ಬಿಗ್‌ಬಾಸ್ ವಿನ್ನರ್, ಖ್ಯಾತ ನಟಿ ದೀಪಿಕಾಗೆ ಗೆಡ್ಡೆ ಕ್ಯಾನ್ಸರ್!
ಬಿಗ್‌ಬಾಸ್ ರಿಯಾಲಿಟಿ ಶೋ ವಿನ್ನರ್, ಖ್ಯಾತ ಕಿರುತೆರೆ ನಟಿ ದೀಪಿಕಾ ಕಾಕರ್ (Dipika Kakar) ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕ್ಯಾನ್ಸರ್ ಎರಡನೇ ಹಂತದಲ್ಲಿದ್ದು, ಈ ಶಾಕಿಂಗ್ ವಿಚಾರವನ್ನು ದೀಪಿಕಾ ಅವರೇ ಖುದ್ದಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ದೃಢಪಡಿಸಿದ್ದಾರೆ. ಇದರೊಂದಿಗೆ ಅವರು ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. ದೀಪಿಕಾ ದಂಪತಿ ತಮ್ಮ ವ್ಲಾಗ್‌ನಲ್ಲಿ ಈ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದು, ಕ್ಯಾನ್ಸರ್ ವಿಚಾರ ತಿಳಿದು ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ದೀಪಿಕಾ ಅವರಿಗೆ ಆರಂಭದಲ್ಲಿ ಹೊಟ್ಟೆಯ ಮೇಲ್ಭಾಗದಲ್ಲಿ ಸಾಮಾನ್ಯ ನೋವು ಭಾವಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದ ನಂತರ ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದೆ. ಬಳಿಕ ಈ ವಿಚಾರವನ್ನು ದೀಪಿಕಾ ಬಹಿರಂಗಪಡಿಸಿದ್ದಾರೆ. ದೀಪಿಕಾ ಅವರ ಲಿವರ್‌ನಲ್ಲಿ (ಯಕೃತ್) ಸುಮಾರು ಒಂದು ಚೆಂಡಿನ ಗಾತ್ರದ ಗೆಡ್ಡೆ ಇರುವುದು ಪತ್ತೆಯಾಗಿದೆ. ಬಳಿಕ ಮತ್ತಷ್ಟು ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಗೆಡ್ಡೆ ಕ್ಯಾನ್ಸರ್ ಎರಡನೇ ಹಂತದಲ್ಲಿರುವುದು ದೃಢಪಟ್ಟಿದೆ.

ತಮಗೆ ಕ್ಯಾನ್ಸರ್ ಇರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ದೀಪಿಕಾ, ʼನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ವಾರಗಳು ನಮಗೆ ತುಂಬಾ ಕಷ್ಟಕರವಾಗಿತ್ತು. ನನ್ನ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ನಡೆದುಕೊಂಡು ಹೋಗುವುದು, ನಂತರ ಅದು ಲಿವರ್‌ನಲ್ಲಿ ಟೆನ್ನಿಸ್ ಚೆಂಡಿನ ಗಾತ್ರದ ಗೆಡ್ಡೆ ಎಂದು ಕಂಡುಹಿಡಿಯುವುದು, ನಂತರ ಆ ಗೆಡ್ಡೆ ಎರಡನೇ ಹಂತದ ಮಾರಕ ಕ್ಯಾನ್ಸರ್ ಎಂದು ತಿಳಿದಿದ್ದು ನಾವು ನೋಡಿದ ಅತ್ಯಂತ ಕಷ್ಟಕರ ಸಮಯಗಳಲ್ಲಿ ಒಂದಾಗಿದೆʼ ಎಂದಿದ್ದಾರೆ.
ಕ್ಯಾನ್ಸರ್ ವಿಚಾರ ತಿಳಿದ ಮೇಲೆ ನಾನು ಈಗ ಪಾಸಿಟಿವ್ ಆಗಿಯೇ ಇದ್ದೇನೆ. ಕ್ಯಾನ್ಸರ್ ಅನ್ನು ಎದುರಿಸಲು ಮತ್ತು ಬಲಶಾಲಿಯಾಗಿ ಹೊರಬರಲು ದೃಢನಿಶ್ಚಯ ಹೊಂದಿದ್ದೇನೆ. ನನ್ನ ಇಡೀ ಕುಟುಂಬ ನನ್ನೊಂದಿಗೆ ಇದೆ. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರಾರ್ಥನೆಗಳೊಂದಿಗೆ ನಾನು ಇದನ್ನು ದಾಟುತ್ತೇನೆʼ ಎಂದು ಆತ್ಮಸ್ಥೈರ್ಯದ ಮಾತುಗಳನ್ನಾಡಿದ್ದಾರೆ.
ದೀಪಿಕಾ ಹಿನ್ನೆಲೆ ಏನು?
ದೀಪಿಕಾ ಹಿಂದಿ ಕಿರುತೆರೆಯಲ್ಲಿ ತುಂಬಾ ಹೆಸರುವಾಸಿಯಾಗಿದ್ದಾರೆ. ಸಸುರಲ್ ಸಿಮರ್ ಕಾ ಪಾತ್ರಗಳಲ್ಲಿ ನಟಿಸಿದ್ದ ಕಾಕರ್ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದರು. ಬಿಗ್ ಬಾಸ್ ಸೀಸನ್ 12ರ ವಿನ್ನರ್ ಆಗಿಯೂ ಅವರು ಹೊರಹೊಮ್ಮಿದ್ದರು. 2018ರಲ್ಲಿ ನಟ ಶೋಯೆಬ್ ಇಬ್ರಾಹಿಂ ಅವರನ್ನು ವಿವಾಹವಾದರು. 2023ರಲ್ಲಿ ಈ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡರು.
ಇವರ ಪತಿ ನಟ ಶೋಯೆಬ್ ಇಬ್ರಾಹಿಂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳಿಗೆ ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಾರ ದೀಪಿಕಾಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು, ಆದರೆ ದೀಪಿಕಾ ಈಗ ಜ್ವರದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಆಪರೇಷನ್ ಮುಂದೂಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ದೀಪಿಕಾ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಖ್ಯಾತ ನಟ ನಟಿಯರು ಕೂಡ ದೀಪಿಕಾ ಅವರ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications