Shah Rukh Khan: ಶಾರುಖ್ ಖಾನ್‌ಗೆ ಬೆದರಿಕೆ- ಹಿಂದಿದೆ ಜಿಂಕೆ ಸಂಪರ್ಕ!
ಬಾಲಿವುಡ್ ನಟರಿಗೆ ಒಬ್ಬರಾದ ನಂತರ ಒಬ್ಬರಂತೆ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಸದ್ಯ ನಟ ಶಾರುಖ್ ಖಾನ್‌ಗೂ ಬೆದರಿಕೆ ಕರೆ ಬಂದಿದೆ. ಇದರಿಂದಾಗಿ ಬಾಲಿವುಡ್ ಅಂಗಳದಲ್ಲಿ ಏನಾಗುತ್ತಿದೆ ಎನ್ನುವ ಪ್ರಶ್ನೆಗಳು ಕಾಡತೊಡಗಿವೆ.
ಸಾಮಾನ್ಯವಾಗಿ ಹಣವಂತರಿಗೆ, ರಾಜಕಾರಣಿಗಳಿಗೆ, ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕುವುದು ಸರ್ವೇ ಸಾಮಾನ್ಯ. ಆದರೆ ಬಾಲಿವುಡ್ ನಟರಿಗೆ ವಿಶೇಷವಾಗಿ ಖ್ಯಾತ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್‌ಗೆ ಬೆದರಿಕೆ ಕರೆ ಹಾಗೂ ಸಂದೇಶಗಳು ಬರುತ್ತಿರುವುದು ಅಚ್ಚರಿಯನ್ನುಂಟು ಮಾಡಿದೆ. ಅಲ್ಲದೆ ಅವರ ಅಭಿಮಾನಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.

ಹೌದು.. ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಗುರುವಾರ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ಕ್ರಮ ಕೈಗೊಂಡು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ ಕರೆ ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ.
ಮುಂಬೈ ಪೊಲೀಸರು ತನಿಖೆಗಾಗಿ ರಾಯಪುರಕ್ಕೆ ತೆರಳಿದ್ದು ಕರೆ ಮಾಡಿದವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ತನಿಖೆ ವೇಳೆ ವೃತ್ತಿಯಲ್ಲಿ ವಕೀಲರಾಗಿರುವ ಮೊಹಮ್ಮದ್ ಫೈಜಾನ್ ಖಾನ್ ಅವರ ಸಂಖ್ಯೆಯಿಂದ ಕರೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರು ಆರೋಪಿ ಫೈಜಾನ್ ನನ್ನು ಗಂಟೆಗಟ್ಟಲೆ ವಿಚಾರಣೆ ನಡೆಸಿ ನೋಟಿಸ್ ಜಾರಿ ಮಾಡಿದ್ದಾರೆ. ಇದೀಗ ಆರೋಪಿ ಫೈಜಾನ್ ಹೇಳಿಕೆಯೂ ಹೊರಬಿದ್ದಿದೆ.

ಶಾರುಖ್ ಖಾನ್ ಬೆದರಿಕೆ ಹಿಂದೆ ಜಿಂಕೆ ಸಂಪರ್ಕ
ಆರೋಪಿ ಮೊಹಮ್ಮದ್ ಫೈಜಾನ್ ಖಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನವೆಂಬರ್ 2 ರಂದು ನನ್ನ ಫೋನ್ ಕಳ್ಳತನವಾಗಿದೆ. ಈ ಬಗ್ಗೆ ನಾನು ಖಮರ್ದಿಹ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಇಂದು ಬಾಂದ್ರಾ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಸ್ಥಳೀಯ ಪೊಲೀಸರೊಂದಿಗೆ ನನ್ನ ಬಳಿಗೆ ಬಂದು ನಿಮ್ಮ ಫೋನ್‌ನಿಂದ ಶಾರುಖ್ ಖಾನ್‌ಗೆ ಕರೆ ಮಾಡಲಾಗಿದೆ ಎಂದು ಹೇಳಿದರು. ಅವರು ಎರಡು ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿದರು ಎಂದಿದ್ದಾರೆ.
ತಾನು ರಾಜಸ್ಥಾನ ಮೂಲದವನಾಗಿದ್ದು, ಈ ಹಿಂದೆ ಶಾರುಖ್ ಖಾನ್ ವಿರುದ್ಧ ಚಿತ್ರದಲ್ಲಿನ ಜಿಂಕೆ ದೃಶ್ಯಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿ ದೂರು ದಾಖಲಿಸಿದ್ದಾಗಿ ಫೈಜಾನ್ ಹೇಳಿದ್ದಾರೆ. ಜಿಂಕೆಯನ್ನು ಕೊಂದು ವಾಪಸ್ ಕರೆತರುವ 'ಅಂಜಾಂ' ಸಿನಿಮಾದ ಬಗ್ಗೆ ಶಾರುಖ್ ಖಾನ್ ವಿರುದ್ಧ ನಾನು ಈ ಹಿಂದೆ ದೂರು ನೀಡಿದ್ದೆ. ನಾನು ಅದನ್ನು ವಿರೋಧಿಸಿ ಮುಂಬೈನಲ್ಲಿ ದೂರು ನೀಡಿದ್ದು ನಿಜ. ಆದರೆ ನಾನು ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿಲ್ಲ. ನಟನಿಗೆ ಬೆದರಿಕೆ ಕರೆ ಮಾಡುವುದರ ಹಿಂದೆ ಷಡ್ಯಂತ್ರವಿದೆ ಎಂಬ ಭಯವನ್ನು ಫೈಜಾನ್ ವ್ಯಕ್ತಪಡಿಸಿದ್ದಾರೆ.












Click it and Unblock the Notifications