Bigg Boss Kannada 12: ಈ ಬಿಗ್‌ಬಾಸ್ ಸೀಸನ್ ನಡೆಯುವುದು ಎಲ್ಲಿ? ಹೊಸ ಜಾಗದ ಬಗ್ಗೆ ಬಿಗ್ ಅಪ್ಡೇಟ್
Bigg Boss Kannada Season 12: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕನ್ನಡ ಬಿಗ್‌ಬಾಸ್ ಸೀಸನ್-12ಕ್ಕೆ ಎಲ್ಲರೂ ಕಾತುರದಿಂದ ಕಾದಿದ್ದಾರೆ. ಪ್ರತಿ ಬಾರಿಯೂ ಈ ಶೋನಲ್ಲಿ ಏನಾದರೂ ಒಂದು ಹೊಸದು ಇದ್ದೇ ಇರುತ್ತೆ. ಅದರಂತೆ ಈ ಬಾರಿ ಕೂಡ ಮತ್ತೊಂದು ಹೊಸತನಕ್ಕೆ ಬಿಗ್‌ಬಾಸ್ ಮನೆ ಸಾಕ್ಷಿಯಾಗಲಿದೆ. ಮುಖ್ಯವಾಗಿ ಬಿಗ್‌ಬಾಸ್ ಮನೆಯ ಜಾಗ ಕೂಡ ಬದಲಾಗುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ರಿಯಾಲಿಟಿ ಶೋನ ಕೇಂದ್ರ ಬಿಂದು ಅಂದ್ರೆ ಅದು ಬಿಗ್‌ಬಾಸ್ ಮನೆ ಕೂಡ. ಹಾಗಾಗಿ ಈ ಬಾರಿ ಬಿಗ್‌ಬಾಸ್ ಮನೆ ಬೇರೆ ಕಡೆ ನಿರ್ಮಾಣವಾಗಲಿದೆ. ಅದು ಎಲ್ಲಿ? ಯಾಕೆ? ಎಂಬ ವಿವರ ಇಲ್ಲಿದೆ.
ಆರಂಭದಲ್ಲಿ ಮೊದಲಿಗೆ ಕನ್ನಡ ಬಿಗ್‌ಬಾಸ್‌ನ ಎರಡು ಸೀಸನ್ ಹೊರರಾಜ್ಯದ ಪುಣೆಯಲ್ಲಿ ನಡೆದಿತ್ತು. ಬಳಿಕ ಬೆಂಗಳೂರಿಗೆ ಸಮೀಪವಿರುವ ಬಿಡದಿ ಸಮೀಪದ ಇನ್ನೋವೇಟಿವ್ ಫಿಲ್ಮ್‌ಸಿಟಿಯಲ್ಲೇ ಹಲವು ಸೀಸನ್‌ಗಳು ಮುಂದುವರಿದಿದ್ದವು. ಇದಾದ ನಂತರ ಕಳೆದ ಕೆಲವು ಸೀಸನ್‌ಗಳಿಗೆ ದೊಡ್ಡ ಆಲದ ಮರ ಸಮೀಪ ಬಿಗ್‌ಬಾಸ್ ಮನೆ ನಿರ್ಮಿಸಲಾಗಿತ್ತು. ಪ್ರತಿ ವರ್ಷವೂ ವಿಭಿನ್ನ ಥೀಮ್ ಜೊತೆಗೆ ದೊಡ್ಮನೆಯನ್ನು ವಿನ್ಯಾಸ ಮಾಡಲಾಗುತ್ತಿದೆ. ಆದರೆ ಈ ಬಾರಿ ಕೂಡ ಮತ್ತೆ ಬಿಗ್‌ಬಾಸ್ ನಡೆಯುವ ಸ್ಥಳ ಬದಲಾವಣೆ ಫಿಕ್ಸ್ ಎಂದು ಹೇಳಲಾಗುತ್ತಿದೆ.

ಹೊಸ ಜಾಗ ಯಾವುದು?
ಸದ್ಯ ದೊಡ್ಡ ಆಲದ ಮರದ ಸಮೀಪದ ಜಾಗದಲ್ಲಿ ಬಿಗ್‌ಬಾಸ್ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ ಎರಡು ಮೂರು ಸೀಸನ್ ಇಲ್ಲೇ ಜರುಗಿತ್ತು. ಆದರೆ ಈ ಬಾರಿ ಅಲ್ಲಿ ಬಿಗ್‌ಬಾಸ್ ಮನೆ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಈ ಹಿಂದೆ ಇನ್ನೋವೇಟಿವ್ ಫಿಲ್ಮ್‌ಸಿಟಿಯಲ್ಲೇ ಹಲವು ಸೀಸನ್‌ಗಳು ನಡೆದಿದ್ದರಿಂದ ಅಲ್ಲಿಗೆ ಜನ ಕೂಡ ಹೆಚ್ಚಾಗಿ ಬರುತ್ತಿದ್ದರು. ಈ ಬಾರಿಯಿಂದ ಮತ್ತೆ ಇನ್ನೋವೇಟಿವ್ ಫಿಲ್ಮ್‌ಸಿಟಿಯಲ್ಲೇ ಬಿಗ್‌ಬಾಸ್ ಮನೆ ತಲೆ ಎತ್ತಲಿದೆ ಎಂದು ತಿಳಿದುಬಂದಿದೆ. ಹಳೆಯ ಜಾಗದಲ್ಲೇ ಹೊಸ ವಿನ್ಯಾಸದಲ್ಲಿ ಬಿಗ್‌ಬಾಸ್ ಸೀಸನ್-12ರ ಮನೆ ವಿನ್ಯಾಸಗೊಳ್ಳಲಿದೆ. ಈ ಮೂಲಕ ಬಿಗ್‌ಬಾಸ್ ಆಯೋಜಕರು ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ.
ಬಿಗ್‌ಬಾಸ್ ಸೀಸನ್ ಶುರುವಾಗುವ ಬಗ್ಗೆ ಇತ್ತೀಚೆಗಷ್ಟೇ ಆಯೋಜಕರು ಮಾಹಿತಿ ಹಂಚಿಕೊಂಡಿದ್ದರು. ರಿಯಾಲಿಟಿ ಶೋನಿಂದ ಹೊರನಡೆದಿದ್ದ ಕಿಚ್ಚ ಸುದೀಪ್ ಅವರನ್ನು ಮತ್ತೆ ಶೋಗೆ ವಾಪಸ್ ಕರೆತರುವಲ್ಲಿ ಆಯೋಜಕರು ಯಶಸ್ವಿಯಾಗಿದ್ದಾರೆ. ಅದರಂತೆ ಈ ಸೀಸನ್ ಮಾತ್ರವಲ್ಲದೇ ಮುಂದಿನ ಹಲವು ಸೀಸನ್‌ಗಳನ್ನು ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಫಿಕ್ಸ್ ಆಗಿದೆ. ಇದರಿಂದ ಬಿಗ್‌ಬಾಸ್ ಪ್ರೇಕ್ಷಕರಿಗೆ ಇದ್ದ ಗೊಂದಲವೂ ನಿವಾರಣೆಯಾಗಿದೆ.

ಈ ಬಾರಿ ಯಾರೆಲ್ಲ ಬಿಗ್‌ಬಾಸ್ ಮನೆ ಸೇರಲಿದ್ದಾರೆ? ಎಂಬ ಚರ್ಚೆಗಳು ಕೂಡ ಜೋರಾಗಿವೆ. ಈಗಾಗಲೇ ಹಲವು ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಸ್ಟಾರ್‌ಗಳು, ಕಾಂಟ್ರವರ್ಸಿ ಮಾಡಿಕೊಂಡಿದ್ದವರು ಹೆಸರುಗಳು ಮುನ್ನೆಲೆಗೆ ಬಂದಿವೆ. ಇದೆಲ್ಲವೂ ಇನ್ನೂ ಗಾಳಿಸುದ್ದಿಯೇ ಆಗಿದ್ದು, ಅಸಲಿ ಆಟಗಾರರು ಯಾರು ಎಂದು ಬಿಗ್‌ಬಾಸ್ ಇನ್ನೂ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಕಿರುತೆರೆ ನಟ ನಟಿಯರು, ಹಿರಿಯ ಸೆಲೆಬ್ರಿಟಿಗಳು, ರೀಲ್ಸ್‌ನಲ್ಲಿ ಮಿಂಚುತ್ತಿರುವ ಅನೇಕರ ಹೆಸರಂತೂ ಚಾಲ್ತಿಯಲ್ಲಿದೆ. ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.












Click it and Unblock the Notifications