Bigg Boss: ನಾಮಿನೇಷನ್‌ಗಾಗಿ ಎರಡನೇ ಹೆಸರು ಹೇಳಲು ಹೆದರಿದ ಹನುಮಂತ!
ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಜಗಳ ಗಲಾಟೆ ಶುರುವಾಗಿದೆ. ಇದಕ್ಕೆ ಕಾರಣ ನಾಮಿನೇಷನ್ ಪ್ರಕ್ರಿಯೆ. ಕಳೆದ ದಿನ ದೊಡ್ಮನೆಯ ಸ್ಪರ್ಧಿಗಳಲ್ಲಿ ಕೆಲವರು ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆದವರು ನಾಮಿನೇಷನ್ ಮಾಡಿದವರ ವಿರುದ್ಧ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಹನುಮಂತ ಮನೆಯ ಇಬ್ಬರು ಸದಸ್ಯರ ಹೆಸರನ್ನು ಹೇಳಲು ತುಂಬಾ ಕಷ್ಟಪಟ್ಟಿರುವುದು ಕಂಡು ಬಂದಿದೆ.
ಬಿಗ್‌ಬಾಸ್ ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಇಬ್ಬರು ಸದಸ್ಯರ ಹೆಸರನ್ನು ಸೂಕ್ತ ಕಾರಣಗಳೊಂದಿಗೆ ತಿಳಿಸಲು ಹನುಮಂತ ಅವರಿಗೆ ಬಿಗ್‌ಬಾಸ್ ಕೇಳುತ್ತಾರೆ. ಆದರೆ ವೈಲ್ಡ್‌ಕಾರ್ಡ್ ಎಂಟ್ರಿ ಆಗಿರುವ ಹನುಮಂತ ಅವರು ಇಬ್ಬರು ಸದಸ್ಯರ ಹೆಸರು ಹೇಳಲು ಪೇಚಾಡಿದ್ದಾರೆ. ನನ್ನೊಂದಿಗೆ ಎಲ್ಲರೂ ಚೆನ್ನಾಗಿದ್ದಾರೆ ನಾನು ಯಾರ ಹೆಸರು ಹೇಳಲಿ ಅಂತ ಹನುಮಂತ ಬಿಗ್‌ಬಾಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಆದರೆ ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯನ್ನು ಈ ಮನೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಡಲೇಬೇಕು ಎಂದಾಗ ಹನುಮಂತು ಹಂಸ ಅವರ ಹೆಸರನ್ನು ಹೇಳಿದ್ದಾರೆ. ಬಿಗ್‌ಬಾಸ್ ಎರಡನೇ ಹೆಸರು ಹೇಳಿದಾಗ ಹನುಮಂತ ಅವರ ಎರಡನೇ ಸದಸ್ಯರ ಹೆಸರು ಹೇಳಲು ಹೆದರಿಕೊಂಡಿರುವುದು ಕಂಡುಬಂದಿದೆ.
ಎರಡನೇ ಹೆಸರು ಹೇಳಲು ಹೆದರಿದ ಹನುಮಂತು!
ಹೌದು... ಹನುಮಂತ ಅವರು ನಾಮಿನೇಷನ್ ಮಾಡಲು ತುಂಬಾ ಪೇಚಾಡಿದ್ದು ಕಂಡು ಬಂದಿದೆ. ಹನುಮಂತ ಅವರು ಎಲ್ಲಾ ಸ್ಪರ್ಧಿಗಳು ನನ್ನೊಂದಿಗೆ ಚೆನ್ನಾಗಿದ್ದಾರೆ ಬಿಗ್‌ಬಾಸ್, ಅಲ್ಲದೆ ಅವರೆಲ್ಲಾ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ನಾನು ಯಾರ ಹೆಸರು ಹೇಳಲಿ ಅಂತ ಸುಮ್ಮನೆ ಕುಳಿತುಬಿಟ್ಟರು. ಆದರೆ ಬಿಗ್‌ಬಾಸ್ ಇನ್ನೊಬ್ಬರ ಹೆಸರು ಹೇಳಲೇ ಬೇಕು ಅಂತ ಕೇಳಿದಾಗ ಹನುಮಂತ ಅವರು ಗೋಲ್ಡ್ ಸುರೇಶ್ ಅವರ ಹೆಸರು ಹೇಳಿದ್ದಾರೆ.
ಆದರೆ ಈ ಹೆಸರು ಹೇಳುವ ಮೊದಲು ಹನುಮಂತ ಅವರು ನನ್ನ ಹೆಸರೇ ನಾನು ಹೇಳಿಕೊಳ್ಳುತ್ತೇನೆ ಅಂತ ಬಿಗ್‌ಬಾಸ್‌ಗೆ ತಿಳಿಸುತ್ತಾರೆ. 'ಎರಡನೇ ಆಯ್ಕೆ ನಾನೇ ರೀ.. ಯಾಕೆಂದರೆ ನಾನ್ ಬರೋದಾ ನಿನ್ನೆ ಬಂದಿನಿ. ನನಗಿಂತ ಮುಂಚೆ ಬಂದವರು ಅವರೆಲ್ಲಾ. ಅವರು ತುಂಬಾ ಚಂದ ಆಟ ಆಡ್ಲಿಕತ್ಯಾರಾ. ನನ್ನೊಂದಿಗೂ ಚೊಲೋ ಇದಾರ ರೀ.. 'ಅಂತ ಹನುಮಂತ ಹೇಳುತ್ತಾರೆ. ಆದರೆ ಬಿಗ್‌ಬಾಸ್ ಇದಕ್ಕೆ ಒಪ್ಪುವುದಿಲ್ಲ. ಕೊನೆಗೆ ಹನುಮಂತು ಬೇರೆ ವಿಧಿಯಿಲ್ಲದೆ ತುಂಬಾ ಕಷ್ಟಪಟ್ಟು ಗೋಲ್ಡ್ ಸುರೇಶ್ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ.

ಕಣ್ಣೀರು ಹಾಕಿದ ಹನುಮಂತ
ಇಬ್ಬರು ಹೆಸರನ್ನು ಹೇಳಿದ ಬಳಿಕ ಹನುಮಂತ ಅವರು ಮಾನಸ ಮುಂದೆ ಕಣ್ಣೀರು ಹಾಕಿದ್ದಾರೆ. ಬೇಸರದಿಂದ ಕುಳಿತ ಹನುಮಂತ ಅವರನ್ನು ಮಾನಸ ಮಾತನಾಡಿಸುತ್ತಾರೆ. ಒಬ್ಬರೆ ಕುಳಿತಿರುವುದಕ್ಕೆ ಕಾರಣವನ್ನೂ ಕೇಳುತ್ತಾರೆ. ಆಗ ಹನುಮಂತ ಭಾವುಕರಾಗಿರುವುದು ಕಂಡು ಬಂದಿದೆ. ಆಗ ಮಾನಸ ಹನುಮಂತ ಅವರಿಗೆ ಸಮಾಧಾನ ಮಾಡುತ್ತಾರೆ.
'ಕಣ್ಣೀರು ಹಾಕಿದರೆ ಇಲ್ಲಿ ನಡೆಯೋದಿಲ್ಲ. ನಾವು ಯಾರನ್ನೂ ನಂಬಬಾರದು. ನಂಬಿಕೊಂಡರೆ ಪಕ್ಕಾ ಹೊಗೆನೇ' ಅಂತೆಲ್ಲಾ ಮಾನಸ ಅವರು ಹನುಮಂತ ಅವರನ್ನು ಸಮಾಧಾನ ಪಡಿಸುತ್ತಾರೆ. ಮಾನಸ ಮಾತನಾಡುವಾಗ ಮೌನವಾಗಿದ್ದ ಹನುಮಂತು ಕಣ್ಣಲ್ಲಿ ನೀರು ಹಾಗೇ ಸುರಿಯುತ್ತಿತ್ತು.
ಬಿಗ್‌ಬಾಸ್ ಮನೆಗೆ ಎಂಟ್ರಿಯೊಂದಿಗೆ ಕ್ಯಾಪ್ಟನ್ ಆದ ಹನುಮಂತ
ಕಳೆದ ವಾರ ಡಬಲ್ ಎಲಿಮಿನೇಷನ್ ಬೆನ್ನಲ್ಲೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 'ಸರಿಗಮಪ' ಖ್ಯಾತಿಯ ಹನುಮಂತ ಬಿಗ್‌ಬಾಸ್ ಮನೆ ಪ್ರವೇಶಿದ್ದಾರೆ. ಜೀ ಕನ್ನಡ ರಿಯಾಲಿಟಿ ಶೋ ಸರಿಗಮಪ ಸೀಸನ್ 15ರಲ್ಲಿ ಭಾಗವಹಿಸಿ ಭಾರಿ ಜನಪ್ರಿಯತೆ ಗಳಿಸಿದ್ದ ಹನುಮಂತ ಅವರು ಮೂಲತ: ಹಾವೇರಿ ಜಿಲ್ಲೆಯವರು.
ಬಿಗ್‌ಬಾಸ್ ಮನೆಯಲ್ಲಿ ಹನುಮಂತ ತಮ್ಮ ಮುಗ್ಧತೆ ಮತ್ತು ಲಘು ಹಾಸ್ಯದ ಮೂಲಕ ಇತರ ಸ್ಪರ್ಧಿಗಳ ಮನಸ್ಸು ಗೆದ್ದಿದ್ದಾರೆ. ಹನುಮಂತ ಅವರನ್ನು ಈ ವಾರ ಕ್ಯಾಪ್ಟನ್ ಆಗಿ ಬಿಗ್‌ಬಾಸ್ ಹೆಸರಿಸಿದೆ. ಹಿಂದಿನ ಎರಡು ವಾರದಲ್ಲಿ ಹಂಸ ಮತ್ತು ಶಿಶಿರ್ ಕ್ಯಾಪ್ಟನ್ ಆಗಿದ್ದರು. ಆದರೀಗ ಮನೆಯೊಳಗೆ ಆಗಮಿಸಿ ದಿನವೇ ಹನುಮಂತ ಅವರು ಕ್ಯಾಪ್ಟನ್ ಆಗಿದ್ದು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಜಗಳ, ಗಲಾಟೆ ನೋಡಿದ ಹನುಮಂತ ಅವರಿಗೆ ಬಿಗ್‌ಬಾಸ್ ಮನೆಯಲ್ಲಿ ಇರುವುದೇ ಕಷ್ಟವಾಗಿ ಹೋಗಿರುವಂತೆ ಕಾಣಿಸುತ್ತಿದೆ.












Click it and Unblock the Notifications