Bigg Boss: ಕಿಚ್ಚ ಸುದೀಪ್‌ರ ವಿಶೇಷ ಉಡುಗೊರೆಗೆ ಮನಸೋತ ಬಿಗ್ ಬಾಸ್ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ಈ ವಾರ ಪೂರ್ತಿ ಫ್ಯಾಮಿಲಿ ಡ್ರಾಮಾ ನಡೆದಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಭೇಟಿ ನೀಡಿ ಒಂದು ದಿನ ಕಳೆದಿದ್ದಾರೆ. 90 ದಿನ ಮನೆಯವರನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮ ಮನೆಯವರನ್ನು ನೋಡಿ ಖುಷಿಯಾಗಿದ್ದಾರೆ. ಸ್ಪರ್ಧಿಗಳ ಉತ್ಸಾಹ ಡಬಲ್ ಆಗಿದ್ದು ಮುಂದಿನ ಆಟಗಳಲ್ಲಿ ಭಾರಿ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಮನೆಯವರನ್ನು ನೋಡಿ ಮನೆಯವರ ಕೈತುತ್ತು ತಿಂದ ಖುಷಿಯಲ್ಲಿದ್ದ ಸ್ಪರ್ಧಿಗಳಿಗೆ ಶುಕ್ರವಾರ ಡಬಲ್ ಖುಷಿ ಸಿಕ್ಕಿದೆ. ಸ್ಪರ್ಧಿಗಳಿಗಾಗಿ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ವಿಶೇಷ ಸಂದೇಶಗಳನ್ನು ಕಳಿಸಿದ್ದಾರೆ. ಅದರ ಜೊತೆಗೆ ಪ್ರತಿಯೊಬ್ಬರಿಗಾಗಿ ವಿಶೇಷ ಅಡುಗೆ ಮಾಡಿ ಕಳಿಸಿದ್ದಾರೆ.

ಪ್ರತಿಯೊಬ್ಬ ಸ್ಪರ್ಧಿಗೂ ಸುದೀಪ್ ಸಂದೇಶ ಕಳಿಸಿದ್ದು ಅವರು ಯಾವುದರಲ್ಲಿ ಸುಧಾರಿಸಬೇಕು ಎನ್ನುವುದನ್ನು ಸೂಚ್ಯವಾಗಿ ತಿಳಿಸಿ ಉತ್ಸಾಹ ತುಂಬಿದ್ದಾರೆ. ಎಲ್ಲರೂ ತಮಗಾಗಿ ಸುದೀಪ್ ಬರೆದ ಪತ್ರವನ್ನು ಓದಿ ಖುಷಿಯಾಗಿದ್ದು ತಪ್ಪು ತಿದ್ದಿಕೊಂಡು ಉತ್ತಮವಾಗಿ ಆಡುವುದಾಗಿ ಸುದೀಪ್‌ಗೆ ಭರವಸೆ ನೀಡಿದ್ದಾರೆ.
ಅಡುಗೆ ಮಾಡಿ ಕಳಿಸಿದ ಕಿಚ್ಚ
ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ಕಿಚ್ಚ ಸುದೀಪ್ ವಿಶೇಷವಾಗಿ ಅಡುಗೆ ಮಾಡಿ ಕಳಿಸಿದ್ದಾರೆ. ಎಲ್ಲರಿಗೂ ಪ್ರತ್ಯಕೇವಾಗಿ ಊಟವನ್ನು ಪ್ಯಾಕ್ ಮಾಡಿದ್ದು ಅದರ ಮೇಲೆ ಯಾರ ಊಟ ಎಂದು ಹೆಸರು ಕೂಡ ಬರೆಯಲಾಗಿತ್ತು. ಎಲ್ಲರೂ ಊಟವನ್ನು ಕಂಡು ಸಖತ್ ಖುಷಿಯಾದರು. ಬಿಗ್ ಬಾಸ್ ಮನೆಗೆ ಬಂದಿದ್ದಕ್ಕೆ ಸಾರ್ಥಕವಾಯಿತು ಎಂದರು.
ಸುದೀಪ್‌ರ ಪ್ರೀತಿಗೆ ರಜತ್ ಮಾರುಹೋಗಿದ್ದು ಇದನ್ನೆಲ್ಲಾ ಮಾಡಲು ನಿಮ್ಮಿಂದ ಮಾತ್ರ ಸಾಧ್ಯ, ಬಿಗ್ ಬಾಸ್ ಮುಗಿದ ಬಳಿಕವೂ ನಿಮ್ಮ ಮೇಲಿನ ಅಭಿಮಾನ, ಒಡನಾಟ ಹೀಗೆ ಇರಬೇಕು ಎಂದು ಮನವಿ ಮಾಡಿದರು.
ಈ ವಾರ ರಜತ್ ಕ್ಯಾಪ್ಟನ್
ಈ ವಾರದ ಕ್ಯಾಪ್ಟನ್ಸಿ ಆಟದಲ್ಲಿ ರಜತ್ ಗೆಲುವು ಸಾಧಿಸಿದ್ದು ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ಇದೇ ಮೊದಲ ಬಾರಿಗೆ ರಜತ್ ಮನೆಯ ಕ್ಯಾಪ್ಟನ್ ಆಗಿದ್ದು ಸಂಭ್ರಮಿಸಿದ್ದಾರೆ. ತಮ್ಮ ನೇರವಾದ ಮಾತುಗಳಿಗೆ ಹೆಸರಾಗಿರುವ ರಜತ್ ಈ ವಾರ ನಾಯಕತ್ವ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಿಗೆ ಇದೆ.
ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತೆ ಎನ್ನುವ ಕುತೂಹಲ ಒಂದು ಕಡೆಯಾದರೆ, ಈ ವಾರ ಎಲಿಮಿನೇಷನ್ ಆಗುವುದು ಯಾರು ಎನ್ನುವ ಕುತೂಹಲ ಕೂಡ ಹೆಚ್ಚಾಗಿದೆ. ಫಿನಾಲೆಗೆ ದಿನ ಹತ್ತಿರವಾದಂತೆ ಆಟದ ತೀವ್ರತೆ ಕೂಡ ಬಿರುಸಾಗಿದ್ದು ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.












Click it and Unblock the Notifications