Bigg Boss Kannada 12: ಶೋ ಆರಂಭಕ್ಕೂ ಮುನ್ನವೇ ಬಿಗ್ ಬಾಸ್ ಮನೆಗೆ ಬಾಂಬ್ ಬೆದರಿಕೆ!
ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇವೆ. ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್‌ಗೆ ಅದ್ಧೂರಿ ವೇದಿಕೆ ಸಜ್ಜಾಗಿದೆ. ಈ ಸೀಸನ್‌ಗಾಗಿ ವೈಭವವಾದ ಮನೆ ಕೂಡ ರೆಡಿಯಾಗಿದ್ದು, ಇದರ ವಿಡಿಯೋವನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಶೋ ಆರಂಭಕ್ಕೂ ಮುನ್ನವೇ ಬಿಗ್‌ಬಾಸ್‌ಗೆ ವಿಘ್ನ ಎದುರಾಗಿದ್ದು, ಬಿಗ್‌ಬಾಸ್ ಮನೆಗೆ ಬಾಂಬ್ ಸ್ಫೋಟಿಸುವ ಬೆದರಿಕೆ ಬಂದಿದೆ.
ಹೌದು, ಬಿಗ್‌ಬಾಸ್ ಮನೆಗೆ ಬಾಂಬ್ ಇಡುವುದಾಗಿ ಯುವಕ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ಕೇಳಿ ಬಿಗ್‌ಬಾಸ್ ಪ್ರೇಕ್ಷಕರು ಆತಂಕಕ್ಕೂ ಒಳಗಾಗಿದ್ದಾರೆ. ಸಾಮಾನ್ಯವಾಗಿ ಅನಾಮಧೇಯ ವ್ಯಕ್ತಿಗಳಿಂದ ಬಾಂಬ್ ಬೆದರಿಕೆ ಕರೆಗಳು ಬರುತ್ತವೆ. ಆದರೆ ಯುವಕನೊಬ್ಬ ಬಹಿರಂಗವಾಗಿ ಬಿಗ್‌ಬಾಸ್ ಮನೆಗೆ ಬಾಂಬ್ ಇಡುವುದಾಗಿ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಿ ಶೇರ್ ಮಾಡಿದ್ದಾನೆ.
ಬಿಗ್‌ಬಾಸ್ ಸೀಸನ್ ಶುರುವಾಗುತ್ತಿರುವುದರಿಂದ ಹಲವರಿಗೆ ಸ್ಪರ್ಧಿಯಾಗಿ ಹೋಗಬೇಕು, ಶೋನಲ್ಲಿ ಮಿಂಚಬೇಕು, ಜನ ತಮ್ಮನ್ನ ಗುರುತಿಸಬೇಕು ಎಂಬ ಕನಸು ಕಾಣುವುದು ಕಾಮನ್. ಆದರೆ ಯುವಕನೊಬ್ಬ ನೇರವಾಗಿ ಬಿಗ್‌ಬಾಸ್ ಆಯೋಜಕರಿಗೆ ವಾರ್ನಿಂಗ್ ನೀಡಿದ್ದಾನೆ. "ಈ ಸಲ ನನ್ನ ಬಿಗ್‌ಬಾಸ್‌ಗೆ ಕರೆಸಿಲ್ಲ ಅಂದ್ರೆ ಬಾಂಬ್ ಇಟ್ಟು ಬಿಗ್‌ಬಾಸ್‌ನೆ ಹೋಗಿಸಿಬಿಡ್ತೀನಿ" ಎಂದು ಹುಚ್ಚಾಟ ಮೆರೆದಿದ್ದಾನೆ. ಈ ರೀಲ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಆತಂಕಕ್ಕೂ ಒಳಗಾಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಲೈಕ್, ವೀವ್ಸ್‌ಗಾಗಿ ಯುವಕ ಈ ರೀತಿ ಹುಚ್ಚಾಟ ಮೆರೆದಿದ್ದಾನೆ. ಬಿಗ್‌ಬಾಸ್ ನಡೆಯುವ ಸ್ಥಳಕ್ಕೆ ಹೋಗಿ ಗೇಟ್ ಬಳಿಯೇ ಈ ವಿಡಿಯೋ ಮಾಡಿದ್ದಾನೆ. ಅಲ್ಲದೆ ನೇರವಾಗಿ ಬಾಂಬ್ ಬೆದರಿಕೆ ಹಾಕಿರುವ ಕಾರಣ ತಕ್ಕ ಶಾಸ್ತಿಯೂ ಆಗಿದೆ. ಇನ್‌ಸ್ಟಾಗ್ರಾಂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದು, ಆ ಯುವಕನನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿಗರೇ ಗಮನಿಸಿ, ಆನ್‌ಲೈನ್‌ನಲ್ಲಿ ಮಾಡಿದ ಬೆದರಿಕೆಯನ್ನು ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಟೈಪ್ ಮಾಡುವ ಮೊದಲು ಯೋಚಿಸಿ. ಏಕೆಂದರೆ ನಿಮ್ಮ ಪೋಸ್ಟ್‌ಗಳು ನಿಮ್ಮನ್ನು ಜೈಲಿಗೆ ಕಳುಹಿಸಬಹುದು ಎಂದು ಬೆಂಗಳೂರು ಪೊಲೀಸರು ತಮ್ಮದೇ ಸ್ಟೈಲಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಈ ಬಾರಿ ಅದ್ಧೂರಿ ಬಿಗ್‌ಬಾಸ್ ಮನೆ
ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕಾಗಿ ಈ ಬಾರಿಯೂ ಅದ್ಧೂರಿಯಾದ ಮನೆ ನಿರ್ಮಾಣ ಮಾಡಲಾಗಿದೆ. ಈ ಬಾರಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಥೀಮ್‌ನಲ್ಲಿ ಮನೆ ವಿನ್ಯಾಸ ಮಾಡಲಾಗಿದೆ. ಕರುನಾಡನ್ನು ಬಿಂಬಿಸುವ ಬಿಗ್‌ಬಾಸ್ ಅರಮನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಧಿಪತಿ ಎಂದು ಪ್ರೋಮೋದಲ್ಲಿ ತಿಳಿಸಿದೆ. ಶ್ರೀಮಂತವಾಗಿರುವ ನಮ್ಮ ಕರ್ನಾಟಕವನ್ನು ಒಂದೇ ಜಾಗದಲ್ಲಿ ಚಿತ್ರಿಸಿದರೆ, ಹೀಗಿರುತ್ತೆ. ಒಂದು ಅರಮನೆಯನ್ನ ಉಳಿಸಿಕೊಳ್ಳೋಕೆ ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನ ತಾವು ಉಳಿಸಿಕೊಳ್ಳೋಕೆ ಬಹಳ ಯುದ್ಧಗಳು ನಡೆಯುತ್ತೆ. ದಸರಾ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್‌ಬಾಸ್ ಮನೆಯ ಅಸಲಿ ಹಬ್ಬ ಇವಾಗ ಶುರು ಎಂದು ಸುದೀಪ್ ಹೇಳಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಭದ್ರತೆಗೂ ಆದ್ಯತೆ ನೀಡಲಾಗಿದೆ.












Click it and Unblock the Notifications