Rajath: ಬೇಲ್ ಸಿಕ್ಕಿದ್ರೂ ರಜತ್‌ಗೆ ನೆಮ್ದಿನೇ ಇಲ್ಲ, ಪೊಲೀಸರಿಂದ ಮತ್ತೊಂದು ಶಾಕ್
ಮಚ್ಚು ತೋರಿಸಿ ರೀಲ್ಸ್ ಮಾಡಿದ ಕೇಸ್‌ನಲ್ಲಿ ಬಿಗ್‌ಬಾಸ್ ಸ್ಪರ್ಧಿ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರು ಪರಪ್ಪನ ಅಗ್ರಹಾರದ ಜೈಲುವಾಸ ಮುಗಿಸಿ, ಬೇಲ್ ಮೇಲೆ ಹೊರಬಂದಿದ್ದಾರೆ. ರೀಲ್ಸ್ ಮಾಡಿದ ಎಡವಟ್ಟಿಗೆ ಪೊಲೀಸ್ ಠಾಣೆ ಮೆಟ್ಟಿಲೇರುವ ಹಂತ ತಲುಪಿ, ಕೊನೆಗೆ ಬಂಧನವೂ ಆಗಿ ಮೂರು ದಿನ ಕಸ್ಟಡಿಯಲ್ಲೂ ಇರಬೇಕಾಯಿತು. ಇನ್ನೇನು ಬೇಲ್ ಸಿಕ್ಕಿ ಹೊರಬಂದೆನಲ್ಲ ಎಂದು ರಿಲೀಫ್ ಆಗಿದ್ದ ರಜತ್‌ಗೆ ಇದೀಗ ಮತ್ತೊಂದು ದೊಡ್ಡ ಶಾಕ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ರಜತ್ ಕಿಶನ್ ಅವರು ಸದ್ಯ ಗರ್ಲ್ಸ್ ವರ್ಸಸ್ ಬಾಯ್ಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ವಿನಯ್ ಗೌಡ ಕೂಡ ಬಿಗ್‌ಬಾಸ್‌ನಿಂದಲೇ ಫೇಮಸ್ ಆಗಿದ್ದಾರೆ. ಇಬ್ಬರೂ ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಆದರೆ ವೆಪನ್ ಪ್ರದರ್ಶಿಸಿದ ಆರೋಪದ ಮೇರೆಗೆ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲಾಗಿ ಬಂಧಿಸಲಾಗಿತ್ತು. ಶನಿವಾರವಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಇಬ್ಬರೂ ರಿಲೀಸ್ ಆಗಿದ್ದರು. ಆಗಲೇ ರಜತ್‌ಗೆ ಶಾಕ್ ನೀಡಲು ಪೊಲೀಸರು ಮುಂದಾಗಿದ್ದಾರೆ.

ಹೌದು ವರದಿಗಳ ಪ್ರಕಾರ ರಜತ್ ಅವರ ಪೂರ್ವಾಪರದ ಮೇಲೆ ಪೊಲೀಸರು ಇದೀಗ ಹದ್ದಿನಗಣ್ಣಿಟ್ಟಿದ್ದು, ರಜತ್ ವಿರುದ್ಧ ಅಪರಾಧ ಹಿನ್ನೆಲೆ ಇದ್ದರೆ ಸದ್ಯದಲ್ಲೇ ರೌಡಿಶೀಟ್ ತೆರೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಸವೇಶ್ವರ ನಗರ ಪೊಲೀಸರು ರಜತ್ ವಿರುದ್ಧ ರೌಡಿಶೀಟರ್ ಪಟ್ಟಿ ಓಪನ್ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರೀಲ್ಸ್ ಕೇಸ್ ವಿಚಾರವಾಗಿ ರಜತ್ ಅವರ ವರ್ತನೆ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಹೀಗಾಗಿ ರಜತ್ ಅವರ ಹಿನ್ನೆಲೆ ಏನು ಎಂದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ರಜತ್ ಅವರ ಚಲವಲನ ಸೇರಿದಂತೆ ಅವರ ಅಪರಾಧ ಹಿನ್ನೆಲೆ ಏನಾದ್ರೂ ಇದ್ರೆ ಅದರ ಮಾಹಿತಿ ಕೂಡ ಸಂಗ್ರಹಿಸುತ್ತಿದ್ದಾರಂತೆ. ಒಂದು ವೇಳೆ ರಜತ್ ಅವರಿಗೆ ಅಪರಾಧದ ಹಿನ್ನೆಲೆ ಕಂಡುಬಂದರೆ ಅವರ ವಿರುದ್ಧ ರೌಡಿಶೀಟ್ ತೆರೆಯಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ರಜತ್ ರೌಡಿಶೀಟರ್ ಆಗುವ ಸಾಧ್ಯತೆಯೂ ಇದೆ. ಈ ಸಂಬಂಧ ಪೊಲೀಸರು ರಜತ್ ನೋಟಿಸ್ ಕೂಡ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ರಜತ್‌ಗೆ ಟೆನ್ಷನ್ ಶುರುವಾಗಿದೆ.

ಕ್ಷಮೆ ಕೇಳಿದ ವಿನಯ್ ಗೌಡ
ರೀಲ್ಸ್ ಕೇಸ್‌ನಲ್ಲಿ ಜೈಲಿನಿಂದ ರಿಲೀಸ್ ಬಳಿಕ ವಿಡಿಯೋದಲ್ಲಿ ಮಾತನಾಡಿದ್ದ ವಿನಯ್ ಗೌಡ ಅವರು, "ನನ್ನಿಂದ ತಪ್ಪಾಗಿ, ಮಾಡಬಾರದ್ದನ್ನ ಮಾಡಿದ್ದೇನೆ. ಮಚ್ಚು ಹಿಡಿದುಕೊಂಡು ಮಾಡಿರುವ ವಿಡಿಯೋದಿಂದ ಇಷ್ಟೆಲ್ಲ ತೊಂದರೆ ಆಯ್ತು. ನನಗೆ ನಿಜವಾಗಿಯೂ ಈ ಒಂದು ವಿಷಯ ಇಷ್ಟು ದೊಡ್ಡದಾಗಿ ಬೆಳೆಯುತ್ತೆ ಅಂದುಕೊಂಡಿರಲಿಲ್ಲ. ಇದರಲ್ಲೂ ನನ್ನದೂ ತಪ್ಪಿದೆ ಎಂದು ಕ್ಷಮೆ ಕೇಳಿದ್ದರು.
ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಿತ್ತು, ನನ್ನ ಫಾಲೋವರ್ಸ್‌ಗೆ ಇಂತಹ ಮಾಹಿತಿಯನ್ನ ಕೊಡಬಾರದಿತ್ತು. ಇದಕ್ಕಾಗಿ ದಯವಿಟ್ಟು ಕ್ಷಮಿಸಿ. ಪೊಲೀಸ್ ಇಲಾಖೆಯವರು ತಮ್ಮ ತನಿಖೆಯನ್ನ ಚೆನ್ನಾಗಿ ಮಾಡಿದ್ದಾರೆ. ಒಂದು ಸೆಲೆಬ್ರಿಟಿ ಹಾಗೂ ಸಾಮಾನ್ಯ ವ್ಯಕ್ತಿ ಅನ್ನೋ ವ್ಯತ್ಯಾಸವಿಲ್ಲದೆ ಕಾನೂನು ಪ್ರಕಾರವಾಗಿ ತನಿಖೆ ನಡೆಸಿದ್ದಾರೆ. ದಯವಿಟ್ಟು ಪೊಲೀಸರ ಮೇಲೆ ಯಾವುದೇ ಆರೋಪಗಳನ್ನ ಮಾಡಬೇಡದಂತೆ ವಿನಯ್ ಮನವಿ ಮಾಡಿದ್ದರು.












Click it and Unblock the Notifications