ಈ ಸಿನಿಮಾದಿಂದ ಕರ್ನಾಟಕದಲ್ಲಿ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹೆಚ್ಚಳ: ಜಿ. ಪರಮೇಶ್ವರ್!
ಕರ್ನಾಟಕದಲ್ಲಿ ಡ್ರಗ್ಸ್ ಸೇವಿಸುವವರ ಅಥವಾ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಇದೀಗ ಕರ್ನಾಟಕದಲ್ಲಿ ಡ್ರಗ್ಸ್ ಹೆಚ್ಚಳಕ್ಕೆ ಕನ್ನಡದಲ್ಲಿ ಈಚೆಗೆ ಸೂಪರ್ ಡೂಪರ್ ಹಿಟ್ ಆಗಿರುವ ಆ ಸಿನಿಮಾ ಸಹ ಕಾರಣವಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಆ ಸಿನಿಮಾವನ್ನು ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾಡಲಾಗಿತ್ತು. ಆದರೆ, ಆ ಸಿನಿಮಾದಿಂದ ರಿವರ್ಸ್ ಗೇರ್‌ನಂತೆ ರಿವರ್ಸ್ ಮೆಸೇಜ್ ಹೋಗಿದೆ ಎಂದು ಅವರು ಸಿನಿಮಾವೊಂದರ ಪ್ರಮೋಷನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಡ್ರಗ್ಸ್ ಹಾಗೂ ಸಿನಿಮಾದ ಬಗ್ಗೆ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡ್ರಗ್ಸ್ ಸೇವಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎನ್ನುವ ಆರೋಪ ಇದೆ. ಅದರಲ್ಲೂ ಯುವಕರು ಹೆಚ್ಚು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಆರೋಪಗಳು ಇವೆ. ಬೆಂಗಳೂರಿನಲ್ಲಿ ಯುವಕರು ಅತಿ ಹೆಚ್ಚಿನ ಸಂಖ್ಯೆ ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ವಿಡಿಯೋಗಳು ವೈರಲ್ ಆಗುತ್ತಿವೆ. ಇದರ ನಡುವೆಯೇ ಜಿ ಪರಮೇಶ್ವರ್ ಅವರು ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಅವರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಸಿನಿಮಾವೊಂದರ ಪ್ರಮೋಷನ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಿ. ಪರಮೇಶ್ವರ್ ಅವರು, ಆ ಒಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿತ್ತು. ಅವರು ಡ್ರಗ್ಸ್ ಬಗ್ಗೆ ಮಾಡಿದ್ದಾರೆ. ನಾನು ಗೃಹ ಸಚಿವನಾಗಿ ಕರ್ನಾಟಕದಲ್ಲಿ ಡ್ರಗ್ಸ್ ಮುಕ್ತವಾಗಿಸುವುದಕ್ಕೆ ಪಣ ತೊಟ್ಟಿದ್ದೇನೆ. ಕರ್ನಾಟಕ ಸರ್ಕಾರವು ಸಹ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಡ್ರಗ್ಸ್‌ನ ವಿರುದ್ಧ ನಾವು ಯದ್ಧ ಘೋಷಿಸಿದ್ದೇವೆ. ಆದರೆ, ಆ ಸಿನಿಮಾ ನೋಡಿದ ಮೇಲೆ ಡ್ರಗ್ಸ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ. ಕನ್ನಡದ ಸಿನಿಮಾದಿಂದ ಉಲ್ಟಾ ಮೆಸೇಜ್ ಹೋಗಿದೆ ಎಂದು ಅವರು ಹೇಳಿದ್ದಾರೆ.
ಯುವಜನರ ಮೇಲೆ ಸಿನಿಮಾಗಳು ಈ ರೀತಿ ಇಂಪ್ಯಾಕ್ಟ್ ಆಗಬಾರದು. ಸಮಾಜಕ್ಕೆ ಹಾಗೂ ಯುವಕರ ಮೇಲೆ ಈ ರೀತಿಯ ಸಿನಿಮಾಗಳು ಪರಿಣಾಮ ಬೀರಬಾರದು. ಈ ರೀತಿಯ ಸಿನಿಮಾಗಳನ್ನು ಮಾಡುವಾಗ ನೋಡಿಕೊಳ್ಳಬೇಕು. ಮುಖ್ಯವಾಗಿ ಸಿನಿಮಾಗಳ ಮೂಲಕ ಯಾವ ರೀತಿಯ ಮೆಸೇಜ್ ಹೋಗುತ್ತದೆ ಎನ್ನುವುದನ್ನು ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಭೀಮ ಸಿನಿಮಾ ಬಗ್ಗೆ ಹೇಳಿದರೇ ?
ಇನ್ನು ಜಿ. ಪರಮೇಶ್ವರ್ ಅವರು ಭೀಮ ಸಿನಿಮಾದ ಬಗ್ಗೆ ಮಾತನಾಡಿದರೇ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಹಲವರು ಇದೇ ಸಿನಿಮಾವನ್ನು ಉಲ್ಲೇಖ ಮಾಡಿ ಅವರು ಮಾತನಾಡಿದ್ದಾರೆ ಎಂದು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಭೀಮ ಸಿನಿಮಾದಲ್ಲಿ ಬೆಂಗಳೂರಿನ ಗಾಂಜಾ ಮಾರಾಟ ಜಾಲದ ಬಗ್ಗೆ ತೋರಿಸಲಾಗಿತ್ತು. ಈ ಜಾಲಕ್ಕೆ ಸ್ಲಂ ಹುಡುಗರನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ಈ ಸಿನಿಮಾದ ಕಥೆಯಾಗಿತ್ತು. ಪರಮೇಶ್ವರ್ ಅವರು ಇದೇ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಪರಮೇಶ್ವರ್ ಅವರು ವಿಡಿಯೋದಲ್ಲಿ ಯಾವುದೇ ಸಿನಿಮಾದ ಹೆಸರು ಉಲ್ಲೇಖ ಮಾಡಿಲ್ಲ.












Click it and Unblock the Notifications