟ್ ಆಗದೇ ಇರಬಹುದು. ಅಥವಾ ನೋಡುವವರು ಶಾಕ್ ಆಗುವ ಹಾಗೇ ಕೂಡ ಬದುಕಬಹುದು ಅದನ್ನು ಖಂಡಿತಾ ನನ್ನ ಕಡೆಯಿಂದ ಬಿಗ್ ಬಾಸ್ ಮನೆಯಲ್ಲಿ ನಿರೀಕ್ಷೆ ಮಾಡಬಹುದು ಎಂದು ಹೇಳಿದರು.
ನನ್ನ ಜೀವನದಲ್ಲಿ ವಿವಾದದಗಳು ಎನ್ನುವುದಕ್ಕಿಂತ ನಾನು ಕಲಿಯುತ್ತಿದ್ದೇನೆ. ಪ್ರತಿ ಕಲಿಯುವಿಕೆಯಲ್ಲಿಯೂ ಕೂಡ ತಪ್ಪಿರಬಹುದು. ಅಥವಾ ನಾನು ಬೆಳೆದಿರುವ ವಾತಾವರಣವನ್ನು ಅಥವಾ ನಾನು ನಂಬಿರುವ ಚಿಂತನೆಗಳನ್ನು ಎಲ್ಲರೂ ಒಪ್ಪದೇ ಇರಬಹುದು. ಅದು ವಿವಾದ ಆಗಿರಬಹುದು. ಆದರೆ ನನಗೆ ಸರಿ ಅನಿಸಿದ್ದು, ಸತ್ಯ ಅನಿಸಿದ್ದನ್ನು ನಾನು ಗಟ್ಟಿಯಾಗಿ ಹೇಳುತ್ತೇನೆ ಎಂದರು.
ಸತ್ಯ ಹೇಳೋದು ವಿವಾದ ಆಗುತ್ತದೆ ಎನ್ನುವುದಾದರೆ ನನಗೆ ಆ ಕಾಂಟ್ರವರ್ಸಿ ಮೇಲೆ ಪ್ರೀತಿ ಇದೆ. ನನಗೆ ಅದರ ಮೇಲೆ ಭಯ ಇಲ್ಲ. ನಾನು ನನ್ನ ವಿರೋಧಿಗಳಿಗೆ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ನನ್ನ ಫ್ಯಾಮಿಲಿ ಇವತ್ತು ಅಷ್ಟು ಗಟ್ಟಿ ಮಾಡಿದೆ ಅಂದರೆ ನನ್ನ ಮೇಲೆ ಬಂದ ಆರೋಪಗಳು. ಪ್ರತಿ ಮನಿಷ್ಯನ ಬದುಕನ್ನು ಗಟ್ಟಿ ಮಾಡುವುದು ಈ ರೀತಿಯ ಟೀಕೆ, ಟಿಪ್ಪಣಿಗಳು ಹಾಗೂ ಆರೋಪಗಳೇ ಎಂದು ನಾನು ನಂಬುತ್ತೇನೆ. ಸಮಾಜಕ್ಕೆ ಬಂದ ಮೇಲೆ ನಾವು ಗಟ್ಟಿಯಾಗಿದ್ದೇ ಇರುತ್ತೇವೆ. ನನ್ನ ಕುಟುಂಬ ಗಟ್ಟಿಯಾಗಿದೆ ಅದು ನನಗೆ ಮುಖ್ಯ ಎಂದು ಚೈತ್ರಾ ಕುಂದಾಪುರ ಹೇಳಿದರು.












Click it and Unblock the Notifications