5 ಕೋಟಿ ವಂಚನೆಯ ಗುಟ್ಟೇನು?: ಕೊನೆಗೂ ಮೌನ ಮುರಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ದಿನಗಳತ್ತ ಸಾಗುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಬಾಕಿ ಇರುವಾಗಲೇ ಕಳೆದ ವಾರದ ವೀಕೆಂಡ್ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನಗಳಲ್ಲಿ ಬ್ಯೂಸಿಯಾಗಿರುವ ಚೈತ್ರಾ ಕುಂದಾಪುರ, ಬಿಗ್ ಬಾಸ್ ಪಯಣದ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಕೆಲವು ವಿಚಾರಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಒಬ್ಬ ಚುನಾವಣಾ ಟಿಕೆಟ್ ಆಕಾಂಕ್ಷಿಗೆ ಒಂದು ಪಕ್ಷದಿಂದ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ವಂಚಿಸಿದ್ದಾರೆ ಎನ್ನುವ ಆರೋಪದ ಬಗ್ಗೆ ಬಾಸ್ ಟಿವಿ ಜೊತೆ ಮಾತನಾಡಿದ ಚೈತ್ರಾ ಕುಂದಾಪುರ, 'ಈ ಪ್ರಕರಣ ಕೋರ್ಟ್‌ನಲ್ಲಿದೆ. ಆರೋಪ ಸುಳ್ಳು ಎಂದು ಸಾಬೀತು ಮಾಡಿಕೊಳ್ಳಲು ನ್ಯಾಯಾಲಯ ಖಂಡಿತವಾಗಿಯೂ ಅವಕಾಶ ಕೊಟ್ಟೇ ಕೊಡುತ್ತದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ' ಎಂದಿದ್ದಾರೆ.

'ನನ್ನ ರೀತಿ ಸಾಮಾಜಿಕ ಜೀವನದಲ್ಲಿರುವ ಎಲ್ಲರ ಮೇಲೂ ಇಂತಹದೊಂದು ಆರೋಪ ಬಂದೇ ಬರುತ್ತದೆ. ಯಾರಾದರೂ ಬೆಳೆಯುತ್ತಾರೆ ಎಂದರೆ ತುಳಿಯುವಂತಹ ಪ್ರಯತ್ನವನ್ನು ಸಾವಿರ ಸಲ ಮಾಡಿಯೇ ಮಾಡುತ್ತಾರೆ. ನನಗೆ ನನ್ನ ಮೇಲೆ ನೂರಕ್ಕೆ ನೂರು ಗ್ಯಾರಂಟಿ ಇದೆ. ನಾನು ತಪ್ಪು ಮಾಡಿದ್ದರೆ ಮತ್ತೆ ಸಮಾಜದ ಮುಂದೆ ತಲೆ ಎತ್ತಿ ಬರುತ್ತಿರಲಿಲ್ಲ. ಯಾಕೆಂದರೆ ತಪ್ಪು ಮಾಡಿದವನಿಗೆ ಒಂದು ಅಂಜಿಕೆ ಇರುತ್ತದೆ. ನಾನು ತಪ್ಪು ಮಾಡಿಲ್ಲ ಎನ್ನುವ ಕಾರಣಕ್ಕೆ ಬಹಳ ಗಟ್ಟಿಯಾಗಿ ಅಷ್ಟೇ ಧೈರ್ಯದಿಂದ ತಲೆ ಎತ್ತಿಕೊಂಡು ಸಮಾಜದ ಮುಂದೆ ಬಂದಿದ್ದೇನೆ' ಎಂದರು.
'ನನ್ನ ಮೇಲೆ ಬಂದಿರುವ ಆರೋಪ ಸುಳ್ಳು ಎನ್ನುವುದನ್ನು ನಾನು ಕಾನೂನು ಹೋರಾಟದ ಮೂಲಕವೇ ಸಾಬೀತು ಮಾಡಿಕೊಳ್ಳುತ್ತೇನೆ. ದೇಶದಲ್ಲಿ ಜನ ಸಂಖ್ಯೆ ಹೆಚ್ಚಿರುವ ಕಾರಣ ಕಾನೂನು ಪ್ರಕ್ರಿಯೆ ತಡವಾಗಿರಬಹುದು. ಆದರೆ ನನಗೆ ವಿಶ್ವಾಸವಂತೂ ಇದೆ. ನನಗೆ ಅನ್ಯಾಯ ಆಗುವುದಿಲ್ಲ. ಕಾನೂನಿನಲ್ಲಿ ಅನ್ಯಾಯ ಆಗಲ್ಲ ಎನ್ನುವ ವಿಶ್ವಾಸ ಇದೆ. ಕೋರ್ಟ್ ನೋಡಿಕೊಳ್ಳಲಿ'ಎಂದಿದ್ದಾರೆ.
'ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ನಾನು ಸಂಪೂರ್ಣವಾಗಿ ತಲೆ ಬಾಗುತ್ತೇನೆ. ಬದುಕಿನ ಕೊನೆಯ ಕ್ಷಣದವರೆಗೂ ಅದಕ್ಕಾಗಿ ಹೋರಾಡುತ್ತೇನೆ. ನನ್ನ ಮೇಲೆ ಬಂದಿರುವ ಆರೋಪಗಳ ವಿರುದ್ಧ ಅಂದರೆ ಇದೊಂದು ಕೇಸ್ ಅಲ್ಲ, ಎಲ್ಲಾ ಕೇಸ್‌ಗಳ ವಿರುದ್ಧ ಹೋರಾಡುತ್ತೇನೆ. ಸಾಮಾಜಿಕ ಜೀವನದಲ್ಲಿ ಇರುವವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಡದೇ ಹೋದರೆ ಈ ಕ್ಷೇತ್ರದಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಕಾಯುವವನ ಮೇಲೆ ನಂಬಿಕೆ ಇಟ್ಟು, ಕಾನೂನಿನ ಮೇಲೆ ಗೌರವ ಇಟ್ಟು ಹೋರಾಟ ಮುಂದುವರಿಸುತ್ತೇನೆ. ನ್ಯಾಯಾಲಯ ಏನು ಹೇಳುತ್ತದೆ ಅದಕ್ಕೆ ಬದ್ಧಳಾಗಿದ್ದೇನೆ' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.












Click it and Unblock the Notifications