BBK 12: ಈ ಸಲ ಅವರ ಆಟ ನಡೆಯಲ್ಲ: ಬಿಗ್‌ಬಾಸ್ ಹೊಸ ಪ್ರೋಮೋದಲ್ಲಿ ಬಿಗ್ ಟ್ವಿಸ್ಟ್
ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಸೀಸನ್ 12ರ (Bigg Boss Kannada 12) ನಿರೂಪಣೆಗೆ ರೆಡಿಯಾಗಿದ್ದಾರೆ. ಕಲರ್ಸ್ ವಾಹಿನಿ ಹಂಚಿಕೊಂಡಿದ್ದ ಮೊದಲನೇ ಪ್ರೋಮೋದಲ್ಲಿ ಸುದೀಪ್ ಅವರ ಲುಕ್ ರಿವೀಲ್ ಆಗಿತ್ತು. ಈಗ ಮತ್ತೊಂದು ಪ್ರೋಮೋ ಹಂಚಿಕೊಂಡಿದ್ದು, ಇದರಲ್ಲಿ ಸುದೀಪ್ ಅವರು ಈ ಸೀಸನ್ ಹೇಗಿರಲಿದೆ ಎಂಬ ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಹನ್ನೊಂದು ಸೀಸನ್ ನೋಡಿದ್ದೀವಿ, ನಮಗೆಲ್ಲಾ ಗೊತ್ತು ಅಂದುಕೊಂಡವರಿಗೆ "ಓ ಭ್ರಮೆ" ಎಂದು ಸುದೀಪ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
'ಈ ಸಲ ನೀವಿದ್ದೀರಾ? ಎಂದು ಕೇಳ್ತಾ ಇದ್ದೋರು, ಈಗ ಮುಂದೆ ಏನು, ಮುಂದೇನು? ಅಂತ ಕೇಳ್ತಿದ್ದೀರ. ಒಂದು ಕಥೆ ಹೇಳ್ಲಾ? ಎಂದು ಸುದೀಪ್ ಪ್ರೋಮೋದಲ್ಲಿ ಝಲಕ್ ಕೊಟ್ಟಿದ್ದಾರೆ. ಒಂದೂರಲ್ಲಿ ಒಂದು ಕಾಗೆ ಇತ್ತು, ನೀವೆಲ್ಲ ಸ್ಕೂಲಲ್ಲಿ ಕೇಳಿದ್ದ ಅದೇ ಕಾಗೆ ಕಥೆ.. ಆ ಕಾಗೆಗೆ ಹಸಿವಾಗಿದ್ದಾಗ ವಡೆ ಮಾಡ್ತಿದ್ದ ಅಜ್ಜಿ ಹತ್ರ ಹೋಗಿ ವಡೆ ಕೊಡ್ತೀಯಾ ಅಂತ ಕೇಳುತ್ತೆ. ಅಜ್ಜಿ ಪ್ರೀತಿಯಿಂದ ಒಂದು ವಡೆ ಕೊಡುತ್ತೆ...' ಎಂದು ಸುದೀಪ್ ಕಥೆ ಶುರು ಮಾಡಿದ್ದಾರೆ.

'ಕಾಗೆ ಆ ವಡೆ ತಗೊಂಡು ಹಾರುತ್ತಾ ಹೋಗಿ ಮರದ ಮೇಲೆ ಕೂತು, ಇನ್ನೇನು ತಿನ್ಬೇಕು..ಆಗ ಒಬ್ಬನ ಎಂಟ್ರಿಯಾಗುತ್ತೆ, ಅವನೇ ವಿಲನ್ ಎಂದು ನರಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಕಾಗೆ ಬಾಯಲ್ಲಿರೋ ವಡೆಯನ್ನ ಕಸಿದುಕೊಳ್ಳಬೇಕು ಅಂತಾ ಸ್ಕೆಚ್ ಹಾಕುತ್ತೆ. ಆಗ ಕಾಗೆಗೆ ನೀನು ಕೋಗಿಲೆ ತರ ಚೆನ್ನಾಗಿ ಹಾಡು ಹಾಡ್ತೀಯ, ನನಗೋಸ್ಕರ ಒಂದು ಹಾಡು ಹಾಡು ಅಂತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಾಗೆ ನರಿ ಮಾತನ್ನ ಕೇಳಲು ಹೋಗಿ ಬಾಯಲ್ಲಿದ್ದ ವಡೆ ಕೆಳಗೆ ಬಿದ್ದು ನರಿ ಬಾಯಿಗೆ ಸೇರುತ್ತೆ ಅನ್ನೋವಾಗ...ನಿಮಗೆಲ್ಲ ಈ ಕ್ಲೈಮ್ಯಾಕ್ಸ್ ಗೊತ್ತಿದೆ ಅಂತ ಅನ್ಕೊಂಡ್ರೆ ಓ ಭ್ರಮೆ...' ಎಂದು ಸುದೀಪ್ ನಕ್ಕಿದ್ದಾರೆ.
'ಕಥೆಗೆ ಟ್ವಿಸ್ಟ್' ಎಂದ ಸುದೀಪ್
ಆಗ ಕಾಗೆ ವಡೆಯನ್ನು ಬೀಳಿಸದೆ ಕಾಲಲ್ಲೆ ಹಿಡಿದು ಹಾಡುವುದು, ನರಿ ಬೇಸರವಾಗಿ ಅಲ್ಲಿಂದ ಮರಳುವ ಹೊಸ ಕಥೆಯನ್ನು ಪ್ರೋಮೋದಲ್ಲಿ ಆನಿಮೇಷನ್ ಮೂಲಕ ತೋರಿಸಲಾಗಿದೆ. 'ಈ ಬಾರಿಯ ಬಿಗ್‌ಬಾಸ್ ಕೂಡ ಹಾಗೇನೇ, ನಾವು ಹನ್ನೊಂದು ಸೀಸನ್ನೂ ನೋಡಿದ್ದೀವಿ. ನಮ್ಗೆ ಬಿಗ್‌ಬಾಸ್ ಬಗ್ಗೆ ಎಲ್ಲಾ ಗೊತ್ತು.. ಅನ್ನೋರಿಗೆ ಈ ಬಿಗ್‌ಬಾಸ್‌ನಲ್ಲಿ ಹೊಸ ಶಾಕ್ ಕಾದಿದೆ' ಎಂದು ಸುದೀಪ್ ಸುಳಿವು ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಕಥೆಗಳಲ್ಲಿ ನರಿ ಪಾತ್ರವನ್ನು ಕುತಂತ್ರದ ಪ್ರತೀಕ ಎಂದು ಕರೆಯಲಾಗುತ್ತದೆ. ಪ್ರೋಮೋದಲ್ಲಿಯೂ ನರಿ ಕಥೆಯನ್ನು ಉಲ್ಲೇಖಿಸಿರುವ ಬಿಗ್‌ಬಾಸ್, ಈ ಬಾರಿ ನರಿಯ ಆಟ ನಡೆಯಲ್ಲ, ನೀವು ಅಂದುಕೊಂಡಂತೆಯೇ ನಡೆಯಲ್ಲ ಎಂಬ ಹಿಂಟ್ ನೀಡಿದೆ. ಅಲ್ಲದೆ ಬಿಗ್‌ಬಾಸ್ ಈ ಸೀಸನ್ ಕೂಡ ಕಳೆದ ಸೀಸನ್‌ಗಳಂತೆಯೇ ಇರುತ್ತೆ ಎಂದು ಡೈಲಾಗ್ ಹೊಡೆಯುವವರಿಗೂ ಪಿಕ್ಚರ್ ಅಭೀ ಬಾಕಿ ಹೈ ಎಂದು ಕೌಂಟರ್ ನೀಡಿದೆ.
ಮೊದಲ ಪ್ರೋಮೋದಲ್ಲಿ ಯಾವ ರೀತಿಯ ಸ್ಪರ್ಧಿಗಳೆಲ್ಲ ಒಂದು ಕಡೆ ಸೇರ್ತಾರೆ ಎನ್ನುವ ಸುಳಿವು ನೀಡಿತ್ತು. ಈ ಪ್ರೋಮೋದಲ್ಲಿ ನರಿ ಕಥೆಯನ್ನು ಹೈಲೈಟ್ ಮಾಡಲಾಗಿದ್ದು, ಆಟದಲ್ಲಿ ಹೊಸ ಬದಲಾವಣೆ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications